ಮೆಲ್ಬೋರ್ನ್: ಟಿ20 ವಿಶ್ವಕಪ್ 2022ರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಗೆಲುವು ಸಾಧಿಸಿದೆ.
ಮೆಲ್ಬೋರ್ನ್ ನಲ್ಲಿ ನಡೆದ ಗ್ರೂಪ್ 2 ಹಂತದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿತ್ತು. ಆರಂಭಿಕ ಆಘಾತ ಎದುರಿಸಿದ ಪಾಕಿಸ್ತಾನಕ್ಕೆ ಶಾನ್ ಮಸೂದ್ ಅಜೇಯ 52 ರನ್ ಹಾಗೂ ಇಫ್ತಿಕರ್ ಅಹ್ಮದ್ 51 ರನ್ ಬಾರಿ ತಂಡಕ್ಕೆ ಸ್ಪಲ್ಪ ಚೇತರಿಕೆ ತಂದುಕೊಟ್ಟಿದ್ದು ಪಾಕ್ ಭಾರತಕ್ಕೆ ಗೆಲ್ಲಲು 160 ರನ್ ಗಳ ಗುರಿ ನೀಡಿತು.
160 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಅಜೇಯ 82 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿದರು. ಆರಂಭಿಕರಾದ ಕೆಎಲ್ ರಾಹುಲ್ 4 ಮತ್ತು ರೋಹಿತ್ ಶರ್ಮಾ 4 ರನ್ ಗಳಿಗೆ ಔಟಾಗುವ ಮೂಲಕ ತಂಡಕ್ಕೆ ಆಘಾತ ನೀಡಿದರು. ಈ ವೇಳೆ ತಾಳ್ಮೆಯ ಆಟವಾಡಿದ ಕೊಹ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇನ್ನು ಹಾರ್ದಿಕ್ ಪಾಂಡ್ಯ 40 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಾಕ್ ಪರ ಮೊಹಮ್ಮದ್ ರಿಜ್ವಾನ್ 4, ಬಾಬರ್ ಅಜಾಂ 0, ಶಬಾಬ್ ಖಾನ್ 5, ಹೈದರ್ ಅಲಿ 2 ಇನ್ನು ಶಾಹಿನ್ ಶಾ ಅಫ್ರಿದಿ 16 ರನ್ ಪೇರಿಸಿದ್ದಾರೆ.
ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಹರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದಿದ್ದಾರೆ