ಭಟ್ಕಳ: ಉಪರಾಷ್ಟ್ರಪತಿಗಳು ಉದ್ಘಾಟಿಸಿದ ವೆಂಕಟಾಪುರ ಸೇತುವೆ ಮುಪ್ಪಾಯಿತೇ?
ಭಟ್ಕಳ: ಕಳೆದ ಒಂದು ದಶಕದ ಅವಧಿಯಲ್ಲಿ ಹೆದ್ದಾರಿ ಪ್ರಾಧಿಕಾರ, ಐಆರ್‍ಬಿ ಕಂಪನಿ ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಇದ್ದ ರಸ್ತೆಯನ್ನು ಅಗೆದು, ಹೊಸ ರಸ್ತೆಯನ್ನೂ ಪೂರ್ಣಗೊಳಿಸದೇ ಜನರನ್ನು ಸಂಕಷ್ಟಕ್ಕೆ ನೂಕಿ ಹಣ ವಸೂಲಿ ದಂಧೆಗೆ ಇಳಿದಿರುವ ಕಂಪನಿಗೆ ಮೂಗು ದಾರಿ ತೊಡಿಸುವವರು ಇಲ್ಲವೇ ಇಲ್ಲ ಎಂಬಂತೆ ಆಗಿದೆ. ಕಳೆದ ಕೆಲ ದಿನಗಳಿಂದ ಸಂಚಾರಕ್ಕೆ ತಡೆ ನೀಡಿ ಬ್ಯಾರಿಕೇಡ್ ಅಳವಡಿಸಿಕೊಂಡಿರುವ ವೆಂಕಟಾಪುರ ಹಳೆಯ ಸೇತುವೆ, ಪ್ರಾಧಿಕಾರದ ಅಧಿಕಾರಿಗಳ ದೂರದೃಷ್ಟಿಯಿಲ್ಲದ, ನಿರ್ಲಕ್ಷ್ಯತನದ ಹೊಸ ಕಥೆಯನ್ನು ಬಿಚ್ಚಿಟ್ಟಿದೆ.
ಭಟ್ಕಳ ವೆಂಕಟಾಪುರ ಸೇತುವೆಯ ಇತಿಹಾಸ 5 ದಶಕದ ಹಿಂದಿನದ್ದು. ಅಲ್ಲಿಯವರೆಗೆ ಭಟ್ಕಳ ಭಾಗದ ಜನರು ಶಿರಾಲಿ, ಅಲ್ಲಿಂದ ಮುಂದಕ್ಕೆ ಹೋಗಬೇಕೆಂದರೆ ದೋಣಿಯಲ್ಲಿ ಹೊಳೆ ದಾಟ ಬೇಕಿತ್ತು. ವಾಹನಗಳು ಪುಟ್ಟ ಬಾರ್ಜನ್ನು ಹತ್ತಿ ಹೊಳೆಯಾಚೆಯ ದಡವನ್ನು ತಲುಪಬೇಕಿತ್ತು. ಅಕ್ಕಪಕ್ಕದ ಹಳ್ಳಿಯ ಜನರು
ಕಳೆದ 5 ದಶಕಗಳಲ್ಲಿ ವೆಂಕಟಾಪುರ ಸೇತುವೆ ಸಣ್ಣಪುಟ್ಟ ದುರಸ್ತಿಯನ್ನು ಕಂಡಿದ್ದು ಬಿಟ್ಟರೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿಲ್ಲ. ಸೇತುವೆ ಮೇಲಿನ ಪ್ರಯಾಣವನ್ನು ಯಾಕೆ ನಿರ್ಬಂಧಿಸಲಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಸಂಚಾರಕ್ಕೆ ಯೋಗ್ಯವಿಲ್ಲದಿದ್ದರೆ ಹೊಸ ಸೇತುವೆ ನಿರ್ಮಿಸಬೇಕಲ್ಲವೇ? - ವೆಂಕ್ಟಯ್ಯ ಭೈರುಮನೆ, ಸದಸ್ಯರು ಗ್ರಾಪಂ ಬೆಂಗ್ರೆ |
ಹೊಳೆಯಾಚೆಯ ತಮ್ಮ ಸಂಬಂಧಿಕರ ಮನೆಗೆ ಹೋಗಲು ಬೇರೆ ದಾರಿಯೇ ಇದ್ದಿರಲಿಲ್ಲ. ಜನರ ಸಂಕಷ್ಟ, ಬೇಡಿಕೆಯನ್ನು ಅರಿತು ಕೇಂದ್ರ ಸರಕಾರ ಸೇತುವೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. 1968ರಲ್ಲಿ ಅಂದಿನ ಉಪರಾಷ್ಟ್ರಪತಿಗಳಾಗಿದ್ದ ವಿ.ವಿ.ಗಿರಿಯವರೇ ಭಟ್ಕಳಕ್ಕೆ ಬಂದು ಸೇತುವೆಯನ್ನು ಉದ್ಘಾಟಿಸಿದ್ದರು. ( ವಿ.ವಿ.ಗಿರಿಯವರು 1969 ಆ.24ರಿಂದ ಆ.24 1974ರವರೆಗೆ ಭಾರತದ 4ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ) ಸೇತುವೆ ಉದ್ಘಾಟನೆಗೊಂಡು 56 ವರ್ಷಗಳು ಕಳೆದು ಹೋಗಿವೆ. ಅಲ್ಲಿಂದ ಇಲ್ಲಿಯವರೆಗೂ ಜನರಿಗೆ ಸೇತುವೆ ಆತಂಕ ತಂದಿಲ್ಲ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಳೆಯ ವೆಂಕಟಾಪುರ ಸೇತುವೆಯ ಪರೀಕ್ಷೆ ನಡೆಸಿ ಸೇತುವೆ ಮೇಲಿನ ಸಂಚಾರವನ್ನು ಮುಂದುವರಿಸಿದ್ದಲ್ಲದೇ, ಚತುಷ್ಪಥ ಹೆದ್ದಾರಿಗಾಗಿ ಗುತ್ತಿಗೆದಾರ ಐಆರ್‍ಬಿ ಕಂಪನಿಯ ಮೂಲಕ ಸೇತುವೆ ಪಕ್ಕದಲ್ಲಿ ದ್ವಿಪಥ ಸೇತುವೆ ನಿರ್ಮಾಣ ಕಾರ್ಯವನ್ನು ಮಾಡಿ ಮುಗಿಸಿತು. ಯಾರೂ ತಕರಾರು ತೆಗೆಯಲಿಲ್ಲ. ಈ ನಡುವೆ ತಿಂಗಳ ಹಿಂದೆ ಕಾರವಾರದ ಪುರಾತನ ಕಾಳಿ ಸೇತುವೆ ಕುಸಿದು ಬಿದ್ದು ದೇಶ ವ್ಯಾಪಿ ಸುದ್ದಿಯಾಯಿತು. ಹಳೆಯ ಸೇತುವೆಗಳ ಮೇಲಿನ ಸಂಚಾರದ ಬಗ್ಗೆ ಚರ್ಚೆ ಆರಂಭವಾಯಿತು.
ಏಕಾಏಕಿ ಎಚ್ಚೆತ್ತುಕೊಂಡ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯ ನಡುವೆ ಬ್ಯಾರಿಕೇಡ್ ಅಳವಡಿಸಿ ವೆಂಕಟಾಪುರ ಹಳೆಯ ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ವಾಹನಗಳು ಹೊಸ ಸೇತುವೆಯ ಮೇಲೆ ದ್ವಿಪಥ ಪ್ರಯಾಣವನ್ನು ಮುಂದುವರೆಸಿವೆ. ಇದು ಸ್ಥಳೀಯವಾಗಿ ಮತ್ತೊಂದು ರೀತಿಯ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. ಸೇತುವೆ ಸಂಚಾರಕ್ಕೆ ಯೋಗ್ಯವಿಲ್ಲ ಎಂದಾದರೆ ಹೆದ್ದಾರಿ ಪ್ರಾಧಿಕಾರ ಅದನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಯಾಕೆ ಮುಂದಾಗಿಲ್ಲ, ಕಾಳಿ ಸೇತುವೆ ಕುಸಿಯುವವರೆಗೂ ವೆಂಕಟಾಪುರ ಸೇತುವೆ ಮೇಲಿನ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿ ಕೊಟ್ಟಿದ್ದಾದರೂ ಏಕೆ, ಈಗ ಹೊಸ ಸೇತುವೆ ನಿರ್ಮಿಸಲಾಗುತ್ತದೆಯೋ, ದುರಸ್ತಿ ಕಾರ್ಯವೋ ಇತ್ಯಾದಿ ತರೇವಾರಿ ಪ್ರಶ್ನೆಗಳು ವೆಂಕಟಾಪುರ ಸೇತುವೆ ಸುತ್ತ ಸುತ್ತುತ್ತಲೇ ಇವೆ.
ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನೇ ಸರಿಯಾಗಿ ನಿರ್ವಹಿಸದ ಐಆರ್‍ಬಿ ಕಂಪನಿ ಈಗ ಸೇತುವೆಯನ್ನು ನಿರ್ಮಿಸುವುದೇ ಎನ್ನುವ ಪ್ರಶ್ನೆಯೂ ಇದೆ. ಆಗೊಮ್ಮೆ ಈಗೊಮ್ಮೆ ಮೋಟಾರ್ ಬೈಕ್‍ಗಳು, ಕಾರುಗಳು ಬ್ಯಾರಿಕೇಡ್‍ಗಳ ನಡುವೆ ನುಗ್ಗಿ ಹಳೆಯ ಸೇತುವೆಯ ಮೇಲೆಯೇ ಓಡಾಡುತ್ತಿದ್ದು, ವೆಂಕಟಾಪುರ ಹಳೆ ಸೇತುವೆ ಮುಪ್ಪಾದ ಬಗ್ಗೆಯೂ ಖಾತರಿ ಇಲ್ಲವಾಗಿದೆ!