'ಬುಲ್ಡೋಜರ್ ಅನ್ಯಾಯ'ದ ವಿರುದ್ಧ ಸುಪ್ರೀಂ ಕೆಂಡ: ಸರಕಾರ ನ್ಯಾಯಾಂಗದ ಕೆಲಸ ಮಾಡುವಂತಿಲ್ಲ
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಬುಧವಾರ 'ಬುಲ್ಡೋಜರ್ ಅನ್ಯಾಯ'ದ ಪ್ರವೃತ್ತಿಯ ವಿರುದ್ಧ ಕೆಂಡಕಾರಿದೆ. ಅಪರಾಧ ಪ್ರಕರಣವೊಂದರಲ್ಲಿ ಆರೋಪಿ ಎಂಬ ಒಂದೇ ಕಾರಣಕ್ಕಾಗಿ ವ್ಯಕ್ತಿಯ ಮನೆಯನ್ನು ಸರಕಾರಿ ಅಧಿಕಾರಿಗಳು ಧ್ವಂಸಗೊಳಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ವ್ಯಕ್ತಿಗಳ ಮನೆಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸುವ ಸರಕಾರಿ ಅಧಿಕಾರಿಗಳನ್ನು ಇದಕ್ಕೆ ಉತ್ತರದಾಯಿಗಳನ್ನಾಗಿಸಬೇಕು ಎಂಬ ನಿರ್ದೇಶನವನ್ನು ಅದು ನೀಡಿದೆ. 'ಕಾರ್ಯಾಂಗವು ವ್ಯಕ್ತಿಯೋರ್ವ ನನ್ನು ದೋಷಿ ಎಂಬುದಾಗಿ ಘೋಷಿಸುವಂತಿಲ್ಲ. ಕೇವಲ ಆರೋಪದ ಆಧಾರದಲ್ಲಿ, ಕಾರ್ಯಾಂಗವು ವ್ಯಕ್ತಿಯೊಬ್ಬರ ಮನೆಯನ್ನು ಧ್ವಂಸಗೊಳಿಸಿದರೆ ಅದು ಕಾನೂನಿನ ಆಡಳಿತದ ತತ್ವವನ್ನೇ ಬುಡಮೇಲುಗೊಳಿಸುತ್ತದೆ. ಕಾರ್ಯಾಂಗ (ಸರಕಾರವು) ನ್ಯಾಯಾಧೀಶ ರಾಗುವಂತಿಲ್ಲ ಮತ್ತು ಆರೋಪಿ ವ್ಯಕ್ತಿಗಳ ಮನೆಗಳನ್ನು ಧ್ವಂಸಗೊಳಿಸುವಂತಿಲ್ಲ'' ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿತು.
ಇದೇ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಮನೆಗಳ ಧ್ವಂಸಕ್ಕೆ ಸಂಬಂಧಿಸಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿತು.
'ಮುಂಚಿತ ಶೋಕಾಸ್ ನೋಟಿಸ್ ಗಳನ್ನು ನೀಡದೆ ಯಾವುದೇ ಕಟ್ಟ ಡಗಳನ್ನು ಧ್ವಂಸಗೊಳಿಸುವಂತಿಲ್ಲ. ನೋಟಿಸ್‌ಗೆ ಉತ್ತರಿಸಲು ಮನೆಗಳ ಸದಸ್ಯರಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಸ್ಥಳೀಯ ಮುನಿಸಿಪಾಲಿಟಿ ಕಾನೂನುಗಳು ನೀಡುವ ಕಾಲಾವಕಾಶ ಅಥವಾ ನೋಟಿಸ್ ತಲುಪಿದ ಬಳಿಕದ 15 ದಿನಗಳು- ಇವುಗಳಲ್ಲಿ ಯಾವುದು ಹೆಚ್ಚ ಅಷ್ಟು ಸಮಯಾವಕಾಶವನ್ನು ನೀಡಬೇಕು' ಎಂದು ನ್ಯಾಯಾಲಯ ಹೇಳಿತು. ಆರೋಪಿಗಳು ಅಥವಾ ದೋಷಿಗಳೇ ಆಗಿದ್ದರೂ, ಅದರ ಆಧಾರದಲ್ಲಿ ವ್ಯಕ್ತಿಗಳ ಮನೆಗಳನ್ನು ಕೆಡಹುವುದು 'ಸಂಪೂರ್ಣ ಅಸಾಂವಿಧಾ ನಿಕವಾಗಿದೆ ಎಂದು ನ್ಯಾಯಪೀಠ ಅಭಿ ಪ್ರಾಯಪಟ್ಟಿತು.
“ಕಾರ್ಯಾಂಗವು ನ್ಯಾಯಾಧೀಶನ ಪಾತ್ರವನ್ನು ನಿರ್ವಹಿಸಿ, ಆರೋಪಿ ಎಂಬ ನೆಲೆಯಲ್ಲಿ ನಾಗರಿಕನೊಬ್ಬನ ಮನೆಯನ್ನು ಧ್ವಂಸಗೊಳಿಸಿದರೆ ಅದು ಅಧಿಕಾರಗಳ ವಿಂಗಡಣೆಯ ತತ್ವವನ್ನು ಉಲ್ಲಂಘಿಸುತ್ತದೆ' ಎಂದು ಅದು ಹೇಳಿತು.
“ಸರಕಾರದ ಅಧಿಕಾರಿಗಳು ತಮ್ಮ ಅಧಿಕಾರಗಳನ್ನು ಶ್ವೇಚ್ಛಾಚಾರದಿಂದ ಚಲಾಯಿಸುವ ಬಗ್ಗೆ ನಾಗರಿಕರ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಲು, ಸಂವಿಧಾನದ 142ನೇ ವಿಧಿಯಡಿಯಲ್ಲಿ ನಮಗಿರುವ ಅಧಿಕಾರಗಳನ್ನು ಬಳಸಿ ಕೆಲವೊಂದು ನಿರ್ದೇಶನಗಳನ್ನು ನೀಡುವುದು ಅಗತ್ಯ ಎಂಬುದಾಗಿ ನಾವು ಭಾವಿಸುತ್ತೇವೆ' ಎಂದು ಸುಪ್ರೀಂ ಕೋರ್ಟ್ ಹೇಳಿತು. ಮನೆಯನ್ನು ಧ್ವಂಸಗೊಳಿಸುವ ಆದೇಶವನ್ನು ಹೊರಡಿಸಿದ ಬಳಿಕವೂ, ಆದೇಶವನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲು ಸಂತ್ರಸ್ತ ಕುಟುಂಬಕ್ಕೆ ಸಾಕಷ್ಟು ಸಮಯಾವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು.
ಧ್ವಂಸ ಆದೇಶವನ್ನು ಪ್ರಶ್ನಿಸಲು ಜನರು ಇಚ್ಛಿಸದ ಪ್ರಕರಣಗಳಲ್ಲಿಯೂ, ಮನೆಯನ್ನು ತೆರವುಗೊಳಿಸಲು ಮತ್ತು ಸೂಕ್ತ ವ್ಯವಸ್ಥೆಗಳನ್ನು ಮಾಡಿ ಕೊಳ್ಳಲು ಅವರಿಗೆ ಸಾಕಷ್ಟು ಸಮಯಾವಕಾಶ ನೀಡಬೇಕು ಎಂದಿತು. ಧ್ವಂಸ ನೋಟಿಸನ್ನು ಮನೆ ಮಾಲೀಕರಿಗೆ ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸಬೇಕು ಮತ್ತು ನೋಟಿಸನ್ನು ಧ್ವಂಸಗೊಳಿಸಬೇಕಾದ ಕಟ್ಟಡದ ಹೊರಭಾಗದಲ್ಲಿ ಅಂಟಿಸಬೇಕು ಎಂದು ನ್ಯಾಯಾಲಯವು ಹೇಳಿತು.
“ಮೇಲೆ ಹೇಳಲಾದ 15 ದಿನಗಳ ಸಮಯಾವಕಾಶವು, ನೋಟಿಸ್ ಸ್ವೀಕಾರದ ದಿನದಿಂದ ಆರಂಭಗೊಳ್ಳುತ್ತದೆ' ಎಂದು ಅದು ತಿಳಿಸಿತು.
ಅದೇ ವೇಳೆ, ರಸ್ತೆಗಳು ಮತ್ತು ಕಾಲುದಾರಿಗಳು ಮುಂತಾದ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಮತ್ತು ರೈಲ್ವೆ ಹಳಿಗಳು, ನದಿಗಳು ಅಥವಾ ನೀರಿನ ಆಶ್ರಯಗಳಿಗೆ ಹೊಂದಿಕೊಂಡಿರುವ ಅನಧಿಕೃತ ಕಟ್ಟಡಗಳಿಗೆ ಈ ನಿರ್ದೇಶನಗಳು ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ಅದೂ ಅಲ್ಲದೆ, ನ್ಯಾಯಾಲಯವೊಂದು ಹೊರಡಿಸುವ ಧ್ವಂಸ ಆದೇಶಕ್ಕೆ ಸಂಬಂಧಿಸಿದ ಪ್ರಕರಣಗಳಿಗೂ ಇವುಗಳು ಅನ್ವಯಿಸುವುದಿಲ್ಲ ಎಂದಿತು. ಅದೂ ಅಲ್ಲದೆ, ಧ್ವಂಸ ಕಾರ್ಯಾಚರಣೆಯನ್ನು ಚಿತ್ರೀಕರಿಸಿಕೊಳ್ಳಬೇಕು ಎಂಬುದಾಗಿಯೂ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ದೇಶದಲ್ಲಿ ಮನೆ ಅಥವಾ ಕಟ್ಟಡಗಳನ್ನು ಕೆಡಹುವುದಕ್ಕೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾಗಿ ರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಅದು ತನ್ನ ತೀರ್ಪನ್ನು ಅಕ್ಟೋಬರ್ 1ರಂದು ಕಾದಿರಿಸಿತ್ತು.