• ಶೀಘ್ರ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಭಟ್ಕಳ: ಇಲ್ಲಿನ ಪುರಸಭೆಯ ವ್ಯಾಪ್ತಿಯ ಸಾಗರ ರಸ್ತೆಯಲ್ಲೀಗ ಕಾಡುಹಂದಿಗಳ ಕಾಟದಿಂದಾಗಿ ಭಟ್ಕಳದಿಂದ ಸಾಗರ ರಸ್ತೆಯ ಮಾರ್ಗವಾಗಿ ಮಾರುಕೇರಿ, ಹಾಡುವಳ್ಳಿ ಮತ್ತಿತರ ಗ್ರಾಮೀಣ ಭಾಗಕ್ಕೆ ಹೋಗುವ ಬೈಕ್ ಸವಾರರಿಗೆ ಪ್ರಾಣಸಂಕಟವಾಗಿ ಮಾರ್ಪಟ್ಟಿದ್ದು ಕೂಡಲೇ ಪುರಸಭೆಯವರು ಕ್ರಮಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೇ ಬಿಡಾಡಿ ದನಕರುಗಳು, ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈಗ ಈ ವ್ಯಾಪ್ತಿಗೆ ಕಾಡು ಹಂದಿಯೂ ಸೇರಿದ್ದು 20ಕ್ಕೂ ಅಧಿಕ ಕಾಡುಹಂದಿಗಳು ರಸ್ತೆಗಿಳಿದು ಸಾರ್ವಜನಿಕರು ಹಾಗೂ ವಾಹನ ಸವಾರರು ಆತಂಕಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಇಲ್ಲಿನ ಸಾಗರ ರಸ್ತೆಯ ಹೊಸ ಬಸ್ ಡಿಪೋ ಸುತ್ತಮುತ್ತಲು ಈ ಕಾಡು ಹಂದಿಯ ಕಾಟ ಹೆಚ್ಚಾಗಿದ್ದು, ಇಲ್ಲಿಂದ ಪುರಸಭಾ ಘನ ತ್ಯಾಜ್ಯ ಘಟಕದ ವರೆಗೆ ನಿತ್ಯ ಓಡಾಡುತ್ತಿವೆ. ಕೆಲವೊಮ್ಮೆ ಪಟ್ಟಣಕ್ಕೂ ಸಹ ಬಂದು ಹೋಗುವ ಈ ಕಾಡು ಹಂದಿಗಳು ಬೇರೆ ಸ್ಥಳದಿಂದ ಇಲ್ಲಿಗೆ ಬಂದಿವೆ. ಎಲ್ಲಿಯೇ ಹೋದರು ತಂಡೊಪ ತಂಡವಾಗಿ ಹೋಗಲಿದ್ದು ಇದರಿಂದಾಗಿ ನಿತ್ಯ ಈ ರಸ್ತೆಯಲ್ಲಿ ತಿರುಗಾಡುವ ಜನರಿಗೆ ವಾಹನ ಸವಾರರಿಗೆ ಭಯದಲ್ಲಿಯೇ ತಿರುಗಾಡುವಂತಾಗಿದೆ. ಇಲ್ಲಿನ ಸ್ಥಳಿಯರ ಪ್ರಕಾರ ಪುರಸಭೆಯ ಘನತ್ಯಾಜ್ಯ ಘಟಕವಿರುವ ಕಾರಣ ಈ ಕಾಡು ಹಂದಿಗಳಿಗೆ ಇದು ಆಹಾರ ಘಟಕವಾಗಿದೆ.
ಈ ಕಾಡು ಹಂದಿಗಳು ಶಿವಮೊಗ್ಗ ಜಿಲ್ಲೆಯ ಸಾಗರ ಗಡಿ ಪ್ರದೇಶವಾದ ನಾಗವಳ್ಳಿ ಕಾಡು ಪ್ರದೇಶದಿಂದ ಭಟ್ಕಳದ ಕಡೆಗೆ ಬಂದಿದ್ದು, ಕೆಲವೊಮ್ಮೆ ರಸ್ತೆಯ ಮಧ್ಯದಲ್ಲಿಯೇ ನಿಂತುಕೊಂಡು ಓಡಾಡುವವರಿಗೆ ಸಮಸ್ಯೆಯನ್ನು ಸೃಷ್ಟಿಸಿವೆ. ಈ ಕಾಡು ಹಂದಿಗಳಿಗೆ ಬೇಟೆ ವೀರ ದೇವಸ್ಥಾನದ ಪಕ್ಕದಲ್ಲಿನ ಚಿಕ್ಕ ಕೆರೆ ತಂಗಲು ಸೂಕ್ತ ಜಾಗವಾಗಿದ್ದು, ಕೆಲವೊಮ್ಮೆ ನೀರು ಕುಡಿಯಲು ಬರುವ ಬೇರೆ ಪ್ರಾಣಿಗಳಿಗೆ ಇವು ಕಾಟಕೊಡುತ್ತಿವೆ.
ಅಪಘಾತಕ್ಕೆ ಕಾಡು ಹಂದಿ ಕಾರಣ: ಈ ಕಾಡು ಹಂದಿಗಳಿಂದ ಈಗಾಗಲೇ ಸಾಕಷ್ಟು ಅವಗಢಗಳು ಸಂಭವಿಸಿದ್ದು, ಬೈಕ ಸವಾರರಿಗೆ ನಿತ್ಯ ಉಸಿರು ಬಿಗಿಹಿಡಿದುಕೊಂಡು ಹೋಗುವ ರಸ್ತೆ ಇದಾಗಿದೆ. ಹಗಲಿನಲ್ಲಿ ಬೈಕ್ ಸವಾರರು ಕಾಡು ಹಂದಿಯಿಂದ ತಪ್ಪಿಸಿಕೊಳ್ಳಬಹುದಾಗಿದ್ದು, ರಾತ್ರಿ ವೇಳೆ ಬೈಕಗೆ ಅಡ್ಡ ಬಂದು ಸವಾರರು ಬಿದ್ದು ಗಂಭೀರ ಗಾಯಗೊಂಡಿರುವುದುಂಟು. ಅತೀವೇಗದಲ್ಲಿ ಮಾರುಕೇರಿ,ಹಾಡುವಳ್ಳಿ,ಕಿತ್ರೆ ಕಡೆಗೆ ವಾಹನ ಸವಾರರು ಮನೆಗೆ ಹೋಗುವ ತವಕದಲ್ಲಿ ವೇಗವಾಗಿ ಬೈಕ ಓಡಿಸಲಿದ್ದು, ಇದೇ ವೇಳೆ ಕಾಡು ಹಂದಿ ಬೈಕಗೆ ಅಡ್ಡ ಬಂದಿದ್ದಲ್ಲಿ ಪ್ರಾಣಕ್ಕೆ ಕುತ್ತು ಬರಲಿವೆ.
ಪುರಸಭೆ ಗಮನ ಅತ್ಯಗತ್ಯ: ಈ ಹಿಂದೆ ಬಿಡಾಡಿ ನಾಯಿಗಳ ಹಾವಳಿಗೆ ಭಟ್ಕಳ ಜನತೆ ಬೆಚ್ಚಿ ಬಿದ್ದಿದ್ದು, ಬೌ ಬೌ ಬಿರಿಯಾನಿ ತುಂಬಾ ಫೇಮಸ್ ಆಗಿದ್ದವು. ಬಳಿಕ ಸಾರ್ವಜನಿಕರ ಆಕ್ರೋಶದ ಮೇಲೆ ಬಿಡಾಡಿ ನಾಯಿಗಳನ್ನು ಹಿಡಿದು ಬೇರೆಡೆ ಬಿಟ್ಟು ಬರಲಾಯಿತು. ಈಗ ಕಾಡು ಹಂದಿಯ ಹಾವಳಿಯೂ ಹೆಚ್ಚಾಗಿದ್ದು ಎಲ್ಲೆಂದರಲ್ಲಿ ಜನರಿಗೆ ತಾಪತ್ರಯ ನೀಡುತ್ತಿರುವುದು ಕೇಳಿ ಬಂದಿವೆ. ಇದರಿಂದ ಬಿಡಾಡಿ ನಾಯಿಯಂತೆ ಕಾಡು ಹಂದಿಯನ್ನು ಹಿಡಿದು ಕಾಡಿಗೆ ಬಿಟ್ಟು ಬರಬೇಕೆಂಬುದು ಸ್ಥಳಿಯರ, ಸಾರ್ವಜನಿಕರ ಆಗ್ರಹವಾಗಿದೆ. ಮನುಷ್ಯರನ್ನು ಕಂಡರಂತು ಅವರನ್ನೇ ಹಿಂಬಾಲಿಸಿ ಬರಲಿದ್ದು ಇದು ಭಯ ಹುಟ್ಟಿಸುತ್ತಿವೆ. ಕೆಲವೊಮ್ಮೆ ಅವರತ್ತ ಓಡಿಬರುವಂತೆ ಮಾಡಿ ಹೆದರಿಸುತ್ತಿವೆ. ಇವೆಲ್ಲದರ ನಿಯಂತ್ರಣಕ್ಕೆ ಪುರಸಭೆ ಅತ್ಯಗತ್ಯವಾಗಿ ಮುಂದಾಗಬೇಕಿದೆ.
'ದಿನನಿತ್ಯ ಇದೇ ರಸ್ತೆಯಲ್ಲಿಯೇ ಮನೆಗೆ ಸಂಚರಿಸಲಿದ್ದು, ವ್ಯಾಪಾರ ವಹಿವಾಟಿಗೆ ಭಟ್ಕಳಕ್ಕೆ ಬರಲಿದ್ದೇವೆ. ಸಂಚಾರಕ್ಕೆ ಕಾಡು ಹಂದಿಗಳು ಸಮಸ್ಯೆ ಮಾಡುತ್ತಿದ್ದು, ಪುರಸಭೆಯ ಬಿಡಾಡಿ ನಾಯಿ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕಾಡು ಹಂದಿಯ ಮೇಲು ಕ್ರಮಕ್ಕೆ ಮುಂದಾಗಬೇಕಿದೆ. ಸಾಕಷ್ಟು ಮಂದಿ ಬೈಕನಲ್ಲಿ ಕುಟುಂಬ ಸಮೇತ ತೆರಳುವ ಸಮಯದಲ್ಲಿ ಹಂದಿ ಕಾಟದಿಂದ ಬಿದ್ದು ಗಾಯಗೊಂಡಿರುವದಿದೆ.
- ಮಾದೇವ, ಬೈಕ ಸವಾರ
‘ರಾತ್ರಿ ಸಮಯದಲ್ಲಿ ಒಮ್ಮೊಮ್ಮೆ ಕಾಡುಹಂದಿಗಳು ರಸ್ತೆಗಿಳಿದು ಬೈಕ್‍ಗಳಿಗೆ ಅಡ್ಡ ಬರುತ್ತವೆ. ಇದರಿಂದಾಗಿ ನಾವು ನಿತ್ಯವೂ ಈ ಭಾಗದಲ್ಲಿ ಓಡಾಡಲು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ’
-ಮಂಜುನಾಥ್ ಹೆಬ್ಬಾರ್ ಶಿಕ್ಷಕ