ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ತಕ್ಷಣದಿಂದಲೇ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ 12 ಎಪ್ರಿಲ್ ರಂದು ನೋಟಿಫಿಕೇಶನ್ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಎ. 19 ಕೊನೆಯ ದಿನ. ಎ. 20 ನಾಮಪತ್ರ ಪರಿಶೀಲನೆ ಎ. 22 ನಾಮ ಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ7 ರಂದು ಮತದಾನ ನಡೆಯಲಿದೆ , ಜೂನ್ 4 ರಂದು ಜೂನ್ ಮತ ಎಣಿಕೆ ನಡೆಯಲಿದೆ ಎಂದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಿತ್ತೂರು , ಖಾನಾಪುರ , ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಒಟ್ಟು 16,22,857 ಮತದಾರರಿದ್ದು, 8,15, 599 ಪುರುಷರು, 8,07,242 ಮಹಿಳೆಯರು, 16 ಅನ್ಯ ಲಿಂಗಿ ಮತದಾರರು ಇದ್ದು, ಒಟ್ಟು 1977 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಒಟ್ಟು 25 ಚೆಕ್‌ಪೋಸ್ಟ್ ಗಳನ್ನು ತರೆಯಲಾಗಿದ್ದು, ಇಂದಿನಿ0ದಲೇ ಎಲ್ಲಾ ಚೆಕ್ ಪೋಸ್ಟ್ ಗಳು ಕಾರ್ಯಾರಂಭ ಮಾಡಿವೆ. 24*7 ಈ ಚೆಕ್‌ಪೋಸ್ಟ್ಗಳಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು,ಈ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಪ್ಲಾಯ್ಯಿಂಗ್ ಸ್ಕಾಡ್, ವೀಡಿಯೋ ಸರ್ವೇಲೆನ್ಸ್ ತಂಡ, ವೀಡಿಯೋ ವೀಕ್ಷಣಾ ತಂಡ, ಅಂಕಿ ಅಂಶ ಪರಿಶೀಲನಾ ತಂಡ, ಸೆಕ್ಟರ್ ಅಧಿಕಾರಿಗಳು, ಲೆಕ್ಕಪತ್ರ ತಂಡ ಸೇರಿದಂತೆ ವಿವಿಧ ತಂಡಗಳಿಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಅವರಿಗೆ ಸೂಕ್ತ ತರಬೇತಿಯನ್ನು ನೀಡಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಿಂಗಲ್ ವಿಂಡೋ ಸಮಿತಿ, ಎಂಸಿಎ0ಸಿ ಸಮಿತಿ, ಮೀಡಿಯಾ ಸ್ಕೂಟನಿ ತಂಡ, ಲೆಕ್ಕಪತ್ರ ಪರಿಶೀಲನಾ ತಂಡ, ದೂರು ನಿರ್ವಹಣಾ ತಂಡಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಯಾವುದೇ ಅಗತ್ಯ ಮಾಹಿತಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಸಂಪರ್ಕಿಸುವ0ತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿನ 1435 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು 2489 ಪೊಲೀಸ್ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಮತದಾನ ದಿನದಂದು ಕರ್ತವ್ಯ ನಿರ್ವಹಿಸಲು ಹೆಚ್ಚುವರಿಯಾಗಿ ಕೇಂದ್ರ ಭದ್ರತಾ ಸಿಬ್ಬಂದಿ ಮತ್ತು ರಾಜ್ಯ ಪೊಲೀಸ್ ಪಡೆಗಳ ಆಗಮನವಾಗಲಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದರು .
ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆಗಳ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿದ್ದು, ಈ ಹಿಂದೆ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಜಿ.ಪಂ ಸಿಇಒ ಈಶ್ವರ ಕಾಂದೂ ತಿಳಿಸಿದರು. ಎಡಿಸಿ ಪ್ರಕಾಶ್ ರಜಪೂತ್ ಪತ್ರಿಕಾಗೋಷ್ಠಿಯಲ್ಲಿದ್ದರು.