“ಕೈಲಾಗದು ಎಂದು ಕೈ ಕಟ್ಟಿಕುಳಿತರೆ............ ಕಾವೇರಿಯನ್ನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ ಕನ್ನಂಬಾಡಿ ಕಟ್ಟದಿದ್ದರೆ. ಬಂಗಾರ ಬೇಳೆದ, ಆ ಬಂಗಾರ ಬೇಳೆಯುವ, ಹೊನ್ನಾಡು ಆಗುತಿತ್ತೆ. ಈ ನಾಡು ಕನ್ನಡ ಸೀರಿನಾಡು ನಮ್ಮ ಕನ್ನಡ ಸೀರಿನಾಡು”. 1911 ರಲ್ಲೇ ಇಡೀ ವಿಶ್ವವೇ ಅಚ್ಚರಿಯಾಗುವಂತೆ ಭಾರತದಲ್ಲೇ ಅತಿದೊಡ್ಡ, ಸುರಕ್ಷಿತ, ಸ್ವಯಂಚಾಲಿತ ಗೇಟ್ ಅಳವಡಿಸಿದ ಆಣೆಕಟ್ಟು ನಿರ್ಮಿಸಿದ ಕೀರ್ತಿಯೂ ಸರ್. ಎಂ. ವಿಶ್ವೇಶ್ವರಯ್ಯಗೆ ಸಲ್ಲಬೇಕು. ಕನ್ನಂಬಾಡಿ ಕಟ್ಟೆ ಪ್ರಸ್ತುತ ಮಂಡ್ಯ, ಮೈಸೂರು, ಬೆಂಗಳೂರು ಮಾತ್ರವಲ್ಲದೆ ತಮಿಳುನಾಡಿಗೂ ನೀರಿನಾಸರೆ ಆಗಿದೆ.
ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನವಾದ ಸೆಪ್ಟೆಂಬರ್ 15 ರಂದು ಅವರ ಗೌರವಾರ್ಥವಾಗಿ ಭಾರತಾದ್ಯಂತ ‘ಇಂಜೀನಿಯರಗಳ ದಿನ’ ಆಚರಿಸಲಾಗುತ್ತಿದೆ.
ಸರ್. ಎಂ. ವಿಶ್ವೇಶ್ವರಯ್ಯ ಇವರು 1961ನೇಯ ಸೆಪ್ಟೆಂಬರ್ 15 ರಂದು ಚಿಕ್ಕಬಳ್ಳಾಪುರ ತಾಲೂಕಿನ ಮುದೇನ ಹಳ್ಳಿಯಲ್ಲಿ ಜನಿಸಿದರು. ಮೋಕ್ಷಗುಂಡಂ ಎಂಬುವುದು ಆಂದ್ರ ಪ್ರದೇಶದ ಒಂದು ಗ್ರಾಮ. ವಿಶ್ವೇಶ್ವರಯ್ಯನವರ ಪೂರ್ವಿಕರು ಅಲ್ಲಿದ್ದುದರಿಂದ ಮನೆತನದ ಹೆಸರು ಹಿಂಬಾಲಿಸಿ ಬಂತು.
ವಿಶ್ವೇಶ್ವರಯ್ಯನವರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ 1881ರಲ್ಲಿ ಬಿ.ಎ. ಪದವಿಯನ್ನು ಪಡೆದರು. ತದನಂತರ ವಿಶೇಷ ವೇತನ ಪಡೆದು ಪುಣೆಯಲ್ಲಿ ಇಂಜೀನಿಯರಿಂಗ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. 1884ರಲ್ಲಿ ಸರಕಾರಿ ನೌಕರರಾಗಿ ತಮ್ಮ ಜೀವನದ ವೃತ್ತಿಯನ್ನು ಆರಂಭಿಸಿದರು. ಅಸಿಸ್ಟೆಂಟ್ ಇಂಜೀನಿಯರ್, ಸೂಪರಿಟೆಂಡಿಂಗ್ ಇಂಜೀನಿಯರ, ಚೀಫ್ ಇಂಜೀನಿಯರ್, ಮೈಸೂರಿನ ದಿವಾನರು ಆಗಿ ಹತ್ತಾರು ಪದವಿಗಳಲ್ಲಿದ್ದು ಅವರು ದೇಶ ಸೇವೆ ಸಲ್ಲಿಸಿದರು. ಜಪಾನ, ಕೆನಡಾ, ಅಮೇರಿಕಾ, ಯುರೋಪ ಮುಂತಾದ ದೇಶಗಳಲ್ಲಿ ಪ್ರವಾಸ ಕೈಗೊಂಡರು. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಆಯಾ ದೇಶಗಳು ಉದ್ದಿಮೆ ಕ್ಷೇತ್ರಗಳಲ್ಲಿ ಕೈಗೊಂಡಿರುವ ಕ್ರಮಗಳೇನು ಎಂಬುವುದನ್ನು ಅಧ್ಯಯನ ಮಾಡಿದರು.
1906ರಲ್ಲಿ ಅರಬ್ ಪರ್ಯಾಯ ದ್ವೀಪದ ಬ್ರಿಟಿಷ ವಸಾಹತು ಏಡನ್ ಬಂದರಿನಲ್ಲಿ ನೀರಿನ ವ್ಯವಸ್ಥೆಗೆ ಸೂಕ್ತ ಸಲಹೆ ನೀಡಿದರು. ಒಳಚರಂಡಿ ವ್ಯವಸ್ಥೆಯ ಯೋಜನೆಯನ್ನು ನಿರ್ವಹಿಸಿದರು. ಇಂಗ್ಲೇಂಡ ಸರಕಾರ ವಿಶ್ವೇಶ್ವರಯ್ಯನವರ ಸಲಹೆಯನ್ನು ಅಂಗೀಕರಿಸಿ ಅವರಿಗೆ ‘ಕೈಸರ್-ಎ-ಹಿಂದ’ ಎಂಬ ಪ್ರಶಸ್ತಿಯನ್ನು ಗೌರವಿಸಿತು.
“ಮನುಷ್ಯ ಸುಮ್ಮನೆ ಕುಳಿತಿರಬಾರದು ಅದರಿಂದ ಅವನಿಗೂ ಕೇಡು, ದೇಶಕ್ಕೂ ಹಾನಿ” ಎಂಬ ಭಾವನೆಯನ್ನು ವಿಶ್ವೇಶ್ವರಯ್ಯ ಹೊಂದಿದ್ದರು. ಸರಕಾರಕ್ಕೆ ಅವರು ತೋರಿಸಿದ ನಿಷ್ಠೆ ಅಪ್ರತಿಮ, ಹಾಗೆಯೇ ಪ್ರಮಾಣ ಕತೆ, ಆತ್ಮಗೌರವ, ವಿದ್ಯುತಶಕ್ತಿ ಇಲ್ಲದ ಕಾಲದಲ್ಲಿ ಸರಕಾರದ ಮೋಂಬತ್ತಿ ಸರಕಾರದ ಕೆಲಸಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ಮೈಸೂರಿನ ದಿವಾನಗಿರಿಗೆ ಅವರಾಗಿಯೇ 1918 ರಲ್ಲಿ ರಾಜಿನಾಮೆ ಇತ್ತಾಗ ರಾಜಿನಾಮೆ ನೀಡಲು ಸರಕಾರದ ಕಾರಿನಲ್ಲಿ ಹೋದರು ಬರುವಾಗ ಸ್ವಂತ ಕಾರಿನಲ್ಲಿ ಹಿಂದಿರುಗಿದರು. ವಿಶ್ವೇಶ್ವರಯ್ಯ ಧರಿಸುತ್ತಿದ್ದದ್ದು ಆಂಗ್ಲ ಉಡುಪು ಆದರೆ ತಲೆ ಮೇಲೆ ರುಮಾಲು ಇರುತ್ತಿತ್ತು. ನಿತ್ಯ ಜೀವನದಲ್ಲಿ ವಿಶ್ವೇಶ್ವರಯ್ಯನವರು ಸಂಪ್ರದಾಯಸ್ಥರು, ದೈವಭಕ್ತರು.
ಔದ್ಯೋಗಿಕರಣವಾಗದಿದ್ದರೆ ನಿರುದ್ಯೋಗ ಸಮಸ್ಯೆಯನ್ನು ಬಿಡಿಸುವಂತಿಲ್ಲ, ದಾರಿದ್ರ್ಯ ಹೋಗುವುದಿಲ್ಲ ಎಂದು ಮನಗಂಡ ಅವರು ಅಧಿಕಾರದಲ್ಲಿದ್ದಾಗ ಕೈಗಾರಿಕೆಗಳಿಗೆ ಆದ್ಯತೆ ಕೊಟ್ಟರು. “ಔದ್ಯೋಗಿಕರಣ ಇಲ್ಲವೆ ಸರ್ವನಾಶ” ಎಂಬ ಎಚ್ಚರಿಕೆ ನೀಡಿದರು.
ದಕ್ಷ ಇಂಜಿನಿಯರ್, ಮುಂದಾಲೋಚನೆಯ ರಾಜತಂತ್ರಜ್ಞ, ರಾಷ್ಟ್ರದ ಅಭಿವೃದ್ಧಿಗಾಗಿ ಸತತ ಶ್ರಮಿಸಿದ ಜೀವ, ಶುದ್ಧ ಚೇತನ, ಪ್ರಚಂಡ ದೇಶ ಭಕ್ತ ವಿಶ್ವೇಶ್ವರಯ್ಯನವರಿಗೆ (1955)ರಲ್ಲಿ ಭಾರತ ಸರಕಾರ “ಭಾರತ ರತ್ನ” ಪ್ರಶಸ್ತಿಯನ್ನಿತ್ತು ಗೌರವಿಸಿತು. ವಿಶ್ವೇಶ್ವರಯ್ಯನವರಿಗೆ ನೂರುವರ್ಷವಾದರು ದೃಷ್ಟಿ ನಿಚ್ಚಳವಾಗಿತ್ತು. “ಇಳಿವಯಸ್ಸಿನಲ್ಲಿಯೂ ಗಟ್ಟಿಮುಟ್ಟಾಗಿರುವ ಗುಟ್ಟೇನು?” ಎಂದು ಅವರನ್ನು ಪ್ರಶ್ನಿಸಿದಾಗ “ಮುಪ್ಪು ಹಲವು ಬಾರಿ ನನ್ನನ್ನು ಭೇಟಿ ಮಾಡಲು ಬಂದಿತ್ತು. ಬಂದಾಗಲೆಲ್ಲ ಮನೆಯಲ್ಲಿಲ್ಲ ಎಂದು ಮುಂದೆ ಕಳುಹಿಸುತ್ತಿದ್ದೇನೆ” ಎಂದು ಅವರು ನಗೆಯಾಡಿದರು.
ಮುಪ್ಪು ವಿಶ್ವೇಶ್ವರಯ್ಯನವರನ್ನು ಗೆಲ್ಲಲಾಗದೆ ಸೋತಾಗ ಅವರ ಭೇಟಿಗೆ ಮೃತ್ಯು ಬಂದಿತು. 1962ರಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರು ನಿಧನರಾದರು.
ವಿಶ್ವೇಶ್ವರಯ್ಯನವರ ಮುಖ್ಯ ಸಾಧನೆಗಳು : 1912 ರಿಂದ 1919ರ ಅವಧಿಯಲ್ಲಿ ಭಾರತದಲ್ಲಿ ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನು ಗುರುತಿಸಿ ಹಲವಾರು ನದಿಗಳಿಗೆ ಆಣೆಕಟ್ಟುಗಳನ್ನು, ಸೇತುವೆಗಳನ್ನು ನಿರ್ಮಾಣ ಮಾಡಿದರು. ಇದರಿಂದಾಗಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಗೊಳಿಸಿದರು. ಕೃಷ್ಣರಾಜ ಸಾಗರ, ಶರಾವತಿ ಯೋಜನೆ, ಮೈಸೂರಿನಲ್ಲಿ ಶ್ರೀಗಂಧ ಆಯಿಲ್ ಕಾರ್ಖಾನೆ, ಮೈಸೂರು ಬ್ಯಾಂಕ್, ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯ, ಕೋಲಾರ ಚಿನ್ನದಗಣ ಗೆ ವಿದ್ಯುತ್ ಸೌಲಭ್ಯ, ಹಳ್ಳಿಗಳಲ್ಲಿ ಗ್ರಾಮ ಸಮಿತಿ ರಚನೆಗೆ ಚಾಲನೆ, 1949ರಲ್ಲಿ ಔದ್ಯೋಗಿಕರಣ ಯೋಜನೆ ತಯಾರಿ, 1914ರಲ್ಲಿ ಬೆಂಗಳೂರಿನಲ್ಲಿ ಇಂಜೀನಿಯರಿಂಗ್ ಸ್ಕೂಲ್ ಸ್ಥಾಪನೆ, 1913ರಲ್ಲಿ ಹೆಬ್ಬಾಳದಲ್ಲಿ ವ್ಯವಸಾಯ ಶಿಕ್ಷಣ ಶಾಲೆ ಮುಂತಾದ ಮಹತ್ಕಾರ್ಯಗಳನ್ನು ಸಾಧಿಸಿದ ಖ್ಯಾತಿ ವಾಸ್ತುಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ.
ವಿಶ್ವೇಶ್ವರಯ್ಯನವರು ಪಡೆದ ಪ್ರಶಸ್ತಿಗಳು- ಭಾರತ ರತ್ನ (1955), ಫೆಲೊಶಿಪ್(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್), ಕೈಸರ್-ಇ-ಹಿಂದ್, 1904 ರಲ್ಲಿ ಲಂಡನ್ ಸಿವಿಲ್ ಇಂಜೀನಿಯರ್ ಸಂಸ್ಥೆಯ ಗೌರವ ಸದಸ್ಯತ್ವ, 1906ರಲ್ಲಿ ಕೈಸರ್-ಐ-ಹಿಂದ್ ಸೇವಾ ಪ್ರಶಸ್ತಿ, 1911ರಲ್ಲಿ ಕಂಪ್ಯಾನಿಯನ್ ಇಂಡಿಯನ್ ಎಂಪೈರ್, 1913ರಲ್ಲಿ ಬ್ರಿಟಿಷ್ ಸರಕಾರದಿಂದ ‘ಸರ್’ ಗೌರವ, 1915 ನೈಟ್ ಕಮ್ಯಾಂಡರ್ ಆಫ್ ದಿ ಇಂಡಿಯನ್ ಎಂಪೈರ್, 1921ರಲ್ಲಿ ಡಿ ಎಸ್ಸಿ ಕಲ್ಕತ್ತಾ ಯೂನಿವರ್ಸಿಟಿ, 1948ರಲ್ಲಿ ಮೈಸೂರು ವಿ.ವಿ.ಯ ಡಾಕ್ಟರೇಟ್, 1953ರಲ್ಲಿ ಆಂದ್ರ ವಿ.ವಿ ಯಿಂದ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿತು.
ನಮ್ಮ ದೇಶದ ಎಲ್ಲ ಇಂಜೀನಿಯರಗಳು ಸರ್.ಎಂ. ವಿಶ್ವೇಶ್ವರಯ್ಯನವರ ತತ್ವಗಳು, ಸಿದ್ಧಾಂತ, ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿ ಕೊಂಡರೆ ಸದೃಢ ಭಾರತವನ್ನು ಕಟ್ಟ ಬಹುದು.
ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೊ: 9632332185