ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣದ ಮಾಹಿತಿ ಬಿಚ್ಚಿಟ್ಟ ಎಸ್ಪಿ ಡಾ.ಅರುಣ್

Source: Vb | By I.G. Bhatkali | Published on 24th November 2023, 1:47 AM | Coastal News | State News |

ಉಡುಪಿ: ‘ಒಬ್ಬರ ನಂತರ ಒಬ್ಬರು ತಡೆಯಲು ಬಂದಿರುವುದರಿಂದ ಪ್ರವೀಣ್ ಚೌಗುಲೆಗೆ ಬಹಳ ಸುಲಭದಿಂದ ಒಬ್ಬೊಬ್ಬರಂತೆ ನಾಲ್ಕು ಮಂದಿಯನ್ನು ಕೊಲೆ ಮಾಡಲು ಸಾಧ್ಯವಾಯಿತು’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಡಾ.ಕೆ.ಅರುಣ್ ಅವರು ನೇಜಾರು ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣದ ಸಂಪೂರ್ಣ ವಿವರವನ್ನು ಬಿಚ್ಚಿಟ್ಟರು.

Udupi Tragedy Unveiled: SP Reveals Shocking Details of Family Massacre

ಮನೆಯೊಳಗೆ ಬಂದ ಪ್ರವೀಣ್ ಮೊದಲು ಐನಾಝ್ ಮೇಲೆ ದಾಳಿ ನಡೆಸಿ ಚೂರಿಯಿಂದ ಇರಿದನು. ಆಕೆಯ ಬೊಬ್ಬೆ ಕೇಳಿ ಕೋಣೆಯಿಂದ ಹೊರಗೆ ಬಂದ ತಾಯಿಯ ಮೇಲೆ ದಾಳಿ ನಡೆಸಿದನು. ತಾಯಿಯ ಬೊಬ್ಬೆ ಕೇಳಿ ಬಂದ ಅಫ್ನಾನ್‌ಳನ್ನು ಕೂಡ ಇರಿದು ಕೊಲೆ ಮಾಡಿದನು. ಇವರೆಲ್ಲ ಬೊಬ್ಬೆ ಕೇಳಿ ಹೊರಗಡೆ ಆಟ ಆಡುತ್ತಿದ್ದ ಆಸೀಮ್ ಮನೆಯೊಳಗೆ ಓಡಿ ಬಂದನು. ಅವನನ್ನು ಪ್ರವೀಣ್ ಬಾಗಿಲನ ಬಳಿ ಚೂರಿಯಿಂದ ಇರಿದನು. ಹೀಗೆ ಆತ ಒಬ್ಬೊಬ್ಬರಾಗಿಯೇ ನಾಲ್ವರನ್ನು ಕೊಲೆ ಮಾಡಿದ್ದಾನೆ ಎಂದು ಅವರು ವಿವರಿಸಿದರು.

8 ತಿಂಗಳಿನಿಂದ ಪರಿಚಯ
ಆರೋಪಿ ಪ್ರವೀಣ್ ಚೌಗುಲೆ ಮತ್ತು ಸಂತ್ರಸ್ತೆ ಐನಾಝ್ ಸುಮಾರು ಎಂಟು ತಿಂಗಳಿಂದ ಒಂದೇ ಕಡೆ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. 8-10 ಬಾರಿ ಒಂದೇ ವಿಮಾನದಲ್ಲಿ ವಿದೇಶಗಳಿಗೆ ಕರ್ತವ್ಯ ನಿಮಿತ್ತ ಇವರಿಬ್ಬರು ಹೋಗಿ ಬಂದಿದ್ದಾರೆ. ಇದರಿಂದ ಇವರ ಮಧ್ಯೆ ಗೆಳೆತನ ಬೆಳೆದಿತ್ತು ಎಂದು ಎಸ್ಪಿ ಹೇಳಿದರು.

ಆರೋಪಿ ಪ್ರವೀಣ್, ಐನಾಝ್‌ಗೆ ಬೇರೆ ಬೇರೆ ವಿಧದಲ್ಲಿ ಸಹಾಯ ಕೂಡ ಮಾಡಿದ್ದಾನೆ. ಆಕೆಗೆ ಮಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಸಹಾಯ ಮಾಡಿದ್ದಾನೆ ಅಲ್ಲದೆ, ಓಡಾಟಕ್ಕೆ ತನ್ನ ಸ್ಕೂಟರ್‌ನ್ನು ಆಕೆಗೆ ನೀಡಿದ್ದನು. ಈ ಮಧ್ಯೆ ಒಂದು ತಿಂಗಳ ಹಿಂದೆ ಐನಾಝ್, ಪ್ರವೀಣ್ ಜೊತೆ ಸರಿಯಾಗಿ ಮಾತನಾಡದೆ ದೂರ ಮಾಡಿದ್ದಳು. ಇದರಿಂದ ವಿಚಲಿತನಾದ ಆತ, ಆಕೆಯ ಮೇಲಿನ ಅತೀಯಾದ ವ್ಯಾಮೋಹ ಹಾಗೂ ತನ್ನ ನಿಯಂತ್ರಣದಲ್ಲಿಯೇ ಇರಬೇಕೆಂಬ ಮನಸ್ಥಿತಿಯಿಂದ ಆಕೆಯ ಕೊಲೆಗೆ ಪೂರ್ವ ಸಿದ್ಧತೆ ಮಾಡಿದನು ಎಂದು ಅವರು ವಿವರಿಸಿದರು.

ಎಲ್ಲ ರೀತಿಯಲ್ಲೂ ಪ್ಲ್ಯಾನ್ ಮಾಡಿಕೊಂಡೇ ನ.12ರಂದು ಮನೆಯಿಂದ ಬೆಳಗ್ಗೆ ಬೇಗ ಉಡುಪಿಗೆ ಹೊರಟ ಪ್ರವೀಣ್, ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸಿಸಿಟಿವಿ ಫುಟೇಜ್ ಸಿಗದಂತೆ ಕಾರನ್ನು ಅದಕ್ಕಿಂತ ಮೊದಲೇ ನಿಲ್ಲಿಸಿ, ಬಸ್, ಅಟೋ ರಿಕ್ಷಾ, ಬೈಕ್ ಮೂಲಕ ನೇಜಾರಿಗೆ ಬಂದನು.

ಕೊಲೆ ಮಾಡಿದ ಬಳಿಕವೂ ಬೇರೆ ಬೇರೆ ಮಾರ್ಗವಾಗಿ ವಾಪಾಸ್ಸು ಹೋಗಿ, ಮುಲ್ಕಿ ಸಮೀಪ ರಕ್ತದ ಕಲೆಯ ಬಟ್ಟೆಯನ್ನು ಸುಟ್ಟು ಹಾಕಿದ್ದನು. ಮನೆಗೆ ಹೋಗಿ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಿಲೇವಾರಿ ಮಾಡಿದ್ದನು. ಕೃತ್ಯಕ್ಕೆ ಬಳಸಿದ್ದ ಮನೆಯ ಕಿಚನ್ ಚೂರಿಯನ್ನು ಯಾರಿಗೂ ಸಂದೇಹ ಬಾರದಂತೆ ಮತ್ತೆ ಅಲ್ಲೇ ತಂದು ಇಟ್ಟಿದ್ದನು ಎಂದು ಎಸ್ಪಿ ಮಾಹಿತಿ ನೀಡಿದರು.

ಆಶ್ರಯ ಕೊಟ್ಟವರ ವಿಚಾರಣೆ
ಈತನ ಹಿಂದೆ ಬೇರೆ ಯಾರು ಇಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿ ಬೆಳಗಾವಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದು, ಆ ಮನೆಯವರಿಗೆ ಈತ ಈ ಕೃತ್ಯ ಎಸಗಿ ಬಂದಿರುವುದು ಗೊತ್ತಿರಲಿಲ್ಲ. ಈಗಾಗಲೇ ಆ ಮನೆಯವರನ್ನು ವಿಚಾರಣೆ ನಡೆಸಿದ್ದೇವೆ. ಮುಂದೆ ಇನ್ನಷ್ಟು ವಿಚಾರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪ್ರವೀಣ್ ಮಾದಕ ದ್ರವ್ಯ ಸೇವಿಸಿದ್ದಾನೆಯೇ ಎಂಬುದು ವೈದ್ಯಕೀಯ ಪರೀಕ್ಷೆ ಯಿಂದ ದೃಢಪಡಬೇಕಾಗಿದೆ. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರೆಲ್ಲರ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಆತ ಕೊಲೆ ಮಾಡಲು ಬರುವಾಗ ಮೊಬೈಲ್ ಆನ್ ಇತ್ತೆ ಎಂಬುದರ ಬಗ್ಗೆ ನಾವು ತಾಂತ್ರಿಕ ಸಾಕ್ಷ್ಯ ಹಾಗೂ ಡೇಟಾಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದರು.

ಈಗಾಗಲೇ ಎಲ್ಲ ರೀತಿಯ ತನಿಖೆ ಮುಗಿಸಿದ್ದೇವೆ. ಮತ್ತೆ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಳ್ಳುವ ಅಗತ್ಯ ಬರುವುದಿಲ್ಲ. ಕೆಲವು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಇನ್ನು ಕೂಡ ಕೆಲವು ಸಾಕ್ಷ್ಯ ಸಂಗ್ರಹಿಸಬೇಕಾಗಿದೆ. ಜಾರ್ಜ್ ಶೀಟ್ ಸಲ್ಲಿಸಲು ಇನ್ನು 70-80 ದಿನಗಳಿವೆ. ಅದಕ್ಕೆ ಮೊದಲು ಏನಾದರೂ ಸಾಕ್ಷ್ಯ ಸಿಕ್ಕಿದರೆ ಅವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದರು.

ತಂಡಕ್ಕೆ ನಗದು ಬಹುಮಾನ
ಈ ಪ್ರಕರಣದಲ್ಲಿ ನಮ್ಮ ಪೊಲೀಸ್ ತಂಡದ ಎಲ್ಲರೂ ಬಹಳ ಜವಾಬ್ದಾರಿ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಮೇಲಾಧಿಕಾರಿಗಳು ಆದಷ್ಟು ಬೇಗ ಈ ತಂಡಕ್ಕೆ ಬಹುಮಾನ ಘೋಷಣೆ ಮಾಡಲಿದ್ದಾರೆ. 1.5ಲಕ್ಷ ರೂ. ನಗದು ಬಹುಮಾನ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ. ಸುಮಾರು 50ಕ್ಕೂ ಅಧಿಕ ಮಂದಿ ಈ ತಂಡದಲ್ಲಿ ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.

2007ರಲ್ಲಿ ಪ್ರವೀಣ್ ಚೌಗುಲೆ ಪೂನಾ ಸಿಟಿ ಪೊಲೀಸ್‌ಗೆ ಸೇರ್ಪಡೆಗೊಂಡು ತರಬೇತಿಯಲ್ಲಿರುವ ಸಮಯ ಆತನಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಸಿಕ್ಕಿತ್ತು. ಪೊಲೀಸ್ ಕೆಲಸಕ್ಕಿಂತ ಹೆಚ್ಚಿನ ಸಂಬಳ ದೊರೆಯುವ ಕಾರಣಕ್ಕೆ ಆತ ಅಲ್ಲಿ ಕೆಲಸ ಬಿಟ್ಟು ಇಲ್ಲಿಗೆ ಸೇರಿಕೊಂಡನು. ಕಳೆದ 2008ನಿಂದ ಏರ್ ಇಂಡಿಯಾ ಏಕ್ಸ್‌ಪ್ರೆಸ್‌ನಲ್ಲಿ ಆತ ಕೆಲಸ ಮಾಡಿಕೊಂಡಿದ್ದಾನೆ ಎಂದರು.

ಪ್ರವೀಣ್‌ಗೆ ಬೇರೆ ಬೇರೆ ಹುಡುಗಿಯರ ಜೊತೆ ಗೆಳೆತನ ಇತ್ತು ಎಂಬುದು ಆತನ ಪತ್ನಿಗೆ ಗೊತ್ತಿತ್ತು. ಆಕೆ ಐನಾಝ್ ಮಾತ್ರವಲ್ಲ ಬೇರೆ ಸಹೋದ್ಯೋಗಿಗಳ ಜೊತೆ ಕೂಡ ಮಾತನಾಡಿದ್ದಾಳೆ. ಆರೋಪಿಯನ್ನು ಬೆಳಗಾವಿ, ಸಾಂಗ್ಲಿಗೆ ಕರೆದು ಕೊಂಡು ಹೋಗಿ ಮಹಜರು ನಡೆಸಿಲ್ಲ. ಕೇವಲ ಮಂಗಳೂರು ಮತ್ತು ಉಡುಪಿ ಮಾತ್ರ ಮಹಜರು ಕಾರ್ಯ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಹಣಕಾಸಿನ ಬಗ್ಗೆ ಪ್ರತ್ಯೇಕ ತನಿಖೆ
ಹಸೀನಾ ಅವರ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆ ನಡೆಸಲು ಎಲ್ಲ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ವರದಿ ಆಧಾರದ ಮೇರೆಗೆ ಪರಿಶೀಲನೆ ಮಾಡಲಾಗುವುದು. ಈ ವಿಚಾರವಾಗಿ ನಾವು ವಿಚಾರಣೆ ಮಾಡಿದಾಗ ಕೆಲವೊಂದು ಮಾಹಿತಿ ನಮಗೆ ದೊರೆತಿದೆ. ಈ ಸಂಬಂಧ ಕುಟುಂಬದಿಂದ ಪ್ರತ್ಯೇಕ ದೂರು ಪಡೆದುಕೊಂಡು ಹಣ ವರ್ಗಾವಣೆ ಆಗಿರುವ ಬಗ್ಗೆ ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಡಾ.ಅರುಣ್ ತಿಳಿಸಿದರು.

ಮನೆಯವರು ತನಿಖೆಗೆ ತುಂಬಾ ಸಹಕಾರ ನೀಡಿದ್ದಾರೆ. ತಮಗೆ ಗೊತ್ತಿರುವ ಸತ್ಯವನ್ನು ನಮ್ಮ ಮುಂದೆ ಹೇಳಿಕೊಂಡಿ ದ್ದಾರೆ. ಇದರಿಂದ ಆರೋಪಿಯನ್ನು ಪತ್ತೆ ಹಚ್ಚಲು ಸಹಾಯವಾಯಿತು. ಪ್ರಕರಣಕ್ಕೆ ಸಂಬಂಧಿಸಿ ಜಾರ್ಜ್‌ಶೀಟ್ ಸಲ್ಲಿಕೆ ಮೊದಲು ವಿಶೇಷ ಪಿಪಿ ನೇಮಕಕ್ಕೆ ನಾವು ಪ್ರಯತ್ನ ಮಾಡುತ್ತೇವೆ. ಅದೇ ರೀತಿ ತ್ವರಿತ ನ್ಯಾಯಾಲಯ ಸ್ಥಾಪನೆಗೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ಇಡೀ ಪ್ರಕರಣ ದೊಡ್ಡ ಸವಾಲಾಗಿತ್ತು
ಒಂದೆರೆಡು ಕೊಲೆಯಾಗುವುದೇ ದೊಡ್ಡ ವಿಚಾರ. ಅದರಲ್ಲೂ ಇಲ್ಲಿ ನಾಲ್ಕು ಮಂದಿ ಹತ್ಯೆಗೀಡಾಗಿದ್ದರು. ಇದರಿಂದ ಈ ಇಡೀ ಪ್ರಕರಣ ನಮಗೆ ದೊಡ್ಡ ಸವಾಲು ಆಗಿತ್ತು. ನಾಲ್ಕು ಜನರು ಕೊಲೆಗೀಡಾರುವುದರಿಂದ ಆರೋಪಿಯ ಟಾರ್ಗೆಟ್ ಯಾರೆಂಬುದು ನಮ

ಗೆ ಗೊತ್ತಾಗಲಿಲ್ಲ. ಇಡೀ ಕುಟುಂಬವೇ ಅಥವಾ ಒಬ್ಬರೇ ಆರೋಪಿಯ ಗುರಿಯಾಗಿತ್ತೆ ಎಂಬುದು ತಿಳಿದಿರಲಿಲ್ಲ ಎಂದು ಎಸ್ಪಿ ಡಾ.ಅರುಣ್ ತಿಳಿಸಿದರು.

ಈ ಮಧ್ಯೆ ಸಮಾಜದಲ್ಲೂ ಆಕ್ರೋಶ ವ್ಯಕ್ತವಾಗುತ್ತಿತ್ತು. ಪ್ರಕರಣ ವನ್ನು ಆದಷ್ಟು ಬೇಗ ಭೇದಿಸುವ ಬಗ್ಗೆ ನಮ್ಮ ಮೇಲೆ ಒತ್ತಡ ಇತ್ತು. ಬಳಿಕ ಒಂದೊಂದೇ ವಿಚಾರವನ್ನು ಪರಿಶೀಲನೆ ಮಾಡಿ, ವಿವಿಧ ಆಯಾಮ ಗಳಲ್ಲಿ ತನಿಖೆ ಮಾಡಿದಾಗ ಆರೋಪಿಯ ಪ್ರಮುಖ ಟಾರ್ಗೆಟ್ ಯಾರು ಎಂಬುದು ತಿಳಿದುಬಂತು ಎಂದರು.

ಅಕ್ರಮ ಚಟುವಟಿಕೆ ಬಗ್ಗೆಯೂ ತನಿಖೆ
ವಿಮಾನ ನಿಲ್ದಾಣದಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗಿದೆ. ಆದರೆ ಆ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಆತನ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡಿದ್ದೇವೆ. ಆತನಿಗೆ ಸಿಗುವ ಸಂಬಳದ ಮಿತಿಯಲ್ಲಿಯಲ್ಲೇ ಆತ ಆಸ್ತಿಪಾಸ್ತಿ ಮಾಡಿಕೊಂಡಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.

ಪ್ರವೀಣ್‌ಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆತ ಆಕೆಯ ಮೇಲಿನ ಅಸೂಯೆ, ವ್ಯಾಮೋಹದಿಂದಲೇ ಕೊಲೆ ಮಾಡಿದ್ದಾನೆ ಎಂಬುದು ದೃಢಪಟ್ಟಿದೆ. ಆರೋಪಿ ಈ ಹಿಂದೆ ಮನೆಗೆ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತ ಆನ್‌ಲೈನ್ ಮೂಲಕವೇ ಲೊಕೇಶನ್ ಪತ್ತೆ ಹಚ್ಚಿ ಮನೆಗೆ ಬಂದಿದ್ದಾನೆ ಎಂದರು.

ಜೈಲಿನಲ್ಲಿ ಪ್ರತ್ಯೇಕ ಸೆಲ್ ವ್ಯವಸ್ಥೆ
ಪ್ರವೀಣ್ ಚೌಗುಲೆ ಗಂಭೀರ ಪ್ರಕರಣದ ಆರೋಪಿಯಾಗಿರುವುದರಿಂದ ಆತನಿಗೆ ಜೈಲಿನಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಅದರಂತೆ ಆತನನ್ನು ಮುಂಜಾಗೃತಾ ಕ್ರಮವಾಗಿ ಪ್ರತ್ಯೇಕ ಸೆಲ್ ನಲ್ಲಿ ಇಟ್ಟು ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ತಿಳಿಸಿದರು.

‘ಇಂತಹ ಗಂಭೀರ ಪ್ರಕರಣ ಸಂಭವಿಸಿದಾಗ ಸಮಾಜದಲ್ಲಿ ಅಶಾಂತಿ ಸೃಷ್ಠಿಯಾಗುತ್ತಿದ್ದರೆ ನಾವು ಕಾನೂನು ಸುವ್ಯವಸ್ಥೆ ಕಡೆಯೇ ಗಮನ ಕೊಡ ಬೇಕಾಗಿತ್ತು. ಇದರಿಂದ ತನಿಖೆ ವಿಳಂಬವಾಗುವ ಸಾಧ್ಯತೆ ಇತ್ತು. ಆದರೆ ಇದಕ್ಕೆಲ್ಲ ಸಾರ್ವಜನಿಕರು ಅವಕಾಶ ನೀಡದೆ ಬಹಳಷ್ಟು ಸಹಕಾರ ನೀಡಿದ್ದಾರೆ. ಸ್ಥಳೀಯರು ಪರಿಸರದಲ್ಲಿ ದೀಪಾವಳಿ ಹಬ್ಬವನ್ನು ಕೂಡ ಆಚರಿಸಿರಲಿಲ್ಲ’ ಎಂದು ಎಸ್ಪಿ ಡಾ.ಅರುಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ ಹಾಜರಿದ್ದರು.

 

Read These Next

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ: ಮರಳು ಸಮಸ್ಯೆ ಶಾಶ್ವತ ಪರಿಹಾರವನ್ನು ಕೊಡಲು ಕಾರ್ಮಿಕರ ಒಕ್ಕೂಟದ ಆಗ್ರಹ

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮರಳು ಮೂಲ ವಸ್ತುವಾಗಿ ಅತೀ ಮುಖ್ಯ ಪಾತ್ರವಹಿಸಿದೆ. ಆದರೆ, ಸರಕಾರ ಮತ್ತು ಸ್ಥಳೀಯಾಡಳಿತದ ಅವೈಜ್ಞಾನಿಕ ...

ಕಾರವಾರ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ನೊಂದಣಿ ಕೇಂದ್ರ ತೆರೆಯಿರಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲ ಯೋಜನೆಯಲ್ಲಿ ಜಿಲ್ಲೆಯ ರೈತರಿಂದ ಭತ್ತ ಖರೀದಿ ಮಾಡುವ ಕುರಿತಂತೆ, ನೊಂದಣಿ ...

ಕಾರವಾರ: ಹಾಸ್ಟೆಲ್ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಳಜಿ ವಹಿಸಿ : ಎಸ್.ಕೆ. ವಂಟಿಗೋಡಿ

ವಿದ್ಯಾಭ್ಯಾಸಕ್ಕಾಗಿ ತಮ್ಮ ಪೋಷಕರನ್ನು ಬಿಟ್ಟು ಬಂದು ಹಾಸ್ಟೆಲ್ ಗಳಲ್ಲಿ ನೆಲೆಸಿ, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ...

ಶಿಗ್ಗಾಂವಿ: ಬ್ಯಾಲೆಟ್ ಬಾಕ್ಸ್‌ ಗಳು ಚರಂಡಿಯಲ್ಲಿ ಪತ್ತೆ; ಉಪಚುನಾವಣೆ ಮುಗಿದ ಮರುದಿನವೇ ನಡೆದ ಘಟನೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ...

ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ; ಶಾಂತಿಯುತ ಮತದಾನ; ಮತಯಂತ್ರ ಸೇರಿದ ಅಭ್ಯರ್ಥಿಗಳ ಭವಿಷ್ಯ; ನ.23ರಂದು ಫಲಿತಾಂಶ

ರಾಜ್ಯದ ಮೂರು ಕ್ಷೇತ್ರಗಳಿಗೆ ಬುಧವಾರ ನಡೆದ ಉಪಚುನಾವಣೆಯಲ್ಲಿ ಯಾವುದೇ ಗೊಂದಲಗಳಿಲ್ಲದೆ, ಬಹುತೇಕ ಶಾಂತಿಯುತವಾಗಿ ಮತದಾನವಾಗಿದೆ. ...

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಭ್ರಷ್ಟಾಚಾರ ಆರೋಪ ಪ್ರಧಾನಿ ಮೋದಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿಎಂ ಸವಾಲು

ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂದು ಸುಳ್ಳಾರೋಪ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದನ್ನು ...