ಉತ್ತರಪ್ರದೇಶ ಮದ್ರಸ ಶಿಕ್ಷಣ ಕಾಯ್ದೆ ಸಾಂವಿಧಾನಿಕ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮಂಗಳವಾರ, 2004ರ ಉತ್ತರಪ್ರದೇಶ ಮದ್ರಸ ಶಿಕ್ಷಣ ಮಂಡಳಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಆಂಶಿಕವಾಗಿ ಎತ್ತಿ ಹಿಡಿದಿದೆ. ಆದರೆ, ಶಿಕ್ಷಣದ ಗುಣಮಟ್ಟವನ್ನು ಖಾತರಿಪಡಿಸುವುದಕ್ಕಾಗಿ ರಾಜ್ಯವು ಮದ್ರಸ ಶಿಕ್ಷಣವನ್ನು ನಿಯಂತ್ರಿಸಬಹುದು ಎಂಬುದಾಗಿಯೂ ಹೇಳಿದೆ.
ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ನ್ಯಾಯಪೀಠವೊಂದು, ಮದ್ರಸಗಳಿಗೆ ಸಂಬಂಧಿಸಿದ ಉತ್ತರಪ್ರದೇಶದ 2004ರ ಕಾಯ್ದೆಯು ರಾಜ್ಯದ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಿದೆ ಎಂದು ಹೇಳಿತು. ಆದರೆ, ಫಾಝಿಲ್ (ಸ್ನಾತಕ ಪದವಿ ಅಧ್ಯಯನ) ಮತ್ತು ಕಾಮಿಲ್ (ಸ್ನಾತಕೋತ್ತರ ಪದವಿ ಅಧ್ಯಯನ) ಮಟ್ಟಗಳಲ್ಲಿನ ಉನ್ನತ ಅಧ್ಯಯನಕ್ಕೆ ಸಂಬಂಧಿಸಿದ ಇದೇ ಕಾಯ್ದೆಯ ವಿಧಿಗಳು ವಿಶ್ವವಿದ್ಯಾನಿಲಯ ಅನುದಾನ ಆಯೋಗ ಕಾಯ್ದೆಯ ವಿಧಿಗಳೊಂದಿಗೆ ನೇರ ಸಂಘರ್ಷಕ್ಕಿಳಿಯುತ್ತವೆ ಎಂದು ಅಭಿಪ್ರಾಯಪಟ್ಟಿತು, ಹಾಗಾಗಿ ಅವುಗಳು ಅಸಾಂವಿಧಾನಿಕ ಎಂದು ಘೋಷಿಸಿತು.
ಉತ್ತರಪ್ರದೇಶದ 2004ರ ಕಾನೂನು, ಸಂವಿಧಾನದ ಏಳನೇ ಶೆಡ್ಯೂಲ್‌ನಲ್ಲಿ ಕೇಂದ್ರ ಪಟ್ಟಿಯ 66ನೇ ಎಂಟ್ರಿ ಮೂಲಕ ಕೇಂದ್ರ ಸರಕಾರಕ್ಕೆ ವಿಶೇಷವಾಗಿ ನೀಡಲಾಗಿರುವ ಅಧಿಕಾರ ವ್ಯಾಪ್ತಿಯೊಳಗೆ ಹಸ್ತಕ್ಷೇಪ ಮಾಡುತ್ತದೆ. 66ನೇ ಎಂಟ್ರಿಯು, ಉನ್ನತ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸಲು ಮತ್ತು ನಿಯಂತ್ರಿಸಲು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತು.
“ಫಾಝಿಲ್ ಮತ್ತು ಕಾಮಿಲ್ ಹೊರತುಪಡಿಸಿ, 2004ರ ಉತ್ತರ ಪ್ರದೇಶ ಕಾಯ್ದೆಯು, ಮಾನ್ಯತೆ ಪಡೆದ ಮದ್ರಸಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ಮತ್ತು ಜೀವನೋಪಾಯ ಗಳಿಸಲು ಸಾಧ್ಯವಾಗಲು ಕನಿಷ್ಠ ಮಟ್ಟದ ಸಾಮರ್ಥ್ಯ ಗಳಿಸುವಂತೆ ನೋಡಿಕೊಳ್ಳುವ ಸರಕಾರದ ಸಕಾರಾತ್ಮಕ ಬದ್ಧತೆಗೆ ಪೂರಕವಾಗಿಯೇ ಇದೆ' ಎಂದು ಮುಖ್ಯ ನ್ಯಾಯಾಧೀಶರು ಬರೆದ ತೀರ್ಪಿನಲ್ಲಿ ಹೇಳಲಾಗಿದೆ.
2004ರ ಉತ್ತರಪ್ರದೇಶ ಮದ್ರಸ ಶಿಕ್ಷಣ ಮಂಡಳಿ ಕಾಯ್ದೆಯು ಅಸಾಂವಿಧಾನಿಕ ಎಂಬ ಅಲಹಾಬಾದ್ ಹೈಕೋರ್ಟ್ನ ಮಾರ್ಚ್ 22ರ ಆದೇಶವನ್ನು ರದ್ದುಗೊಳಿಸಿತು.
ಶೈಕ್ಷಣಿಕ ಪಠ್ಯಕ್ರಮ, ಪಠ್ಯಪುಸ್ತಕಗಳು, ಶಿಕ್ಷಕರ ಅರ್ಹತೆ ಮತ್ತು ಸಲಕರಣೆಗಳು ಮತ್ತು ಮೂಲಸೌಕರ್ಯದ ಗುಣಮಟ್ಟಗಳನ್ನು ನಿರ್ಧರಿಸುವಂತೆ ಮದ್ರಸ ಮಂಡಳಿಗೆ ಕಾಯ್ದೆಯು ನೀಡಿರುವ ನಿರ್ದೇಶನಗಳು ಮಾನ್ಯತೆ ಪಡೆದ ಮದ್ರಸಗಳ ದೈನಂದಿನ ಆಡಳಿತದಲ್ಲಿ ನೇರ ಹಸ್ತಕ್ಷೇಪವೇನೂ ಮಾಡುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಧಾರ್ಮಿಕ ಅಥವಾ ಜಾತ್ಯತೀತ ಶಿಕ್ಷಣ ನೀಡಲು ಮದ್ರಸಗಳನ್ನು ಸ್ಥಾಪಿಸಲು ಮತ್ತು ನಡೆಸಲು ಸಂವಿಧಾನದ 30ನೇ ವಿಧಿಯು ಅಲ್ಪಸಂಖ್ಯಾತರಿಗೆ ಹಕ್ಕು ನೀಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು, ಆದರೆ ಈ ಹಕ್ಕು 'ಪರಮಾಧಿಕಾರವಲ್ಲ' ಎಂದು ಅಭಿಪ್ರಾಯಪಟ್ಟಿತು. 2004ರ ಮದ್ರಸ ಕಾಯ್ದೆಯು ಸಂವಿಧಾನದ 21ಎ ವಿಧಿ (ಶಿಕ್ಷಣದ ಹಕ್ಕು) ಮತ್ತು ಸಂವಿಧಾನದ ಪೀಠಿಕೆಯಲ್ಲಿರುವ ಜಾತ್ಯತೀತತೆಯ ಮೂಲ ತತ್ವವನ್ನು ಉಲ್ಲಂಘಿಸಿದೆ ಎಂಬ ಅಲಹಾಬಾದ್ ಕೋರ್ಟಿನ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು.
ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಗಳು ತಮ್ಮ ಅಲ್ಪಸಂಖ್ಯಾತ ಗುರುತನ್ನು ಕಳೆದುಕೊಳ್ಳದೆ ಅಗತ್ಯ ಗುಣಮಟ್ಟದ ಜಾತ್ಯತೀತ ಶಿಕ್ಷಣವನ್ನು ನೀಡುವಂತೆ ನೋಡಿಕೊಳ್ಳಲು ನಿಯಮಗಳನ್ನು ರೂಪಿಸಲು ಕಾಯ್ದೆಯಡಿಯಲ್ಲಿ ಸ್ಥಾಪಿಸಲಾಗುವ ಮದ್ರಸ ಮಂಡಳಿಯು ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಹೇಳಿತು.