ಭಟ್ಕಳ: ವಿದ್ಯಾವಂತರಿಂದಲೇ ದೇಶದಲ್ಲಿ ಸಮಸ್ಯೆಗಳು ಉದ್ಭವಿಸುತ್ತಿದ್ದು ವಿದ್ಯಾವಂತರಿಂದ ದೇಶಕ್ಕೆ ಆಪಾಯ ಬಂದೊದಗುತ್ತಿದೆ ದೇಶದಲ್ಲಿ ಇಂದು ನಡೆಯುತ್ತಿರುವ ಭ್ರಷ್ಟಚಾರ, ಉಗ್ರವಾದ, ಅತ್ಯಾಚಾರ, ಅನೈತಿಕತೆಗಳಿಗೆ ವಿದ್ಯಾವಂತರೆ ಕಾರಣವಾಗುತ್ತಿರುವುದು ಈ ದೇಶದ ದುರಂತವಾಗಿದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಂಞÂ ಹೇಳಿದರು.
ಅವರು ಬುಧವಾರ ನಗರದ ಸಾಗರ ರಸ್ತೆಯ ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜ್ ಆಡಳಿತ ಮಂಡಳಿ ಹಾಗೂ ಭಟ್ಕಳ ಜಮಾಅತೆ ಇಸ್ಲಾಮಿ ಜಂಟಿಯಾಗಿ ಆಯೋಜಿಸಿದ್ದ ಪ್ರವಾದಿ ಮುಹಮ್ಮದ್ ಪೈಬಂಗರರ ಚಿಂತನೆಗಳು ಹಾಗೂ ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮನುಷ್ಯನ ಮನಸ್ಸು ಶುದ್ಧವಾಗಿಟ್ಟುಕೊಂಡಲ್ಲಿ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುವುತ್ತದೆ, ಶುದ್ಧ ಮನಸ್ಸು ಮನುಷ್ಯ ಹಾಗೂ ಸಮಾಜದ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ಮನಸ್ಸು ಕೆಟ್ಟು ಹೋದರೆ ಸಮಾಜದ ಆರೋಗ್ಯವೂ ಹಾಳಾಗುತ್ತದೆ ಎಂದ ಅವರು, ಪ್ರವಾದಿ ಮುಹಮ್ಮದ್ ಪೈಗಂಬರರು ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಅಷ್ಟೆ ಅಲ್ಲದೆ ಈ ಜಗತ್ತಿನ ಎಲ್ಲ ದಾರ್ಶನಿಕರೂ ಆತ್ಮಶುದ್ದಿಗೆ ಅದ್ಯತೆ ನೀಡಿದ್ದಾರೆ ಎಂದರು.
ಜಗತ್ತಿನ ಪ್ರತಿಯೊಂದು ಜೀವಿಗಳೂ ಪರಸ್ಪರ ಸಹಕಾರದಿಂದ ಬದುಕಿತ್ತಿವೆ. ನಮ್ಮ ಪರಿಸರ, ಸೌರಮಂಡಲ, ಗ್ಯಾಲಕ್ಸಿಯಲ್ಲಿನ ಎಲ್ಲ ಗ್ರಹಗಳು, ಸೂರ್ಯ,ಚಂದ್ರ, ನಕ್ಷತ್ರ ಇವೆಲ್ಲವೂ ಪರಸ್ಪರ ಸಹಕಾರ ಮನೋಭಾವದೊಂದಿಗೆ ಜಗತ್ತನ್ನು ಸುಲಲಿತವಾಗಿ ಮುನ್ನೆಡೆಸಿಕೊಂಡು ಸಾಗುತ್ತಿವೆ. ಆದರೆ ಮನುಷ್ಯ ಮಾತ್ರ ಅಸಹಕಾರಿಯಾಗಿದ್ದು ಸಮಾಜಕ್ಕೆ ಕಂಟಕನಾಗಿ ಬದುಕುತ್ತಿದ್ದಾನೆ. ಧರ್ಮಗಳು ಮನುಷ್ಯನ ರಕ್ಷಣೆಗಾಗಿದೆ ಧರ್ಮವನ್ನು ಪಾಲಿಸುತ್ತ ಬದುಕಬೇಕು, ನಾವಿಂದು ಸಂಪತ್ತು, ಅಧಿಕಾರದ ಗುಲಾಮರಾಗುತ್ತಿದ್ದೇವೆ. ಎಲ್ಲ ರೀತಿಯ ಗುಲಾಮಗಿರಿಯಿಂದ ಹೊರಬಂದು ದೇವನ ಗುಲಾಮರಾಗಬೇಕಾಗಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ವೀರೇಂದ್ರ ಶಾನುಭಾಗ ವಹಿಸಿದ್ದರು. ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕುಮಾರಿ ಅಶ್ವಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಕುರ್‍ಆನ್ ಪಠಿಸಿದರು. ಉಪನ್ಯಾಸಕ ಜಯಂತಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಭಟ್ ವಂದಿಸಿದರು.
ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಹೊನ್ನಾವರದ ಜಿ.ಎಸ್. ಹೆಗಡೆ, ದ್ವೀತಿಯಾ ಬಹುಮಾನ ಪಡೆದ ರಾಘವೇಂದ್ರ ಮಡಿವಾಳ ಹಾಗೂ ತೃತೀಯ ಬಹುಮಾನ ಪಡೆದ ಸಾವಿತ್ರಿ ಹೆಗಡೆಯನ್ನು ನಗದು ಪುರಸ್ಕಾರ ಹಾಗು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಉಪಾಧ್ಯಕ್ಷ ಮುಜಾಹಿದ್ ಮುಸ್ತಫಾ, ಕಾರ್ಯದರ್ಶಿ ಪ್ರೋ.ಎಚ್.ಎಂ.ಝರ್‍ಝರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.