ಭಟ್ಕಳ: ಜಾಲಿ ಪ.ಪಂ. ವ್ಯಾಪ್ತಿಯ ಗೋವು ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು; ಮೂವರು ಆರೋಪಿಗಳ ಬಂಧನ

Source: S O News | By Staff Correspondent | Published on 22nd October 2024, 5:55 PM | Coastal News |

ಭಟ್ಕಳ:  ಇತ್ತೀಚೆಗೆ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗೋವು ಕಳ್ಳತನ ನಡೆದಿದ್ದು, ಕಳ್ಳರು ಕಾರಿನಲ್ಲಿ ದನವೊಂದನ್ನು ಹೊತ್ತೊಯ್ಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಭಟ್ಕಳದಲ್ಲಿ ವ್ಯಾಪಕ ಆಕ್ರೋಶ ಉಂಟಾಗಿದ್ದು ತಂಝೀಮ್ ಸಂಸ್ಥೆ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ನ ನಾಗರೀಕರು ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಡ ಹೇರಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ತಕ್ಷಣವೇ ಕಾರ್ಯಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಟ್ಕಳ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಂಧಿತರನ್ನು ಪಡಬಿದ್ರಿಯ ಜಬ್ಬಾರ ಹುಸೈನ್ ಬ್ಯಾರಿ (37), ಹಾಗೂ ಭಟ್ಕಳ ನೀವಾಸಿಗಳಾದ ಜಲೀಲ್ ಹುಸೈನ್ (39) ಮತ್ತು ಮೊಹಮ್ಮದ್ ಹನೀಫ್ (27) ಎಂದು ಗುರುತಿಸಲಾಗಿದೆ.

ಪೊಲೀಸರು ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಕಳ್ಳತನ ಮಾಡಲಾದ ಜಾನುವಾರುಗಳನ್ನು ಈಗಾಗಲೇ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಗುರುವಾರ-ಶುಕ್ರವಾರ ನಡುವಿನ ರಾತ್ರಿ, ಮೂರೂವರೆ ಗಂಟೆ ಸುಮಾರು  ಕಳ್ಳರು ರಸ್ತೆಯಲ್ಲಿ ನಿಂತುಕೊಂಡಿದ್ದ ದನಗಳಿಗೆ ಮತ್ತು ಭರಿಸುವ ಆಹಾರ ನೀಡಿ ಅವುಗಳನ್ನು ತಮ್ಮ ಕಾರಿನಲ್ಲಿ ತುಂಬಿಕೊಂಡು ಪರಾರಿಯಾದ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ನಂತರ ಸ್ಥಳೀಯರು ಹಿಂದು ಸಂಘಟನೆಗಳ ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿ ಪ್ರತಿಭಟಿಸಿದ್ದರು. ಗೋವಿನ ಕಳ್ಳತನಗಳು ನಿರಂತರವಾಗಿ ನಡೆಯುತ್ತಿವೆ ಮತ್ತು ಅನೇಕ ದೂರುಗಳಿದ್ದರೂ, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಕಳ್ಳತನ ಮಾಡಲಾದ ಪಶುಗಳನ್ನು ಹತ್ಯೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದೂ ಆರೋಪಿಸಲಾಗಿತ್ತು.

ಈ ಸಂಬಂಧ, ಭಟ್ಕಳ ಮುಸ್ಲಿಮರ ಪ್ರಮುಖ ಸಮಾಜಿಕ ಮತ್ತು ರಾಜಕೀಯ ಸಂಘಟನೆ 'ಮಜ್ಲಿಸ್ ಇಸ್ಲಾಹ್-ವ-ತಂಝೀಮ್' ಕೂಡ ಪೊಲೀಸರೊಂದಿಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಕಳ್ಳತನದ ಸಂಬಂಧಪಟ್ಟವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿತ್ತು. ಜೊತೆಗೆ ಇಸ್ಲಾಮಿಕ್ ದೃಷ್ಟಿಕೋನದಲ್ಲಿ ಕದ್ದೊಯ್ಯಲಾದ ಪ್ರಾಣಿಗಳ ಮಾಂಸವನ್ನು ತಿನ್ನುವುದು ಹರಾಮ್ ಎಂದು ಹೇಳಿಕೆ ನೀಡಿತ್ತು.

ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ,  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್‍ಪಿ ಜಯಕುಮಾರ್,  ಭಟ್ಕಳ ಡಿವೈಎಸ್ಪಿ ಮಹೇಶ್ ಮತ್ತು ಪೊಲೀಸ ಇನ್ಸಪೇಕ್ಟರ್ ಗೋಪಿಕೃಷ್ಣ ಕೆ.ಆರ್ ನೇತ್ರತ್ವದಲ್ಲಿ ಪಿ.ಎಸ್.ಐ ತಿಮ್ಮಪ್ಪ. ಎಸ್. ಸೋಮರಾಜ ರಾಠೋಡ, ಎ.ಎಸ್.ಐ ಗೋಪಾಲ ನಾಯಕ, ರವಿ ನಾಯ್ಕ ಹವಾಲ್ದಾರಗಳಾದ ಜಯರಾಮ ಹೊಸಕಟ್ಟಾ, ಗಿರೀಶ ಅಂಕೋಲೆಕರ, ಉದಯ ನಾಯ್ಕ, ದೀಪಕ. ಎಸ್. ನಾಯ್ಕ ದೇವು ನಾಯ್ಕ, ಅರುಣ ಪಿಂಟೋ, ಬಂಗಾರಪ್ಪ ಓಣಿಕೇರಿ, ಕಿರಣ ನಾಯ್ಕ, ಪೊಲೀಸ ಸಿಬ್ಬಂದಿಗಳಾದ ಲೋಕೇಶ್, ಮಹಾಂತೇಶ, ಕಾಶೀನಾಥ, ಕಿರಣ ಪಾಟೀಲ್, ಕೃಷ್ಣಾ. ಎನ್.ಜಿ ಪಾಲ್ಗೊಂಡಿದ್ದರು.

ಮೂಲಗಳ ಪ್ರಕಾರ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ಕಾರವಾರ ಜೈಲಿಗೆ ಕಳುಹಿಸಲಾಗಿದೆ. ಹಿಂದೆ ನಡೆದ ಗೋವು ಕಳ್ಳತನ ಪ್ರಕರಣದಲ್ಲಿ ಈಗ ಬಂಧಿತ ಈ ಮೂವರು ಆರೋಪಿಗಳು ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read These Next

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ಮೂರು ಕ್ಷೇತ್ರಗಳಲ್ಲಿ ಜಯಭೇರಿ: ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಭಟ್ಕಳ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಭಟ್ಕಳದಲ್ಲಿ ...