ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ
ಕಾರವಾರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ, ಒಂದು ವರ್ಷ ಪೂರ್ಣಗೊಂಡಿದ್ದು, ಈ ಯೋಜನೆಯಡಿ 2024 ರ ಜೂನ್ ಅಂತ್ಯದ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದಿದ್ದು, 178.12 ಕೋಟಿ ರೂ ಮೊತ್ತದ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ವಿತರಿಸಲಾಗಿದೆ.
ಶಕ್ತಿ ಯೋಜನೆಯ ಯಶಸ್ಸಿಗೆ ಸಂಸ್ಥೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇವಾ ಮನೋಭಾವದಿಂದ ಹಗಲು ರಾತ್ರಿ ಶ್ರಮಿಸಿದ್ದಾರೆ. ಜಿಲ್ಲೆಗೆ ಅಗತ್ಯವಿರುವ ಹೆಚ್ಚುವರಿ ಬಸ್‌ಗಳ ಬಗ್ಗೆ ಮತ್ತು ಕೊರತೆಯಿರುವ ಸಿಬ್ಬಂದಿಗಳ ನೇಮಕಾತಿ ಕುರಿತಂತೆ ಬೆಂಗಳೂರಿನ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಆದರೆ ಈ ಯಾವ ಕೊರತೆಗಳೂ ಕೂಡಾ ಸಂಸ್ಥೆಯಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ; ಶ್ರೀನಿವಾಸ್, ವಿಭಾಗೀಯ ನಿಯಂತ್ರಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಉತ್ತರಕನ್ನಡ ಜಿಲ್ಲೆ. |
ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿದ್ದು, ಒಬ್ಬರು ಮಹಿಳೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಲು ಮುಂದಾದಾದರೆ ಅವರೊಂದಿಗೆ ಮಕ್ಕಳು ಹಾಗೂ ಪತಿ ಕೂಡ ಬಸ್‌ನಲ್ಲಿ ಪ್ರಯಾಣಸುತ್ತಿದ್ದು, ಇದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರತೀ ದಿನ 1.50 ಲಕ್ಷಕೂ ಅಧಿಕ ಮಹಿಳೆಯರು ಈ ಉಚಿತ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಈ ಯೋಜನೆ ಆರಂಭವಾದ ಜೂನ್ 2023 ರ ಮಾಹೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ 30 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದು, ಜೂನ್ 2024 ರಲ್ಲಿ ಈ ಸಂಖ್ಯೆ 51 ಲಕ್ಷ ತಲುಪಿದ್ದು, ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ಅವಧಿಯಲ್ಲಿ ದೈನಂದಿನ ಪ್ರಯಾಣದ ಮೊತ್ತ 8.33 ಕೋಟಿಯಿಂದ 14.62 ಕೋಟಿ ರೂ ಗಳಷ್ಟು ಹೆಚ್ಚಾಗಿದೆ.
ಯೋಜನೆಯ ಆರಂಭಕ್ಕೂ ಮುನ್ನ ವಾರದ ದಿನಗಳಲ್ಲಿ ಸಾಮಾನ್ಯವಾಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ 50-60 ರಷ್ಟಿರುತ್ತಿತ್ತು ಆದರೆ ಶಕ್ತಿ ಯೋಜನೆ ಜಾರಿಯಾದ ಬಳಿಕ ಶೇಕಡಾ 90 ಕ್ಕಿಂತ ಹೆಚ್ಚಾಗಿದೆ ಮಾತ್ರವಲ್ಲದೇ ಪೀಕ್ ಹವರ್ ಅಲ್ಲದ ಸಮಯದಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇವೆಲ್ಲವೂ ರಸ್ತೆ ಸಾರಿಗೆ ಸಂಸ್ಥೆಯ ಆದಾಯವನ್ನು ಹೆಚ್ಚಳಕ್ಕೆ ಸಹಾಯ ಮಾಡಿದ್ದು, ಡೀಸೆಲ್ ಬೆಲೆ ಹೆಚ್ಚಳವಾದರೂ ಯಾವುದೇ ದರ ಏರಿಕೆ ಇಲ್ಲದೇ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ.
ಶಕ್ತಿ ಯೋಜನೆಯ ಆರಂಭಗೊAಡ ನಂತರ ಜಿಲ್ಲೆಗೆ 2 ಪಲ್ಲಕ್ಕಿ ಬಸ್‌ಗಳು ಸೇರಿದಂತೆ ಒಟ್ಟು 67 ಹೊಸ ಬಸ್ ಮಂಜೂರಾಗಿದ್ದು, ಕಾರ್ಯಾಚರಣೆಯಲ್ಲಿ ತೊಡಗಿವೆ. ಕೆಲವು ಬಸ್‌ಗಳ ನಿಗಧಿತ ಸಂಚಾರದ ಅವಧಿ ಮುಗಿಯುತ್ತಾ ಬಂದಿದ್ದು, ಜಿಲ್ಲೆಗೆ ಕನಿಷ್ಠ ಇನ್ನೂ 100 ಹೊಸ ಬಸ್‌ಗಳ ಅವಶ್ಯಕತೆಯಿದೆ. ಸಾರ್ವಜನಿರಿಂದಲೂ ಹೊಸ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಬೇಡಿಕೆ ಬರುತ್ತಿದ್ದು, ಪ್ರಸುತ ಇರುವ ಬಸ್‌ಗಳಲ್ಲಿ ಜನದಟ್ಟಣಿ ತಪ್ಪಿಸುವ ಉದ್ದೇಶದಿಂದ ಬಸ್‌ಗಳ ಟ್ರಿಪ್ ಸಂಚಾರವನ್ನು ಅಧಿಕಗೊಳಿಸಲಾಗಿದೆ.