ಗೋಕರ್ಣ : ತದಡಿ ಬಳಿ ಮುಳುಗಿದ ಪ್ರವಾಸಿಗರ ಬೋಟ್
ಗೋಕರ್ಣ: ಪ್ರವಾಸಿಗರನ್ನ ಹೊತ್ತೋಯ್ದ ಟೂರಿಸ್ಟ್ ಬೋಟ್ ಮುಳುಗಿದ ತದಡಿ ಸಮೀಪದ ಮುಡಂಗಿ ಬಳಿ ರವಿವಾರ ಸಂಜೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ.
ಒಟ್ಟು 42 ಪ್ರವಾಸಿಗರನ್ನು ಕರೆದುಕೊಂಡು ಹೋಗತ್ತಿರುವ ವೇಳೆ ಪಲ್ಟಿ ಹೊಡೆದಿದ್ದು, ಪ್ರಯಾಣಿಕರು ನೀರಿನಲ್ಲಿ ಮುಳಗಿದ್ದರು, ತಕ್ಷಣ ಸ್ಥಳೀಯ ಬೋಟ್ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆಯ ಬೋಟ್ ನಿಂದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಕೆಲವು ಪ್ರವಾಸಿಗರು ಈಜಾಡಿ ದಡ ಸೇರಿದ್ದಾರೆ.
ಹೈದ್ರಾಬಾದ, ತೆಲಂಗಾಣ, ಮಹಾರಾಷ್ಟ್ರ, ಮತ್ತು ಹಾಸನದ ಪ್ರವಾಸಿಗರಾಗಿದ್ದು, ಇವರಲ್ಲಿ ಮಹಿಳೆಯರು, ಮಕ್ಕಳು, ಯುವಕರು ಸೇರಿದ್ದಾರೆ. ಪ್ರಯಾಣಿಕರ ಮೊಬೈಲ್ ಮತ್ತಿತರ ಬೆಲೆಬಾಳುವ ವಸ್ತು ನೀರುಪಾಲಾಗಿದೆ.
ರವಿವಾರವಾದ ಕಾರಣ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದು ಸಮುದ್ರದಲ್ಲಿನ ಚಟುವಟಿಕೆಗಾಗಿ ತದಡಿಯ ಗಣೇಶ ರಮೇಶ ಮೂಡಂಗಿ ಎಂಬುವವರ ಬೋಟ್‌ನಲ್ಲಿ ಹಾಫ್‌ಮೂನ್ ಬೀಚ್ ಮತ್ತಿತರ ಕಡೆ ತೆರಳಿ ನೀರಿನಲ್ಲಿ ಈಜು ಮತ್ತಿತ್ತಿತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಾಗಿದ್ದರು ಎಂದು ತಿಳಿದು ಬಂದಿದೆ.
ಗೋಕರ್ಣ ಪೊಲೀಸ್ ಠಾಣೆ ಪಿ.ಐ. ಯೋಗೇಶ ಕೆ.ಎಂ. ಹಾಗೂ ಸಿಬ್ಬಂದಿ, ಕರಾವಳಿ ಕಾವಲು ಪೊಲೀಸ್ ಪಡೆಯ ಪಿ.ಎಸ್.ಐ. ಅನೂಪ ನಾಯಕ ಮತ್ತು ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು. ಈ ಘಟನೆ ಕುರಿತು ಕರಾವಳಿ ಕಾವಲು ಪಡೆಯ ಪಿ.ಎಸ್.ಐ.ಅನೂಪ ನಾಯಕ ಮಾತನಾಡಿ ಪ್ರಯಾಣಿಕ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಂಡು ತನಿಖೆ `ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.