ಟೋಕಿಯೋ: ಹಾಲಿ ಚಾಂಪಿಯನ್ ಮಾರಿಯಪ್ಪನ್ ತಂಗವೇಲು ಹಾಗೂ ಶರದ್ ಕುಮಾರ್ ಮಂಗಳವಾರ ನಡೆದ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ42 ವಿಭಾಗದ ಫೈನಲ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಮಾರಿಯಪ್ಪನ್ 1.86 ಮೀ. ಎತ್ತರಕ್ಕೆ ಜಿಗಿದು 2ನೇ ಸ್ಥಾನ ಪಡೆದರೆ, ಅಮೆರಿಕದ ಸ್ಯಾಮ್ ಗ್ರೇವ್ 1.88 ಮೀ.ಎತ್ತರಕ್ಕೆ ಜಿಗಿದು ಮೊದಲ ಸ್ಥಾನ ಪಡೆದರು.
ಕುಮಾರ್ 1.83 ಮೀ. ಎತ್ತರಕ್ಕೆ ಜಿಗಿಯುವುದರೊಂದಿಗೆ ಕಂಚು ಜಯಿಸಿದರು. ತಂಗವೇಲು ಪ್ಯಾರಾಲಿಂಪಿಕ್ಸ್ ನಲ್ಲಿ 2ನೇ ಪದಕ ಜಯಿಸಿದರು. 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಕೇವಲ 4 ವರ್ಷಗಳ ಹಿಂದೆ ಕ್ರೀಡೆಯನ್ನು ಆಯ್ದುಕೊಂಡಿರುವ ಭಾರತೀಯ ಶೂಟರ್ ಸಿಂಗ್‌ರಾಜ್ ಅಧಾನ ಮಂಗಳವಾರ ಪ್ಯಾರಾಲಿಂಪಿಕ್ಸ್‌ನ ಪುರುಷರ 10 ಮೀ. ಏರ್ ಪಿಸ್ತೂಲ್ ಎಸ್ಎಚ್1 ಸ್ಪರ್ಧೆಯ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸಿದರು. ಅಧಾನ ಒಟ್ಟು 216.8 ಅಂಕ ಕಲೆಹಾಕಿ 3ನೇ ಸ್ಥಾನ ಪಡೆದರು. ಭಾರತಕ್ಕೆ ಶೂಟಿಂಗ್‌ನಲ್ಲಿ ಲಭಿಸಿರುವ 2ನೇ ಪದಕ ಇದಾಗಿದೆ. ಸೋಮವಾರ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಅವನಿ ಲೇಖರ ಚಿನ್ನ ಜಯಿಸಿದ್ದರು.