ಭಟ್ಕಳದಲ್ಲಿ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವವವ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್.ಡಿ.ಪಿ.ಐ ಆಗ್ರಹ

Source: S O news | By Staff Correspondent | Published on 4th November 2024, 7:03 PM | Coastal News |

ಭಟ್ಕಳ: ಭಟ್ಕಳ ತಾಲೂಕಿನ ಜಾಲಿಪಟ್ಟಣ ಪಂಚಾಯತ್ ನ ಏಕೈಕ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ಕಾಝಿಯಾ ಅಪ್ಸ ಹುಝೈಫಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದು ಧಾರ್ಮಿಕ ಸೌಹಾರ್ದತೆಯನ್ನು ಕೆಡಿಸುವ ಷಡ್ಯಂತ್ರ ನಡೆಯುತ್ತಿದೆ ಇಂತಹವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಎಸ್.ಡಿ.ಪಿ.ಐ ಪಕ್ಷವು ಸೋಮವಾರ ಸಹಾಯಕ ಆಯುಕ್ತರ ಮೂಲಕ ಉ.ಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನವೆಂಬರ್ 01 ರಂದು ತಾಲೂಕು ಆಡಳಿತ ಭಟ್ಕಳದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕಾಝಿಯಾ ಅಪ್ಪಾ ಹುಜೈಫಾ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿದ್ದಾರೆ. ಎಂದು ಸ್ಥಳೀಯ ಬಿಜೆಪಿ ಮುಖಂಡರು, ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಪ್ರಚಾರ ಮಾಡುತ್ತಿರುವುದು, ಅವರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳಿಗೆ ಉಲ್ಲಂಘನೆಯಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ವಾಸ್ತವದಲ್ಲಿ ಪಂಚಾಯತ್ ಅಧ್ಯಕ್ಷೆ ಕಾಝಿಯಾ ಅಪ್ಸ, ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪ ನಮನ ಮಾಡಲು ನಿರಾಕರಿಸಲಿಲ್ಲ ಬದಲಾಗಿ ಇತರ ವೇದಿಕೆಯಲ್ಲಿದ್ದ ಗಣ್ಯರಿಗೆ ಅವಕಾಶ ಮಾಡಿ ಕೊಟ್ಟು ಗೌರವ ಪೂರ್ವಕ ಭಾವನೆಯೊಂದಿಗೆ ವೇದಿಕೆಯಲ್ಲಿಯೇ ನಿಂತಿರುವುದನ್ನು ಫೋಟೋ ಮತ್ತು ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಆದರೆ ಕರ್ನಾಟಕ ರಾಜ್ಯೋತ್ಸವದ ದಿನ ತಮ್ಮ ಪಕ್ಷದ ಹೆಸರಲ್ಲಾಗಲಿ ಅವರು ಪ್ರತಿನಿಧಿಸುವ ಸಂಘಟನೆಗಳ ಹೆಸರಲ್ಲಾಗಲಿ ಒಂದು ಧ್ವಜಾರೋಹಣವನ್ನು ಕೂಡ ಮಾಡದ ಬಿಜೆಪಿ ಮತ್ತು ಸಂಘಪರಿವಾರದ ಹಿನ್ನೆಲೆ ಇರುವವರು ಅಲ್ಪಸಂಖ್ಯಾತ ಸಮುದಾಯದ ಮಹಿಳೆಯೊಬ್ಬರು ಪಂಚಾಯತ್ ಅಧ್ಯಕ್ಷೆ ಆಗಿರುವುದನ್ನು ಸಹಿಸದೇ ಅಪಪ್ರಚಾರಗಳನ್ನು ನಡೆಸಿ ಅವಮಾನ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.

ಬಿಜೆಪಿ ಮತ್ತು ಸಂಘಪರಿವಾರ ಇದೇ ರೀತಿ ಈ ಹಿಂದೆಯೂ ಕೂಡ ಅಪಪ್ರಚಾರ ಮಾಡುತ್ತಿರುವುದು ಹಾಗೂ ಪದೇ ಪದೇ ಭಟ್ಕಳ ತಾಲೂಕಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನು ಉಂಟುಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ತಂದಿರುತ್ತೇವೆ. ಈ ರೀತಿಯ ಷಡ್ಯಂತ್ರಗಳನ್ನು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದನ್ನು ತಡೆಯುವ ಭಾಗವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೌಸೀಫ್ ಬ್ಯಾರಿ, ತಾಲೂಕಾಧ್ಯಕ್ಷ ಮಕ್ಬೂಲ್ ಶೇಕ್ ಮತ್ತಿರರು ಉಪಸ್ಥಿತರಿದ್ದರು.

Read These Next