ಭಟ್ಕಳ: ಭಟ್ಕಳದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಬೀದಿ ನಾಯಿ ದಾಳಿಯಿಂದಾಗಿ ಇಬ್ಬರು ಬಾಲಕರು ಹಾಗೂ ಶಾಲಾ ವಾಹನ ಚಾಲಕ ಸೇರಿದಂತೆ ಮೂವರು ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಜರಗಿದೆ.
ನಾಯಿ ದಾಳಿಯಿಂದಾಗಿ ಗಾಯಗೊಂಡವರನ್ನು ಮಖ್ದೂಮ್ ಕಾಲೋನಿಯ ಅಲಿ ಮಲ್ಪಾ (5), ತೆಂಗಿನಗುಂಡಿಯ ಶಾಲಾ ವ್ಯಾನ್ ಚಾಲಕ ಅಬು ಮುಹಮ್ಮದ್ (50) ಮತ್ತು ಡೊಂಗರಪಳ್ಳಿಯ ಬಾಲಕ ಇಬ್ರಾಹಿಂ ಸಿಯಾನ್ ಸಿದ್ದಿ ಬಾಪಾ (6) ಎಂದು ಗುರುತಿಸಲಾಗಿದೆ.
Rising Stray Dog Menace in Bhatkal: Recent Attacks Leave three Injured
ವರದಿಗಳ ಪ್ರಕಾರ, ಮಕ್ಕಳನ್ನು ಬಿಡಲು ಶಾಲಾ ವ್ಯಾನ್ ಮಖ್ದೂಮ್ ಕಾಲೋನಿ ಕಟ್ಟೆ ಬಳಿ ಬಂದಾಗ ಮೊದಲ ಘಟನೆ ಸಂಭವಿಸಿದೆ. ಶಾಲಾ ಬಾಲಕ ಅಲಿ ಮಲ್ಪಾ(5) ವಾಹನದಿಂದ ಇಳಿದು ನಡೆಯಲು ಆರಂಭಿಸುತ್ತಿದ್ದಂತೆ ನಾಯಿಯೊಂದು ಏಕಾಏಕಿ ದಾಳಿ ನಡೆಸಿ ಬಾಲಕನ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಬಾಲಕನ ರಕ್ಷಣೆಗೆ ಧಾವಿಸಿದ ಚಾಲಕ ಅಬು ಮುಹಮ್ಮದ್ (50) ರ ಮೇಲೂ ನಾಯಿ ಅಕ್ರಮಣ ಮಾಡಿದ್ದು, ಅವರ ತಲೆ, ಕೈ, ಎದೆ ಮತ್ತು ಪಾದಗಳಿಗೆ ತೀವ್ರ ಗಾಯಗಳಾಗಿವೆ.
ಈ ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಮಖ್ದೂಮ್ ಕಾಲೋನಿಯ ತಗ್ಗು ಪ್ರದೇಶವಾದ ಡೊಂಗರಪಳ್ಳಿ ಎಂಬಲ್ಲಿ ಮತ್ತೊಂದು ನಾಯಿ ದಾಳಿ ಪ್ರಕರಣ ನಡೆದಿದೆ. ಇಬ್ರಾಹಿಂ ಸಿಯಾನ್ (6) ಎಂಬ ಬಾಲಕ ತನ್ನ ತಂದೆ ಮೂಸಾ ಸಿದ್ದಿ ಬಾಪಾ ಅವರೊಂದಿಗೆ ಮನೆಯ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ನಾಯಿ ಮಗುವಿನ ಮೇಲೆ ದಾಳಿ ಮಾಡಿದೆ. ಆದರೆ ತಂದೆಯು ಬಾಲಕನ ರಕ್ಷಣೆ ಮಾಡಿದ್ದು ಹೆಚ್ಚಿನ ಅನಾಹುತದಿಂದ ತಡೆದಿದ್ದಾರೆ. ಮೂವರಿಗೂ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ರೇಬಿಸ್ ಚುಚ್ಚುಮದ್ದು ನೀಡಲಾಗಿದ್ದು, ಗಾಯಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ.
ಭಟ್ಕಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ದಾಳಿ ಆಗಾಗ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ನಾಯಿಗಳ ದಾಳಿಯ ಘಟನೆಗಳು ಭಟ್ಕಳದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕ್ರಮಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ.