ಜೀವನದಲ್ಲಿ ಉಚಿತವಾಗಿ ಸಿಗುವ ಎಲ್ಲವೂ ಒಳ್ಳೆಯದೇ ಆಗಿರುತ್ತವೆ ಮತ್ತು ವಾಟ್ಸ್ ಆ್ಯಪ್ ಅವುಗಳಲ್ಲಿ ಒಂದಾಗಿದೆ. ವಾಟ್ಸ್ ಆ್ಯಪ್ ಸಂಪೂರ್ಣವಾಗಿ ನೈತಿಕ ನೆಲೆಯಲ್ಲಿ ಹಣ ಗಳಿಸುತ್ತಿದೆ, ಅದು ಕಳ್ಳಮಾರ್ಗಗಳಲ್ಲಿ ಹಣ ಗಳಿಸುತ್ತದೆ ಎಂಬ ವ್ಯಾಪಕ ವದಂತಿಗಳೇನೋ ಹರಿದಾಡುತ್ತಿವೆ. ಈ ಪೈಕಿ ಕೆಲವನ್ನು ಇಲ್ಲಿ ಚರ್ಚಿಸಲಾಗಿದೆ. ಆದರೆ ವಾಟ್ಸ್ ಆ್ಯಪ್‌ಗೆ ನಿಕಟವಾಗಿರುವ ಯಾರೊಬ್ಬರೂ ಇವನ್ನು ಸಮರ್ಥಿಸಿಲ್ಲ. ಆದರೆ ಉದ್ಯಮಸಂಸ್ಥೆಗಳು ಬಳಕೆದಾರರಿಗೆ ನೇರವಾಗಿ ಸಂದೇಶಗಳನ್ನು ರವಾನಿಸಬಹುದಾದ, ತನಗೆ ಸಾಕಷ್ಟು ಆದಾಯವನ್ನು ತಂದುಕೊಡಬಲ್ಲ ವ್ಯವಸ್ಥೆಯೊಂದನ್ನು ತಾನು ಪರೀಕ್ಷಿಸುತ್ತಿದ್ದೇನೆ ಎಂದು ವಾಟ್ಸ್ ಆ್ಯಪ್ ಪ್ರಕಟಿಸಿದೆ.
2014ರಲ್ಲಿ ತನ್ನ ಬಳಕೆದಾರರಿಗೆ ವಾರ್ಷಿಕ 0.99 ಡಾ.ಶುಲ್ಕವನ್ನು ನಿಗದಿಗೊಳಿಸಿದ್ದ ವಾಟ್ಸ್ ಆ್ಯಪ್ ತನ್ಮೂಲಕ ಮೊದಲ ಒಂಭತ್ತು ತಿಂಗಳುಗಳಲ್ಲಿ ಒಂದು ಬಿಲಿಯನ್ ಡಾಲರ್‌ಗೂ ಅಧಿಕ ಆದಾಯವನ್ನು ಗಳಿಸಿತ್ತು. ಆದರೆ ಫೇಸ್‌ಬುಕ್ 19 ಬಿಲಿಯನ್ ಡಾಲರ್‌ಗಳಿಗೆ ವಾಟ್ಸ್ ಆ್ಯಪ್ ನ್ನು ಖರೀದಿಸಿದ ಬಳಿಕ ಈ ಶುಲ್ಕವನ್ನು ರದ್ದುಗೊಳಿ ಸಲಾಗಿತ್ತು. ಇದರಿಂದಾಗಿ ಒಂದು ಬಿಲಿಯನ್‌ಗೂ ಅಧಿಕ ಬಳಕೆದಾರರಿಗೆ ವಾಟ್ಸ್ ಆ್ಯಪ್ ಮತ್ತೆ ಉಚಿತವಾಗಿ ಲಭ್ಯವಾಗಿತ್ತು. ಈಗಲೇ ವಾಟ್ಸ್ ಆ್ಯಪ್‌ನಲ್ಲಿ ಜಾಹೀ ರಾತುಗಳನ್ನು ತುರುಕುವುದು ಬೇಡ ಎಂಬ ನಿಲುವನ್ನು ಫೇಸ್‌ಬುಕ್ ತಳೆದಿದ್ದರಿಂದ ವಾಟ್ಸ್ ಆ್ಯಪ್ ಫೇಸ್‌ಬುಕ್‌ಗಾಗಿ ಬಳಕೆದಾರರ ಮಾಹಿತಿಗಳನ್ನು ಅವರಿಗೆ ಗೊತ್ತಿಲ್ಲದೆ ಸಂಗ್ರಹಿಸುವ ಸಾಧನವಾಗಿದೆ ಎಂಬ ವದಂತಿಗಳು ಸಹಜವಾಗಿಯೇ ಕೇಳಿ ಬಂದಿದ್ದವು.
ಇದರಿಂದ ಚುರುಕಾಗಿದ್ದ ವಾಟ್ಸ್ ಆ್ಯಪ್ ತನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಲೇಖನವೊಂದರ ಮೂಲಕ ಈ ವದಂತಿಗಳನ್ನು ನಿರಾಕರಿಸಿತ್ತು. ಸಂಪೂರ್ಣ ಖಾಸಗಿಯಾದ ಸಂವಹನ ತನಗೆ ನೀತಿಯ ವಿಷಯವಾಗಿದೆ ಮತ್ತು ಆ ಬಗ್ಗೆ ತನ್ನ ಅಭಿಪ್ರಾಯ ದೃಢವಾಗಿದೆ ಎಂದು ವಿವರಿಸಲು ವ್ಯಾಟ್ಸ್ ಆ್ಯಪ್ ಸಹಸ್ಥಾಪಕ ಜಾನ್ ಕೋಮ್ ಪ್ರಯತ್ನಿಸಿದ್ದರು. ವಾಟ್ಸ್ ಆ್ಯಪ್ ಯಾವುದೇ ಮಾಹಿತಿಗಳನ್ನು ಸಂಗ್ರಹಿಸಿಲ್ಲ ಮತ್ತು ದಾಸ್ತಾನು ಮಾಡಿಕೊಂಡಿಲ್ಲ. ನಿಜಕ್ಕೂ ಈ ಧೋರಣೆಯನ್ನು ಬದಲಿಸುವ ಯಾವುದೇ ಯೋಜನೆಯನ್ನು ನಾವು ಹೊಂದಿಲ್ಲ. ಫೇಸ್‌ಬುಕ್‌ನೊಂದಿಗೆ ಪಾಲುದಾರಿಕೆ ಎಂದರೆ ನಾವು ನಮ್ಮ ವೌಲ್ಯಗಳನ್ನು ಬದಲಿಸಬೇಕಾಗುತ್ತದೆ ಎಂದಾಗಿದ್ದರೆ,ನಾವದನ್ನು ಮಾಡುತ್ತಿರಲಿಲ್ಲ ಎಂದೂ ಅವರು ವಿವರಿಸಿದ್ದರು.
2016ರ ಮಧ್ಯದಲ್ಲಿ ನಿಮ್ಮೆಲ್ಲರ ಚಾಟ್‌ಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದ ಸಂದೇಶವು ಇಂತಹ ಎಲ್ಲ ವದಂತಿಗಳನ್ನು ಬುಡದಲ್ಲಿಯೇ ಚಿವುಟುವ ಅವರ ನಿರ್ಧಾರದ ಭಾಗವಾಗಿತ್ತು. ನೀವು ಈ ಚಾಟ್‌ಗಳ ಮೂಲಕ ಕಳುಹಿಸುವ ಸಂದೇಶಗಳು ಸಂಪೂರ್ಣ ಎನ್‌ಕ್ರಿಪ್ಶನ್‌ನೊಂದಿಗೆ ಸುರಕ್ಷಿತವಾಗಿದ್ದು, ವಾಟ್ಸ್ ಆ್ಯಪ್ ಅಥವಾ ಇತರ ಯಾವುದೇ ಮೂರನೇ ಪಾರ್ಟಿ ಅವುಗಳನ್ನು ಓದಲು ಅಥವಾ ಆಲಿಸಲು ಸಾಧ್ಯವಿಲ್ಲ ಎಂದು ಈ ಸಂದೇಶವು ಸ್ಪಷ್ಟಪಡಿಸಿತ್ತು.
ಉದ್ಯಮ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡು ತನ್ನ ಬಳಕೆದಾರರಿಗೆ ನೇರವಾಗಿ ಸಂದೇಶಗಳನ್ನು ಕಳುಹಿಸುವ ಅವಕಾಶ ಕಲ್ಪಿಸಿ ಅದಕ್ಕಾಗಿ ಅವುಗಳಿಗೆ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ತಾನು ಪರೀಕ್ಷೆಗೊಳಪಡಿಸುತ್ತಿದ್ದೇನೆ ಎಂದು ವಾಟ್ಸ್ ಆ್ಯಪ್ ಕಳೆದ ವರ್ಷದ ಜನವರಿಯಲ್ಲಿ ಪ್ರಕಟಿಸಿತ್ತು. ಬಳಕೆದಾರರು ಎಷ್ಟರ ಮಟ್ಟಿಗೆ ಉದ್ಯಮಗಳಿಗೆ ಸಂದೇಶಗಳನ್ನು ರವಾನಿಸಲು ಮತ್ತು ಸ್ವೀಕರಿಸಲು ಇಚ್ಛಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ವಾಟ್ಸ್ ಆ್ಯಪ್ ಈಗಾಗಲೇ ಸಮೀಕ್ಷೆಯನ್ನು ನಡೆಸುತ್ತಿದೆ ಎನ್ನಲಾಗಿದೆ.
ವಾಟ್ಸ್ ಆ್ಯಪ್ ತರಲು ಉದ್ದೇಶಿಸಿರುವ ವ್ಯವಸ್ಥೆಯು ಭಾರತ,ಬ್ರಾಝಿಲ್ ಮತ್ತು ್ತಪಾಕಿಸ್ತಾನಗಳ ದೂರದ ಪ್ರದೇಶಗಳ ಗ್ರಾಹಕರನ್ನು ತಲುಪಲು ತನಗೆ ನೆರವಾಗುತ್ತದೆ ಎಂದು ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್ ಕಂಪನಿ ಕೌಲಾರ್ ಇನ್‌ಕಾರ್ಪೊರೇಷನ್‌ನ ಸಹಸ್ಥಾಪಕ ಉಮರ್ ಇಲ್ಯಾಸ್ ಹೇಳುತ್ತಾರೆ. ಈ ಕಂಪನಿಯು ಡೇರಿ ದನಗಳಿಗಾಗಿ ಐಒಟಿ(ಇಂಟರ್‌ನೆಟ್ ಆಫ್ ಥಿಂಗ್ಸ್) ಸಮರ್ಥ ಕೊರಳುಪಟ್ಟಿಗಳನ್ನು ತಯಾರಿಸುತ್ತದೆ ಮತ್ತು ಈ ಮೂರು ದೇಶಗಳು ಅದರ ಉತ್ಪನ್ನಗಳಿಗೆ ಪ್ರಬಲ ಮಾರುಕಟ್ಟೆಗಳಾಗಬಲ್ಲವು ಮತ್ತು ಇಲ್ಲಿ ವ್ಯಾಟ್ಸ್ ಆ್ಯಪ್ ಜನಪ್ರಿಯ ಸಂವಹನ ಮಾರ್ಗವಾಗಿದೆ. ದನಗಳ ಮೇಲೆ ನಿಗಾ ಇಡಲು ಈ ಕೊರಳುಪಟ್ಟಿಗಳ ಮೂಲಕ ರೈತರಿಗೆ ಸ್ವಯಂ ಆಗಿ ಸಂದೇಶಗಳನ್ನು ರವಾನಿಸಲು ವ್ಯಾಟ್ಸ್ ಆ್ಯಪ್ ಸಂದೇಶ ಸೇವೆಯನ್ನು ಬಳಸಿಕೊಳ್ಳಲು ಈ ಕಂಪನಿಯು ಬಯಸಿದೆ.
ಸೀಡ್-ಸ್ಟೇಜ್ ಕಲ್ಟಿವೇಟರ್ ವೈ ಕಾಂಬಿನೇಟರ್‌ನಂತಹ ಸ್ಟಾರ್ಟ್ ಅಪ್‌ಗಳಿಗೂ ಸಮೀಕ್ಷೆಗಳಲ್ಲಿ ಪಾಲ್ಗೊಳ್ಳುವಂತೆ ವಾಟ್ಸ್ ಆ್ಯಪ್ ಆಹ್ವಾನಿಸಿದೆ ಎನ್ನಲಾಗಿದೆ.
ವಾಟ್ಸ್ ಆ್ಯಪ್ ರೀತಿಯ ಕಂಪನಿಗಳಾದ ಚೀನಾದ ವಿ ಚಾಟ್ ಮತ್ತು ದ.ಕೊರಿಯಾದ ಕಕಾವೊ ಟಾಕ್ ತಮ್ಮ ವೇದಿಕೆಗಳಲ್ಲಿ ಜಾಹೀರಾತುಗಳು ಮತ್ತು ಆನ್‌ಲೈನ್ ಗೇಮ್‌ಗಳಿಗೆ ಅವಕಾಶ ಕಲ್ಪಿಸಿವೆ. ವಿ ಚಾಟ್ ತನ್ನ ಬಳಕೆದಾರರಿಗೆ ಹಣ ರವಾನೆ,ತೆರಿಗೆ,ಇತರ ಸೇವೆಗಳಿಗೆ ಹಣ ಪಾವತಿಯ ಸೌಲಭ್ಯಗಳನ್ನೂ ಒದಗಿಸಿದೆ. 2016ರಲ್ಲಿ ವಿ ಚಾಟ್ ಮೂಲಕ 556 ಬಿ.ಡಾ.ಹಣದ ವಹಿವಾಟು ನಡೆದಿದೆ. ಇವೆಲ್ಲ ಅವುಗಳಿಗೆ ಆದಾಯ ತಂದು ಕೊಡುತ್ತಿವೆ.
ಜಾಹೀರಾತುಗಳನ್ನು ತುರುಕುವುದು ವಾಟ್ಸ್ ಆ್ಯಪ್‌ನ ನೀತಿಗೆ ವಿರುದ್ಧವಾಗಿರು ವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಗೇಮಿಂಗ್ ಮತ್ತು ಪ್ರಸಕ್ತ ಪೇಟಿಎಮ್‌ನ ಹಿಡಿತದಲ್ಲಿರುವ ಮೊಬೈಲ್ ಪೇಮೆಂಟ್ ಕ್ಷೇತ್ರಕ್ಕೆ ಲಗ್ಗೆ ಹಾಕುವ ಮೂಲಕ ಆದಾಯ ಗಳಿಕೆ ಯೋಜನೆಯನ್ನು ಅದು ಹೊಂದಿದೆ.
ಕೃಪೆ:ವಾರ್ತಾಭಾರತಿ