ಉ.ಪ್ರದೇಶ: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಾಗಿ ಯತಿ ನರಸಿಂಹಾನಂದ ಬಂಧನ

Source: Vb | By I.G. Bhatkali | Published on 6th October 2024, 7:12 AM | National News |

ಲಕ್ನೋ: ಪ್ರವಾದಿ ಮುಹಮ್ಮದ್ ಮತ್ತು ಕುರ್‌ಆನ್ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಗಾಝಿಯಾಬಾದ್‌ ಪ್ರಸಿದ್ಧ ದಾಸ್ನಾ ದೇವಸ್ಥಾನದ ಪೀಠಾಧೀಶ್ವರ ಯತಿ ನರಸಿಂಹಾನಂದ ಮಹಾರಾಜ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನರಸಿಂಹಾನಂದ ಹೇಳಿಕೆಗಳನ್ನು ಖಂಡಿಸಿ ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಹಲವಾರು ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ್ದರು.

ಬಂಧಿತ ನರಸಿಂಹಾನಂದರನ್ನು ಗಾಝಿಯಾ ಬಾದ್‌ನ ಪೊಲೀಸ್‌ ಲೈನ್ಸ್‌ನಲ್ಲಿ ಇರಿಸಲಾಗಿದೆ ಎಂದು ಬಲ್ಲಮೂಲಗಳು ತಿಳಿಸಿವೆ. ನರಸಿಂಹಾನಂದ ವಿರುದ್ದ ಈವರೆಗೆ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಈ ಮೂಲಗಳು ಹೇಳಿವೆ. ಶುಕ್ರವಾರ ರಾತ್ರಿ ಉ.ಪ್ರದೇಶದ ಬುಲಂದಶಹರ್‌ನಲ್ಲಿ ನಡೆದಿದ್ದ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉ.ಪ್ರದೇಶದ ಗಾಝಿಯಾಬಾದ್, ಬುಲಂದಶಹ‌ರ್ ಹಾಗೂ ದೇಶದ ಇತರ ಭಾಗಗಳಲ್ಲಿಯ ಕೆಲವು ಪಟ್ಟಣಗಳಲ್ಲಿಯೂ ಶುಕ್ರವಾರದ ನಮಾಝ್ನ ಬಳಿಕ ನರಸಿಂಹಾನಂದ ಬಂಧನಕ್ಕೆ ಒತ್ತಡ ಹೇರಲು ನೂರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಬುಲಂದಶಹರ್‌ನಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿಯನ್ನು ನಡೆಸಿದ್ದು, ಭಾರೀ ಕಲ್ಲು ತೂರಾಟದಲ್ಲಿಯೂ ತೊಡಗಿದ್ದರು. ಗಾಝಿಯಾಬಾದ್‌ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು.

ಗಾಝಿಯಾಬಾದ್, ಬುಲಂದಶಹರ್, ಅಲಿಗಡ ಮತ್ತು ರಾಜ್ಯದ ಇತರ ಸೂಕ್ಷ್ಮನಗರಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಿದ್ದು, ಭದ್ರತಾ ಸಿಬ್ಬಂದಿ ಗುರುವಾರ ಗಲಭೆಪೀಡಿತ ಪ್ರದೇಶಗಳಲ್ಲಿ ಧ್ವಜ ಸಂಚಲನಗಳನ್ನು ನಡೆಸಿದರು.

ಶುಕ್ರವಾರ ರಾತ್ರಿ ನೂರಾರು ಪ್ರತಿಭಟನಾಕಾರರು ಗಾಝಿಯಾಬಾದ್‌ನ ದಾಸ್ನಾ ದೇವಾಲಯದ ಮುಂದೆ ಜಮಾಯಿಸಿ ನರಸಿಂಹಾನಂದ ವಿರುದ್ದ ಘೋಷಣೆಗಳನ್ನು ಕೂಗಿದ್ದು ನಗರದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ಈ ಸಂದರ್ಭ ನರಸಿಂಹಾನಂದ ದೇವಸ್ಥಾನದೊಳಗೆ ಇದ್ದರು.

ನರಸಿಂಹಾನಂದರ ಹೇಳಿಕೆಗಳನ್ನು ಖಂಡಿಸಿರುವ ಹಿರಿಯ ಮುಸ್ಲಿಮ್ ಧಾರ್ಮಿಕ ಮುಖಂಡ ಹಾಗೂ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದ ಅಧ್ಯಕ್ಷ ಖಾಲಿದ್ ರಶೀದ್ ಫಿರಂಗಿಮಹಲಿ ಅವರು,ಯತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನರಸಿಂಹಾನಂದ ಹೇಳಿದ್ದೇನು ?
ಸೆ.29ರಂದು ಗಾಝಿಯಾಬಾದ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ನರಸಿಂಹಾನಂದ ದಸರಾ ಉತ್ಸವಗಳಲ್ಲಿ ಪ್ರವಾದಿ ಮುಹಮ್ಮದ್ರ ಪ್ರತಿಕೃತಿಗಳನ್ನು ದಹಿಸುವಂತೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಅವರ ಹೇಳಿಕೆಗಳಿಗೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು. ನರಸಿಂಹಾನಂದರ ಆಕ್ಷೇಪಾರ್ಹ ಹೇಳಿಕೆಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಗಾಝಿಯಾಬಾದ್ ಪೊಲೀಸರು ಅ.3ರಂದು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ತನ್ನ ಪ್ರಚೋದನಕಾರಿ ಮಾತುಗಳಿಗೆ ಕುಖ್ಯಾತರಾಗಿರುವ ನರಸಿಂಹಾನಂದ ದ್ವೇಷ ಭಾಷಣಗಳಿಗಾಗಿ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹಿಂದೆ ಹರಿದ್ವಾರದಲ್ಲಿ ದ್ವೇಷ ಭಾಷಣಕ್ಕಾಗಿ ಅವರನ್ನು ಬಂಧಿಸಲಾಗಿತ್ತು.

ಹೆಚ್ಚಾಗಿ ಇಸ್ಲಾಮ್ ಮತ್ತು ಪ್ರವಾದಿಯವರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣಗಳನ್ನು ಮಾಡುವ ಚಾಳಿಯನ್ನು ಹೊಂದಿರುವ ನರಸಿಂಹಾನಂದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಂತಹ ಗಣ್ಯರ ವಿರುದ್ಧವೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

Read These Next

ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ

ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...

ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...