ಹೊಸದಿಲ್ಲಿ: ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣವನ್ನು ತಡೆಯಲು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ಶಿಕ್ಷಿಸಲು ಹೊಸ ಕಾನೂನನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಸಂಸತ್ತಿಗೆ ಸೂಚಿಸಿದೆ. ಯಾರು ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಭಯ ಮತ್ತು ಅರಾಜಕತೆಯ ಪರಿಸ್ಥಿತಿ ನೆಲೆಸಿದ ಸಂದರ್ಭದಲ್ಲಿ ರಾಜ್ಯಗಳು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಹಿಂಸಾಚಾರಕ್ಕೆ ಆಸ್ಪದ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರಿದ್ದ ಸುಪ್ರೀಂಕೋರ್ಟ್‌ನ ನ್ಯಾಯಪೀಠ ತಿಳಿಸಿದೆ.
ಮುಂದಿನ ದಿನಗಳಲ್ಲಿ ಗುಂಪು ಹಲ್ಲೆ ಪ್ರಕರಣಗಳನ್ನು ಕೊನೆಗಾಣಿಸಲು ಮುಂಜಾಗ್ರತೆ , ದಂಡ ವಿಧಿಸುವ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಜೊತೆಗೆ ಬಹುಮುಖಿ ಸಮಾಜ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನ್ಯಾಯಪೀಠ ಆದೇಶಿಸಿದೆ. ಗೋ ರಕ್ಷಕರ ತಂಡ ಎಂದು ಹೇಳಿಕೊಳ್ಳುವ ತಂಡದ ಕೃತ್ಯವನ್ನು ತಡೆಗಟ್ಟಬೇಕೆಂದು ಕೋರಿ ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ತುಷಾರ್ ಗಾಂಧಿ ಹಾಗೂ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 8ಕ್ಕೆ ನಿಗದಿಗೊಳಿಸಿ ಆದೇಶದ ಪಾಲನಾ ವರದಿಯನ್ನು ನಾಲ್ಕು ವಾರದೊಳಗೆ ಸಲ್ಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ಗೋ ಸಂರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಕೃತ್ಯವನ್ನು ತಡೆಗಟ್ಟಲು ಎಲ್ಲಾ ರಾಜ್ಯಗಳೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ವಾರದೊಳಗೆ ಪ್ರತೀ ಜಿಲ್ಲೆಯಲ್ಲೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿ ಎಂದು ನೇಮಿಸಬೇಕು. ಕಳೆದ ಐದು ವರ್ಷಗಳಲ್ಲಿ ಇಂತಹ ಕೃತ್ಯಗಳು ವರದಿಯಾಗಿರುವ ಜಿಲ್ಲೆಗಳು, ಉಪವಿಭಾಗಗಳು ಹಾಗೂ ಗ್ರಾಮಗಳನ್ನು ತಕ್ಷಣ ಗುರುತಿಸುವಂತೆ ಕಳೆದ ವರ್ಷದ ಸೆ.6ರಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಯಾವುದೇ ರೀತಿಯ ಗುಂಪು ಹಲ್ಲೆ ಪ್ರಕರಣಗಳು ಕಾನೂನಿನಡಿ ತೀವ್ರ ಶಿಕ್ಷಾರ್ಹ ಅಪರಾಧವಾಗಿದೆ ಎಂಬ ಸಂದೇಶವನ್ನು ರೇಡಿಯೋ, ಟಿವಿ ಹಾಗೂ ಇತರ ಮಾಧ್ಯಮಗಳ ಮೂಲಕ , ಗೃಹ ಮತ್ತು ಪೊಲೀಸ್ ಇಲಾಖೆಯ ವೆಬ್‌ಸೈಟ್ ಮೂಲಕ ಪ್ರಸಾರ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿತ್ತು. ಅಲ್ಲದೆ ಬೇಜವಾಬ್ದಾರಿಯ, ಸ್ಫೋಟಕ ಸಂದೇಶಗಳನ್ನು ಪ್ರಸಾರ ಮಾಡುವ ಮೂಲಕ ಗುಂಪು ಹಿಂಸೆ ಹಾಗೂ ಗುಂಪು ಹಲ್ಲೆಗೆ ಪ್ರೇರೇಪಣೆ ನೀಡುತ್ತಿರುವ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಸುಪ್ರೀಂ ಸೂಚಿಸಿತ್ತು.
ಗೋರಕ್ಷಣೆಯ ನೆಪದಲ್ಲಿ ಹತ್ಯೆ ಘೋರಕೃತ್ಯ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ ಮತ್ತು ಹತ್ಯೆ ಅತ್ಯಂತ ಘೋರಕೃತ್ಯವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಮತ್ತು ಇದೊಂದು ಹೊಸ ಪದ್ಧತಿಯಾಗಿ ಬೆಳೆಯಲು ಆಸ್ಪದ ನೀಡಲಾಗದು. ಇದನ್ನು ಕಠಿಣ ಕ್ರಮಗಳಿಂದ ಹತ್ತಿಕ್ಕಬೇಕು ಎಂದು ಸುಪ್ರೀಂಕೋರ್ಟ್‌ನ ನ್ಯಾಯಪೀಠ ತಿಳಿಸಿದೆ. ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸುವುದನ್ನು ಒಪ್ಪಲಾಗದು. ಗುಂಪು ಹಲ್ಲೆ ಪ್ರಕರಣ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಿಂತಲೂ ಅತೀತವಾಗಿದೆ ಎಂದು ಸುಪ್ರೀಂ ತಿಳಿಸಿದೆ.