ಸಮುದ್ರದಲ್ಲಿ ಮುಳುಗುತ್ತಿದ್ದ ವ್ಯಕ್ತಿ ರಕ್ಷಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ
ಭಟ್ಕಳ : ಸಾರ್ವಜನಿಕ ಗಣಪತಿ ಮೂರ್ತಿಯನ್ನು ಸಮುದ್ರದಲ್ಲಿ ವಿಸರ್ಜಿಸುವ ವೇಳೆ ಅಲೆಗೆ ಕೊಚ್ಚಿಹೋದ ಬಾಲಕನನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತಾಲೂಕಿನ ತಲಗೋಡಿನಲ್ಲಿ ನಡೆದಿದೆ.
ತಲಗೋಡು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನ ಬೀಳ್ಕೊಡುವ ವೇಳೆ ಈ ಅವಘಡ ಸಂಭವಿಸಿದೆ. ಸಮರ್ಥ ಶ್ರೀಧರ ಖಾರ್ವಿ (14) ರಕ್ಷಣೆಯಾದ ಬಾಲಕನಾಗಿದ್ದಾನೆ. ಈತ ಬಂದರಿನ ನಿವಾಸಿ. ಭಾನುವಾರ ಸಂಜೆ ಮೂರ್ತಿ ವಿಸರ್ಜನೆ ವೇಳೆ ತಲಗೋಡು ಸಮುದ್ರದಲ್ಲಿ ಅಲೆಗೆ ಕೊಚ್ಚಿ ಹೋಗುತ್ತಿದ್ದ. ಇದೇ ವೇಳೆ ಕರ್ತವ್ಯದಲ್ಲಿದ್ದ ಕರಾವಳಿ ಕಾವಲು ಪಡೆಯ ಸಿಪಿಐ ಕುಸುಮಧರ ಕೆ ಮಾರ್ಗದರ್ಶನದಲ್ಲಿ ಕೆ ಎನ್ಡಿ ಸಿಬ್ಬಂದಿ ರಾಘವೇಂದ್ರ ನಾಯ್ಕ, ಸಚಿನ ಖಾರ್ವಿ ತಮ್ಮ ಜೀವದ ಹಂಗು ತೊರೆದು ಸಮುದ್ರಕ್ಕೆ ಧುಮುಕಿ ಈಜಿ ಜೀವ ಕಾಪಾಡಿದ್ದಾರೆ.
ಕರಾವಳಿ ಕಾವಲು ಪಡೆಯ ಪೊಲೀಸರ ಸಾಹಸ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಅಸ್ವಸ್ತ ಬಾಲಕನಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.