ಭಟ್ಕಳ: ತಾಲೂಕಿನ ಬಂದರ ರಸ್ತೆಯ ಡೊಂಗರ್ ಪಳ್ಳಿ ಸಮೀಪ ಅಪರಿಚಿತ ಪುರುಷನ ಅಸ್ಥಿಪಂಜರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ, ನಾಗರಿಕರ ಆತಂಕ ಹೆಚ್ಚಿಸಿದೆ.
ಮಖ್ದೂಮ್ ಕಾಲೋನಿ ಕುರಿಗಾಹಿಯೊಬ್ಬನು ಮೇಕೆ ಮೇಯಿಸುತ್ತಿದ್ದಾಗ, ಈ ದೃಶ್ಯ ಕಂಡುಬಂದಿದೆ. ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದಾಗ, ಭಟ್ಕಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು ಒಂದೆರಡು ತಿಂಗಳ ಹಿಂದೆ ವ್ಯಕ್ತಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನೆಲದಿಂದ ಸುಮಾರು 10 ಅಡಿ ಎತ್ತರದಲ್ಲಿ ನೈಲಾನ್ ಹಗ್ಗದಿಂದ ಶವವು ಮರಕ್ಕೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ, ದೇಹದಿಂದ ತಲೆ ಬೇರ್ಪಟ್ಟು ನೆಲಕ್ಕೆ ಬಿದ್ದಿದೆ. ಶವದ ಪಕ್ಕದಲ್ಲಿ ಚಪ್ಪಲಿ ಪತ್ತೆಯಾದ ಕಾರಣ, ಇದು ಪುರುಷನ ಶವವೆಂದು ಗುರುತಿಸಲಾಗಿದೆ.
ಮುಖ್ಯ ರಸ್ತೆಯ ಬಳಿಯಲ್ಲಿ ಘಟನೆ ನಡೆದರೂ, ಇಷ್ಟು ದಿನ ಬೆಳಕಿಗೆ ಬರದಿರುವುದು ಅಚ್ಚರಿಯ ಸಂಗತಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ನೂರಾರು ಜನರು ಧಾವಿಸಿ ದೃಶ್ಯ ವೀಕ್ಷಿಸುತ್ತಿದ್ದರು.
ಪೊಲೀಸರು ಅಸ್ಥಿಪಂಜರನ್ನು ಬಟ್ಟೆಯಲ್ಲಿ ಹೊತ್ತೊಯ್ದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಭಟ್ಕಳ ನಗರ ಠಾಣೆಯ ಪಿ.ಎಸೈ.ಐ. ನವೀನ್ ನಾಯ್ಕ, ಪಿ.ಎಸ್.ಐ. ಸೋಮನಾಥ ರಾಥೋಡ, ಎ.ಎಸ್.ಐ. ರವಿ ನಾಯ್ಕ ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.