ಮಂಗಳೂರು ಪೊಲೀಸ್ ಗೋಲಿಬಾರ್ ಪ್ರಕರಣ; ದಿ.ವೈರ್ ತನಿಖಾ ವರದಿ ಏನು ಹೇಳತ್ತದೆ?

Source: sonews | By Staff Correspondent | Published on 30th December 2019, 5:35 PM | State News | National News | Incidents | Don't Miss |

ಸುಖನ್ಯಾ ಶಾಂತ

ಪ್ರಧಾನಿ ನರೇಂದ್ರ ಮೋದಿಯವರಂತೆ ಮಂಗಳೂರು ಪೊಲೀಸರೂ ಪ್ರತಿಭಟನಾಕಾರರನ್ನು “ತಮ್ಮ ಬಟ್ಟೆಯಿಂದ” ಗುರುತಿಸುತ್ತಿದ್ದಾರೆಂದು ತೋರುತ್ತದೆ. ಕೋಮು ಮನಸ್ಥಿತಿಯ ಒಂದು ಲಜ್ಜೆಗೆಟ್ಟ ಪ್ರದರ್ಶನದಲ್ಲಿ, ಮಂಗಳೂರು ಪೊಲೀಸರು, ಡಿಸೆಂಬರ್ 19 ರ ಪ್ರತಿಭಟನೆಯ ನಂತರ ನೋಂದಾಯಿಸಲ್ಪಟ್ಟ 24 ಪ್ರಥಮ ಮಾಹಿತಿ ವರದಿಗಳಲ್ಲಿ (ಎಫ್‌ಐಆರ್) ಕನಿಷ್ಠ ಆರರಲ್ಲಿ, “ಅಪರಿಚಿತ ಮುಸ್ಲಿಂ ಯುವಕರ” ಮೇಲೆ ಕಾನೂನುಬಾಹಿರವಾಗಿ ಸಭೆ ಸೇರಿದ್ದು, ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯೆಸಗಿದ್ದು ಮತ್ತು ದೇಶದ್ರೋಹವೂ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸಿದ್ದಾರೆ. ಅದೇವೇಳೆ, 2,000 ಕ್ಕೂ ಹೆಚ್ಚು ಪ್ರತಿಭಟನಾಕಾರರು “ಅಪರಿಚಿತರು” ಎಂದು ಎಫ್ಐಆರ್ ಹೇಳಿದರೆ, ಪೊಲೀಸರು ಅವರನ್ನು ಮುಸ್ಲಿಂ ಎಂದು ಭಾವಿಸಿದ್ದಾರೆ.

ಮಂಗಳೂರು ನಗರದಾದ್ಯಂತದ ವಿವಿಧ ಪೊಲೀಸ್ ಠಾಣೆಗಳಿಂದ ಪಡೆಯಲಾದ 24 ಎಫ್‌ಐಆರ್‌ಗಳಲ್ಲಿ 15 ಅನ್ನು ದ ವೈರ್ ಸೂಕ್ಷ್ಮವಾಗಿ ಅಧ್ಯಯನ ಮಾಡಿದೆ. ಈ ವರದಿಗಳಿಂದ, ಪೊಲೀಸರು ಈ ಘಟನೆಯನ್ನು ತೀವ್ರ ಪಕ್ಷಪಾತದಿಂದ ನೋಡಿದ್ದಾರೆ ಮತ್ತು “ಅಪರಿಚಿತ”, ಆದರೆ “ಮುಸ್ಲಿಂ ವ್ಯಕ್ತಿಗಳ” ವಿರುದ್ಧ ಕೊಲೆ, ಗಲಭೆ ಮತ್ತು ದೇಶದ್ರೋಹದ ಆರೋಪಗಳನ್ನು ಹೊರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ನಂತೆ, ಮಂಗಳೂರಿನ ಪ್ರಸಿದ್ಧ ಜೀನತ್ ಬಕ್ಷ್ ಜುಮಾ ಮಸೀದಿಯ ಬಳಿ ಕಡಿಮೆ ತೀವ್ರತೆಯ ಸ್ಫೋಟಕ ಅಂಗಡಿಯನ್ನು ಹೊಂದಿರುವ ಎಂ.ಮನೋಹರ ಕಿಣಿ ಅವರ ಅಂಗಡಿ ಮೇಲೆ “ಮುಸ್ಲಿಂ ಪುರುಷರ ತಂಡ” ದಾಳಿ ಮಾಡಿದಾಗ ಆ ಅಂಗಡಿಯನ್ನು ಮುಚ್ಚಲಾಗಿದೆ ಮತ್ತು ಒಂದು ಲಕ್ಷ ರೂಪಾಯಿಯ ಹಾನಿ ಸಂಭವಿಸಿದೆ. “ಮುಸ್ಲಿಂ ಪುರುಷರ ತಂಡ” ದಾಳಿ ಮಾಡಿದಾಗ ತನ್ನ ಅಂಗಡಿಯನ್ನು ಮುಚ್ಚಲಾಗಿದೆ ಎಂದು ಕಿನಿಯವರ ದೂರಿನಲ್ಲಿ ಹೇಳಲಾಗಿದೆ. ಆದರೆ, ಜಿಲ್ಲಾಡಳಿತ ಡಿ. ೧೯ರಂದು ಕರ್ಫ್ಯೂ ವಿಧಿಸಿದ್ದರಿಂದ ಡಿಸೆಂಬರ್ 21 ರಂದು ತಾನು ತನ್ನ ಅಂಗಡಿಗೆ ಭೇಟಿ ನೀಡಿದೆ ಮತ್ತು ನಂತರ ಪೊಲೀಸರಲ್ಲಿ ದೂರು ದಾಖಲಿಸಿದ್ದೇನೆ ಎಂದವರು ಹೇಳಿದ್ದಾರೆ.

ಅಂದರೆ, ಎಫ್ಐಆರ್ ಪ್ರಕಾರ, ಕಿನಿಯವರು ದಾಳಿಕೋರರನ್ನು ನೋಡಲಿಲ್ಲ ಮತ್ತು ಕೆಲವು ದಿನಗಳ ನಂತರ ತನ್ನ ಅಂಗಡಿಯ ದರೋಡೆಕೋರರನ್ನು ಪತ್ತೆಹಚ್ಚಿದ್ದಾರೆ. ದಿ ವೈರ್ ಕಿನಿಯವರನ್ನು ಸಂಪರ್ಕಿಸಿ, ತನ್ನ ಅಂಗಡಿಗೆ ಹಾನಿ ಮಾಡಿದವರ ಗುರುತನ್ನು ಹೇಗೆ ಖಚಿತವಾಗಿ ಹೇಳುತ್ತೀರಿ ಎಂದು ಕೇಳಿತು. “ಅಂತಹ ಕೃತ್ಯದಲ್ಲಿ ಬೇರೆ ಯಾರು ಪಾಲ್ಗೊಳ್ಳಬಹುದು?” ಎಂದು ಕಿನಿಯವರು ಈ ವರದಿಗಾರನಲ್ಲಿ ಮರು ಪ್ರಶ್ನಿಸಿದರು. ಈ ಘಟನೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪಿನ ಪಾಲ್ಗೊಳ್ಳುವಿಕೆ ಇದೆ ಎಂದು ನೀವು ಹೇಗೆ ಶಂಕಿಸುವಿರಿ ಎಂದು ಕೇಳಿದಾಗ, ಕಿನಿಯವರು, “ಘಟನೆಯ ಸಮಯದಲ್ಲಿ ನಾನು ಅಲ್ಲಿ ಇಲ್ಲದಿದ್ದರೂ, ಅವರು ಮುಸ್ಲಿಂ ಪುರುಷರು ಎಂದು ನನಗೆ ಖಚಿತವಾಗಿದೆ” ಎಂದು ಹೇಳಿದರು. ಕಾನೂನುಬಾಹಿರವಾಗಿ ಸೇರಿರುವುದು, ಕಳ್ಳತನ ಮತ್ತು ಅತಿಕ್ರಮಣಕ್ಕಾಗಿ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಲವಾರು ವಿಭಾಗಗಳನ್ನು ಕೇಸು ದಾಖಲಿಸಿದ್ದಾರೆ.

ಅದೇ ರೀತಿ, ಅದೇ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾದ ಮತ್ತೊಂದು ಎಫ್‌ಐಆರ್‌ನಲ್ಲಿ, 42 ವರ್ಷದ ಆಭರಣ ಅಂಗಡಿ ಮಾಲೀಕ ರವೀಂದ್ರ ನಿಕ್ಕಮ್ ಅವರು ಮಂಗಳೂರಿನ ಭವಾನಿ ಬೀದಿಯಲ್ಲಿರುವ ತಮ್ಮ ಸಂಬಂಧಿಕರ ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಯ ಮೇಲೆ ಸುಮಾರು 50-60ರಷ್ಟು ಮುಸ್ಲಿಂ ಯುವಕರು ದಾಳಿ ನಡೆಸುತ್ತಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ. ನಿಕ್ಕಮ್ ಅವರ ಅಂಗಡಿಯು, ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ನ ಪಕ್ಕದಲ್ಲಿದೆ ಮತ್ತು ಎಫ್‌ಐಆರ್ ಪ್ರಕಾರ, “50-60 ಮುಸ್ಲಿಂ ಪುರುಷರ ಜನಸಮೂಹ” ಅವರ ಅಂಗಡಿಯತ್ತ ಹೋಗುತ್ತಿರುವುದು ಕಂಡುಬಂದಿದೆ. ನಿಕ್ಕಮ್ ಅವರನ್ನು ದಿ ವೈರ್ ಸಂಪರ್ಕಿಸಿದಾಗ, ಅವರ “ದೇಹ ಭಾಷೆ” (ಬಾಡಿ ಲಾಂಗ್ವೇಜ್) ಅನ್ನು ನೋಡುವ ಮೂಲಕ ಪುರುಷರನ್ನು ಮುಸ್ಲಿಮರೆಂದು ಗುರುತಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಈ “ಬಾಡಿ ಲಾಂಗ್ವೇಜ್” ಎಂದರೇನು ಮತ್ತು ಅದು “ಮುಸ್ಲಿಮರ ದೇಹ ಭಾಷೆ” ಎಂದು ಅಂದುಕೊಳ್ಳಲು ಕಾರಣಗಳನ್ನು ವಿವರಿಸಬಹುದೇ ಎಂದು ಈ ವರದಿಗಾರ ನಿಕ್ಕಮ್ ಅವರಲ್ಲಿ ಕೇಳಿದಾಗ, ನಿಕ್ಕಮ್ ತನ್ನ ಪ್ರತಿಕ್ರಿಯೆಯನ್ನು ಬದಲಾಯಿಸಿ, “ಅವರು ಬ್ಯಾರಿ ಭಾಷೆಯಲ್ಲಿ ಕೆಲವು ಸಾಲುಗಳಷ್ಟು ಮಾತನಾಡಿದರು ಮತ್ತು ಅದು ಅವರ ಮುಸ್ಲಿಂ ಗುರುತಿನ ಬಗ್ಗೆ ನನ್ನನ್ನು ಖಚಿತಪಡಿಸಿತು ಎಂದವರು ಹೇಳಿದರು.

ಸಾಮಾನ್ಯವಾಗಿ ದಕ್ಷಿಣ ಕನ್ನಡದ ಮುಸ್ಲಿಮರು ಬ್ಯಾರಿ ಭಾಷೆ ಮಾತನಾಡುತ್ತಾರೆ, ಆದರೆ ಅವರು ಮಾತ್ರ ಮಾತನಾಡುವುದಲ್ಲ. ಹಲವಾರು ಹಿಂದೂಗಳು, ವಿಶೇಷವಾಗಿ ಕೇರಳ ಗಡಿಯ ಬಳಿ ವಾಸಿಸುವವರು ಸಹ ಈ ಭಾಷೆಯನ್ನು ಮಾತನಾಡುತ್ತಾರೆ. ಈ ಪ್ರಶ್ನೆಯನ್ನು ಮುಂದಿಟ್ಟಾಗ, “ಆ ಪುರುಷರು ಮುಸ್ಲಿಮರು ಮಾಡುವ ವಿಶಿಷ್ಟ ರೀತಿಯಲ್ಲಿ ತಮ್ಮ ಪ್ಯಾಂಟ್ ಅನ್ನು ಮಡಚಿಟ್ಟಿದ್ದಾರೆ” ಎಂದು ನಿಕ್ಕಮ್ ಹೇಳಿದರು. ಅಲ್ಲಿ ಸೇರಿದ್ದ ಎಲ್ಲ ಪುರುಷರನ್ನೂ ಬಿಡಿ ಬಿಡಿಯಾಗಿ ನೋಡಲು ಮತ್ತು ಅವರ ಪ್ಯಾಂಟ್ ಅನ್ನು ಪರೀಕ್ಷಿಸಲು ನಿಮಗೆ ಸಾಧ್ಯವಾಯಿತೇ ಎಂದು ಕೇಳಿದಾಗ, “ನಾನು ಪ್ರತಿಯೊಬ್ಬ ವ್ಯಕ್ತಿಯ ಪ್ಯಾಂಟ್ ನೋಡಿದೆ. ಅವೆಲ್ಲವೂ ಮಡಿಚಿದ್ದವು ಎಂದು ನಿಕ್ಕಮ್ ಹೇಳಿದರು. ಇಂತಹ ಆಧಾರರಹಿತ ಆರೋಪಗಳನ್ನು ಪೊಲೀಸರು ಎಫ್‌ಐಆರ್‌ಗಳಲ್ಲಿ ದಾಖಲಿಸಿದ್ದಾರೆ. ಈ ಎರಡು ಪ್ರಕರಣಗಳಲ್ಲಿ, ದೂರುದಾರರು ಖಾಸಗಿ ವ್ಯಕ್ತಿಗಳಾಗಿದ್ದರೆ, ಮಂಗಳೂರು ಪೊಲೀಸರು ಕೂಡ ಎಫ್‌ಐಆರ್ ದಾಖಲಿಸುವಾಗ ಇದೇ ರೀತಿಯ, ಕೋಮುವಾದಿ ವಿಧಾನವನ್ನು ಅನುಸರಿಸಿದ್ದಾರೆ.

ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲ್ಪಟ್ಟ ಒಂದು ಎಫ್‌ಐಆರ್‌ನಲ್ಲಿ, ದೂರುದಾರ ಎನ್. ಮಹೇಶ್ ಅವರು, ಡಿಸೆಂಬರ್ 19 ರಂದು ಮಧ್ಯಾಹ್ನ 3: 45 ಕ್ಕೆ ಗಸ್ತು ಕರ್ತವ್ಯದಲ್ಲಿದ್ದಾಗ, ಸುಮಾರು “1500-2000 ಮುಸ್ಲಿಂ ಪುರುಷರ ಒಂದು ದೊಡ್ಡ ಜನಸಮೂಹ ”ತನ್ನ ವಾಹನವನ್ನು ಸುತ್ತುವರೆದು ದೊಡ್ಡ ಕಲ್ಲುಗಳು, ದೊಣ್ಣೆಗಳು ಮತ್ತು“ ಸೋಡಾ ಬಾಟಲಿಗಳಿಂದ ದಾಳಿ ಮಾಡಿತು. ದಾಳಿಯಲ್ಲಿ ವಾಹನಕ್ಕೆ ಹಾನಿಯಾಗಿದೆ ಮತ್ತು 1 ಲಕ್ಷ ರೂ.ಗಳ ಆಸ್ತಿ ನಾಶವಾಗಿದೆ ಎಂದು ತಮ್ಮ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. “1500-2000 ಮುಸ್ಲಿಂ ಪುರುಷರ” ವಿರುದ್ಧ ಐಪಿಸಿ ಮತ್ತು ಕರ್ನಾಟಕದ ಆಸ್ತಿಪಾಸ್ತಿ ನಷ್ಟ ತಡೆ ಕಾಯ್ದೆಯ ಹಲವು ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ಅನ್ವಯಿಸಲಾಗಿದೆ. ವೈರ್ ಮಹೇಶರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಕೆಲವು ಎಫ್‌ಐಆರ್‌ಗಳನ್ನು ಹೊರತುಪಡಿಸಿ ಹೇಳುವುದಾದರೆ, ಪೊಲೀಸರು ಅಪರಿಚಿತ ವ್ಯಕ್ತಿಗಳನ್ನು ಹಿಂಸಾಚಾರದ ಆರೋಪಿಗಳೆಂದು ಮಾತ್ರ ಉಲ್ಲೇಖಿಸಿದ್ದಾರೆ. ಪೊಲೀಸರ ಪ್ರಕಾರ ಮತ್ತು ಹಲವಾರು ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಲಾದ ಹೇಳಿಕೆಗಳಂತೆ, ಸಿಎಎಯನ್ನು ವಿರೋಧಿಸಲು ನೆರೆದಿದ್ದ ಜನರು ಹಿಂಸಾತ್ಮಕವಾಗಿ ವರ್ತಿಸಿದರು ಮತ್ತು ಹಲವಾರು ಎಚ್ಚರಿಕೆಗಳ ನಂತರವೂ ಆಪಾದಿತರು ಹಿಂಸಾಚಾರದಿಂದ ಹಿಂಜರಿಯುವ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ. ಅವರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ನಂತರ “ಅಶಿಸ್ತಿನ ಜನಸಮೂಹ” ದ ಮೇಲೆ ಕ್ರಮ ಕೈಗೊಳ್ಳಲಾಯಿತುಎಂದು ಪೊಲೀಸರು ಹೇಳುತ್ತಾರೆ. ಏನೇ ಇದ್ದರೂ, ವೈರಲ್ ಆಗಿರುವ ಹಲವಾರು ವೀಡಿಯೊಗಳು ಪೊಲೀಸರು ಪ್ರತಿಭಟನಾಕಾರರನ್ನು ಗುರಿಯಾಗಿಸಿ ಗುಂಡು ಹಾರಿಸುವುದನ್ನು ತೋರಿಸುತ್ತವೆ. ಹತ್ತಿರದಿಂದ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ ಎಂಬ ಆರೋಪವಿದೆ. ಘಟನೆಯನ್ನು ಪೊಲೀಸರು ಕೋಮುವಾದಿ ರೀತಿಯಲ್ಲಿ ನಿರ್ವಹಿಸಿದ್ದಾರೆ ಎಂದು ಸಂತ್ರಸ್ತರ ಕುಟುಂಬಗಳು ಮತ್ತು ಮಂಗಳೂರಿನ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.

ಪ್ರತಿಭಟನಾಕಾರರ ಧರ್ಮವನ್ನು ಪೊಲೀಸರು ಹೇಗೆ ಗುರುತಿಸಿದ್ದಾರೆಂದು ತಿಳಿಯಲು ದ ವೈರ್ ಕಮಿಷನರ್ ಹರ್ಷ ಅವರನ್ನು ಸಂಪರ್ಕಿಸಿತು. ಎಫ್‌ಐಆರ್ ಎಂಬುದು ದೂರುದಾರರ ದೂರನ್ನಾಧರಿಸಿ ಮಾಡುವ ಪ್ರಾಥಮಿಕ ಮೌಲ್ಯಮಾಪನದ ಮೂಲ ದಾಖಲೆಯಾಗಿದೆ. ಇಲ್ಲಿ ಮುಸ್ಲಿಂ ಸಂಘಟನೆಗಳೇ ಪ್ರತಿಭಟನೆಗೆ ಕರೆ ನೀಡಿವೆ. ಹೀಗಾಗಿರುವುದಕ್ಕೆ ಇದುವೇ ಕಾರಣವಾಗಿರಬಹುದು.
ಕೋಮು ಸೂಕ್ಷ್ಮ ವಿಷಯಗಳಲ್ಲಿ ವ್ಯವಹರಿಸುವಾಗ ತಮ್ಮ ಇಲಾಖೆಯು ಕೋಮು ಪಕ್ಷಪಾತದಿಂದ ವರ್ತಿಸಿದೆಯೇ ಎಂದು ಕೇಳಿದಾಗ, ಹರ್ಷ ಅವರು ತಮ್ಮ ಇಲಾಖೆಯನ್ನು ಸಮರ್ಥಿಸಿಕೊಂಡರು. “ಪೊಲೀಸ್ ಇಲಾಖೆ ಯಾವುದೇ ಜಾತಿ, ಮತ ಅಥವಾ ಧರ್ಮದ ಬಗ್ಗೆ ಪಕ್ಷಪಾತವನ್ನು ತೋರಿಸುವುದಿಲ್ಲ. ಸಾಕ್ಷ್ಯಗಳ ಆಧಾರದ ಮೇಲೆ ವಿವರವಾದ ತನಿಖೆ ನಡೆಸಿ, ಆರೋಪಿಗಳ ಗುರುತು ಪತ್ತೆ ಹಚ್ಚುತ್ತದೆ ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಅನುಸರಿಸುತ್ತದೆ ” ಎಂದರು.

ದಿ ವೈರ್ ಲಭ್ಯವಾದ 15 ಎಫ್‌ಐಆರ್ ಪ್ರತಿಗಳ ಪೈಕಿ ಪೊಲೀಸರು ಐದು ಪ್ರಕರಣಗಳಲ್ಲಿ ಕೊಲೆ ಯತ್ನ (ಐಪಿಸಿಯ ಸೆಕ್ಷನ್ 307) ಆರೋಪವನ್ನು ಹೊರಿಸಿದ್ದಾರೆ. ಕೆಲವು ಎಫ್‌ಐಆರ್‌ಗಳಲ್ಲಿ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಮತ್ತು ಇನ್ನೂ ಕೆಲವಲ್ಲಿ ಅಪರಿಚಿತ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 66 ಪೊಲೀಸರ ಪೈಕಿ ಒಬ್ಬರೂ “ಗಂಭೀರವಾಗಿ ಗಾಯಗೊಂಡಿಲ್ಲ” ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರೂ ಆಗಿರುವ ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ.ಎಚ್.ಆರ್. ರಾಜೇಶ್ವರಿ ದೇವಿ ಹೇಳಿದ್ದಾರೆ. ಆದಾಗ್ಯೂ, ಆಯುಕ್ತ ಹರ್ಷ ಅವರು ಇದಕ್ಕೆ ವಿರುದ್ಧವಾಗಿ ವಿವರ ನೀಡಿರುವರಲ್ಲದೆ, 33 ಮಂದಿ ಪೊಲೀಸರಿಗೆ “ಗಂಭೀರವಾದ ಗಾಯಗಳಾಗಿವೆ” ಎಂದು ಹೇಳಿದ್ದಾರೆ. ದಿ ವೈರ್ ಕಳುಹಿಸಿದ ಪ್ರಶ್ನಾವಳಿಗೆ ಉತ್ತರಿಸಿದ ಅವರು, “ಗಂಭೀರವಾಗಿ ಗಾಯಗೊಂಡ ಎಲ್ಲಾ 33 ಪೊಲೀಸರ ಪ್ರರಣಗಳೂ ಗಂಭೀರವಾದದ್ದು. ಅವರಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರಿಗೆ ಸಣ್ಣ ಗಾಯಗಳೊಂದಿಗೆ ಹೊರರೋಗಿ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ ಮತ್ತು ಅವರ ಎಂಎಲ್‌ಸಿಗಳನ್ನು ನೋಂದಾಯಿಸಲಾಗಿಲ್ಲ. ಡಿಸಿಪಿಯವರಿಗೆ ಅತ್ಯಂತ ಗಂಭೀರವಾದ ಪಾದದ ಮುರಿತ ಉಂಟಾಗಿದೆ ಎಂದವರು ಹೇಳಿದರು.

ಇದೇವೇಳೆ, ವೈದ್ಯಕೀಯ ಅಧಿಕಾರಿ ರಾಜೇಶ್ವರಿ ದೇವಿ ದಿ ವೈರ್‌ ನೊಂದಿಗೆ ಮಾತಾಡಿ, “ಯಾವುದೇ ಗಂಭೀರವಾದ ಗಾಯಗಳಿಲ್ಲದ ಕಾರಣ, ಪೊಲೀಸರನ್ನು ಕೂಡಲೇ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದರು. ಗಾಯಗೊಂಡ 66 ಪೊಲೀಸರಲ್ಲಿ 64 ಮಂದಿಯನ್ನು ಪ್ರಥಮ ಚಿಕಿತ್ಸೆ ನೀಡಿ ಕೂಡಲೇ ಬಿಡುಗಡೆ ಮಾಡಲಾಗಿದೆ ಮತ್ತು ಇನ್ನಿಬ್ಬರನ್ನು 24 ಗಂಟೆಗಳ ವೀಕ್ಷಣೆಯಡಿಯಲ್ಲಿ ಇರಿಸಲಾಗಿತ್ತು ಎಂದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಐಪಿಸಿಯ ಸೆಕ್ಷನ್ 307 ಅಡಿಯಲ್ಲಿ (ಕೊಲೆಯತ್ನ) ಕೇಸು ದಾಖಲಿಸಿರುವ ಬಗ್ಗೆ ತೀವ್ರಅನುಮಾನ ಮೂಡುತ್ತದೆ. ಗಾಯಗಳು ಗಂಭೀರವಾಗಿಲ್ಲದಿರುವಾಗ ಕೊಲೆಯತ್ನ ಆರೋಪ ಎಷ್ಟು ಸರಿ ಎಂದು ಪ್ರಶ್ನಿಸಬೇಕಾಗುತ್ತದೆ.

ದೇಶದ್ರೋಹ ಮತ್ತು ಗಲಭೆಗೆ ಪ್ರಚೋದನೆ ಎಂಬ ವಿಷಯದಲ್ಲಿ ಪೊಲೀಸರು ಎರಡು ಪ್ರತ್ಯೇಕ್ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಒಂದು ಪ್ರಕರಣದಲ್ಲಿ, ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಯ ಇಬ್ಬರು ನಾಯಕರಾದ ರಿಯಾಜ್ ಫರಂಗಿಪೇಟೆ ಮತ್ತು ಶಾಹುಲ್ ಎಸ್.ಎಚ್. ಮೇಲೆ ಪ್ರಕರಣ ದಾಖಲಿಸಲಾಗಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣೆ ನೋಂದಾಯಿಸಿರುವ ಎಫ್‌ಐಆರ್ ಪ್ರಕಾರ, ಎಸ್‌ಡಿಪಿಐ ಸದಸ್ಯರು ಡಿಸೆಂಬರ್ 18 ಮತ್ತು 19 ರ ಮಧ್ಯರಾತ್ರಿಯಲ್ಲಿ “ನಗರದ ಸಾಮರಸ್ಯಕ್ಕೆ ಭಂಗ ತರುವ ಮತ್ತು ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ” ಉದ್ದೇಶದಿಂದ ಸಂದೇಶಗಳನ್ನು ಕಳುಹಿಸಿದ್ದರು. ಆದಾಗ್ಯೂ, ರಿಯಾಜ್ ಫರಂಗಿಪೇಟೆ ಈ ಆರೋಪಗಳನ್ನು ನಿರಾಕರಿಸಿದ್ದಾರೆ. “ಈ ಪ್ರತಿಭಟನೆಗೆ ಎಸ್‌ಡಿಪಿಐ ಕರೆ ನೀಡದ ಕಾರಣ, ನಮ್ಮಲ್ಲಿ ಯಾರೊಬ್ಬರೂ ಯಾವುದೇ ಸಂದೇಶಗಳನ್ನು ಕಳುಹಿಸುವ ಪ್ರಶ್ನೆಯೇ ಇಲ್ಲ” ಎಂದು ಫರಂಗಿಪೇಟೆ ಹೇಳಿದ್ದಾರೆ. ಹಿಂಸಾಚಾರದ ನಂತರ ಮಂಗಳೂರು ಪೊಲೀಸರ ವಿರುದ್ಧ ಆದಾಗ್ಯೂ, ಫರಂಗಿಪೇಟೆ ಈ ಆರೋಪಗಳನ್ನು ನಿರಾಕರಿಸಿದ್ದಾರೆ. “ಈ ಪ್ರತಿಭಟನೆಗೆ ಎಸ್‌ಡಿಪಿಐ ಕರೆ ನೀಡದ ಕಾರಣ, ನಮ್ಮಲ್ಲಿ ಯಾರೊಬ್ಬರೂ ಯಾವುದೇ ಸಂದೇಶಗಳನ್ನು ಕಳುಹಿಸುವ ಪ್ರಶ್ನೆಯೇ ಇಲ್ಲ” ಎಂದು ಫರಂಗಿಪೇಟೆ ಹೇಳಿದ್ದಾರೆ. ಹಿಂಸಾಚಾರದ ನಂತರ ಮಂಗಳೂರು ಪೊಲೀಸರ ವಿರುದ್ಧ ಎಸ್ ಡಿ ಪಿ ಐ ಬಲವಾಗಿ ಮಾತನಾಡಿದ್ದರಿಂದ ಅವರನ್ನು ಗುರಿಯಾಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ದೇಶದ್ರೋಹದ ಮತ್ತೊಂದು ಪ್ರಕರಣದಲ್ಲಿ, ಅಂತರರಾಷ್ಟ್ರೀಯ ಸಂಖ್ಯೆಯಿಂದ ಸಂದೇಶಗಳನ್ನು ಕಳುಹಿಸಲಾದ ಅಪರಿಚಿತ ವ್ಯಕ್ತಿಗಳ ಮೇಲೆ ಆರೋಪ ಹೊರಿಸಲಾಗಿದೆ.

ಕೃಪೆ:ಸನ್ಮಾರ್ಗ

Read These Next

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...

ಶಿಗ್ಗಾಂವಿ: ಬ್ಯಾಲೆಟ್ ಬಾಕ್ಸ್‌ ಗಳು ಚರಂಡಿಯಲ್ಲಿ ಪತ್ತೆ; ಉಪಚುನಾವಣೆ ಮುಗಿದ ಮರುದಿನವೇ ನಡೆದ ಘಟನೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ...

ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ

ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...

ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...

ಕಾರವಾರ: ಉದ್ಯಮಿಯ ಹತ್ಯೆ, ಪತ್ನಿಗೆ ಗಂಭೀರ ಗಾಯ – ಹಣಕೋಣ ಗ್ರಾಮದಲ್ಲಿ ದುಷ್ಕರ್ಮಿಗಳ ದಾಳಿ

ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ಇಂದು ಮುಂಜಾನೆ ಅಪರಿಚಿತ ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ಉದ್ಯಮಿ ವಿನಾಯಕ ನಾಯ್ಕ (54) ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.