ದುಬೈ: ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಬಿಸಿಲ ಬೇಗೆಯಿರುತ್ತಿದ್ದ ಸಂಯುಕ್ತ ಅರಬ್ ಸಂಸ್ಥಾನವು ಮಂಗಳವಾರ ಸುರಿದ ಭಾರೀ ಮಳೆಗೆ ತತ್ತರಿಸಿ ಹೋಗಿದೆ.
ಜಗತ್ತಿನ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಯಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳವಾರದ ಮಳೆಗೆ ಬಹುತೇಕ ಮುಳುಗಡೆಗೊಂಡ ಪರಿಣಾಮ ವಿಮಾನ ಹಾರಾಟದಲ್ಲಿ ಸಂಪೂರ್ಣ ವ್ಯತ್ಯಯವುಂಟಾಯಿತು. ಮಂಗಳವಾರ ಸಂಜೆ ಇಲ್ಲಿ ಯಾವುದೇ ವಿಮಾನ ಹಾರಾಟವಿರಲಿಲ್ಲ. ವಿಮಾನ ಸಂಚಾರ ಪುನರಾರಂಭಗೊಂಡರೂ ವಿಳಂಬಗಳು, ರದ್ದತಿಗಳಿಂದ ಪ್ರಯಾಣಿಕರು ಪರದಾಡಬೇಕಾಯಿತು ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ವಿಮಾನಗಳು ನೀರು ತುಂಬಿದ ರನ್-ವೇಗಳಲ್ಲಿ ನಿಂತಿರುವುದು ಹಾಗೂ ನೀರಿನಿಂದಾವೃತವಾದ ಪಾರ್ಕಿಂಗ್ ಸ್ಥಳದಲ್ಲಿ ಕಾರುಗಳ ಅರ್ಧ ಭಾಗ ಮುಳುಗಡೆಯಾಗಿರುವುದು ಕಾಣಿಸುತ್ತದೆ. ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆಯೂ ನೀರಿನಿಂದಾವೃತವಾಗಿತ್ತು. ವಿಮಾನ ನಿಲ್ದಾಣದ ಹೊರತಾಗಿ ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್‌ನಲ್ಲೂ ಮೊಣಕಾಲಿನವರೆಗೆ ನೀರು ತುಂಬಿತ್ತು. ಒಂದು ದುಬೈ ಮೆಟ್ರೋ ಸ್ಟೇಷನ್ ಕೂಡ ದಿಡೀರ್ ನೆರೆಯಿಂದ ಸಮಸ್ಯೆಗೀಡಾಯಿತು. ಹಲವು ರಸ್ತೆಗಳು ಜಲಾವೃತಗೊಂಡಿದ್ದರೆ, ವಸತಿ ಕಟ್ಟಡಗಳೂ ಸಮಸ್ಯೆ ಎದುರಿಸಿದವು. ದೀಢೀರ್ ಎಂದು ಸುರಿದ ಮಹಾಮಳೆಗೆ ಕಟ್ಟಡಗಳಲ್ಲಿ ಸೋರಿಕೆ ಸಮಸ್ಯೆಯೂ ವರದಿಯಾಗಿದೆ.
ಯುಎಇ ಹೊರತಾಗಿ ನೆರೆಯ ಬಹರೈನ್‌ನಲ್ಲೂ ದಿಢೀರ್ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಶಾಲಾ ಕಾಲೇಜುಗಳು ಮುಚ್ಚಿದ್ದು, ಸರ್ಕಾರಿ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಒಮನ್‌ನಲ್ಲಿ ದಿಢೀರ್ ಪ್ರವಾಹ ಹಾಗೂ ಬಿರುಗಾಳಿಗೆ ಮಕ್ಕಳ ಸಹಿತ 18 ಜನರು ಬಲಿಯಾಗಿದ್ದಾರೆ.