ಯೋಗೇಶ್ವರ್‌ಗೆ ಜೆಡಿಎಸ್ ಟಿಕೆಟ್ ಕೊಡುವಂತೆ ಬಿಜೆಪಿ ವರಿಷ್ಠರ ಒತ್ತಡ: ಎಚ್‌ಡಿಕೆ

Source: Vb | By I.G. Bhatkali | Published on 23rd October 2024, 11:56 AM | State News |

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ವರಿಷ್ಠ ನಾಯಕರು ಸಿ.ಪಿ. ಯೋಗೇಶ್ವರ್‌ಗೆ ಜೆಡಿಎಸ್ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಮಂಗಳವಾರ ನಗರದಲ್ಲಿರುವ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಭೆಯಲ್ಲಿ ಕಾರ್ಯಕರ್ತರ ಭಾವನೆಗಳನ್ನು ಅರಿತುಕೊಂಡಿದ್ದೇನೆ. ಸ್ಥಳೀಯವಾಗಿ ಬಿಜೆಪಿ ನಾಯಕರಲ್ಲಿ ಗೊಂದಲವಿದೆ. ಇನ್ನೂ ಮೂರು ದಿನ ಸಮಯವಿದೆ. ಎಲ್ಲ ಬೆಳವಣಿಗೆ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಬೆಳಗ್ಗೆಯಿಂದ ಎಲ್ಲ ಕಾಂಗ್ರೆಸ್ ನಾಯಕರು ಯೋಗೇ ಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಸಾಲು ಸಾಲಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮೂರು ದಿನಗಳ ಹಿಂದೆ ನಡ್ಡಾ ಅವರು ಸಿ.ಪಿ. ಯೋಗೇಶ್ವರ್‌ಗೆ ಜೆಡಿಎಸ್ ಪಕ್ಷದಿಂದಲೇ ಬಿ ಫಾರಂ ಕೊಡಿ ಎಂದು ಕೇಳಿದ್ದರು. ಮೊದಲು ಮೈತ್ರಿಯ ಯಾವ ಪಕ್ಷದಿಂದಲಾದರೂ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದು ಹೇಳುತ್ತಿದ್ದ ಯೋಗೇಶ್ವರ್, ಆ ಮೇಲೆ ವರಸೆ ಬದಲಿಸಿದರು. ಈಗ ಬಿಎಸ್ಪಿಯಿಂದ ನಿಲ್ಲುತ್ತೇನೆ ಎನ್ನುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು. ಇದಕ್ಕೂ ಮುನ್ನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಚನ್ನಪಟ್ಟಣ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ?

ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ. ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.  

ಎನ್‌ಡಿಎ ಮೈತ್ರಿ ಭದ್ರವಾಗಿದೆ. ಪ್ರಧಾನಿ ಮೋದಿ ಹಾಗೂ ದೇವೇಗೌಡರ ನಡುವಿನ ಗೌರವಭಾವ ಎಂತಹದ್ದು ಎನ್ನುವುದನ್ನು ನಾನು ನೋಡಿದ್ದೇನೆ. ದಿಲ್ಲಿಯ ಬಿಜೆಪಿ ನಾಯಕರು ಜೆಡಿಎಸ್ ಪಕ್ಷಕ್ಕೆ ಬಹಳ ಗೌರವ ಕೊಟ್ಟಿದ್ದಾರೆ. ನನಗೆ ಕೆಲಸ ಮಾಡಲು ಮುಕ್ತ ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ-ಜೆಡಿಎಸ್ ನಾಯಕರಿಗೆ ಯೋಗೇಶ್ವ‌ರ್ ಸಡ್ಡು; ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಣೆ:  ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಘೋಷಿಸುವ ಮೂಲಕ, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಬಹಿರಂಗವಾಗಿ ಸಡ್ಡು ಹೊಡೆದಿದ್ದಾರೆ. 

ಮಂಗಳವಾರ ಚನ್ನಪಟ್ಟಣದಲ್ಲಿ ತಮ್ಮ ಮಂಗಳವಾರ ಚನ್ನಪಟ್ಟಣದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯೋಗೇಶ್ವ‌ರ್, 'ಯಾವುದೇ ರೀತಿಯ ದುಡುಕಿನ ತೀರ್ಮಾನ ಇಲ್ಲ. ನಮ್ಮ ಮುಖಂಡರು, ಕಾರ್ಯಕರ್ತರ ಅಭಿಪ್ರಾಯದಂತೆ ಮುಂದುವರಿಯುತ್ತೇನೆ. ಇಷ್ಟು ದಿನ ತಾಳ್ಮೆಯಿಂದ ಹೋರಾಟ ಮಾಡಿಕೊಂಡು, ನಿಮ್ಮ ಗೌರವವನ್ನು ಎತ್ತಿ ಹಿಡಿದುಕೊಂಡು ಬಂದಿದ್ದೇನೆ' ಎಂದು ಹೇಳಿದರು. ಇದೇ ವೇಳೆ ಕಾರ್ಯಕರ್ತರು ಯಾವ ಚಿಹ್ನೆ ಎಂದು ಹೇಳಿ, ನಿಮ್ಮನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಕೂಗಿದರು. ಅಲ್ಲದೆ, ಯೋಗೇಶ್ವರ್ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಸ್ಥಳೀಯ ಮುಖಂಡರೊಬ್ಬರು, 'ಎನ್‌ಡಿಎ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಬೇಕು ಎಂದು ನಾವು ಕಾಯುತ್ತಿದ್ದೇವೆ. ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದಿದ್ದರೆ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ' ಎಂದು ಹೇಳಿದರು.

Read These Next

ಭಾರೀ ಮಳೆಗೆ ಬೆಂಗಳೂರು ತತ್ತರ; ಯಲಹಂಕದಲ್ಲಿ 1 ಸಾವಿರ ಮನೆಗಳಿಗೆ ನುಗ್ಗಿದ ಮಳೆ ನೀರು

ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ವಿವಿಧೆಡೆ ಅವಾಂತರ ಸೃಷ್ಟಿಯಾಗಿದೆ. ಸೋಮವಾರ ರಾತ್ರಿಯೆಲ್ಲಾ ಸುರಿದು ...

ಬೆಂಗಳೂರು: ನಿರ್ದೇಶನಾಲಯದ ಕಚೇರಿಯಲ್ಲಿ ಮಾಹಿತಿ ತಂತ್ರಜ್ಞರ ಸೇವೆ ಪಡೆಯಲು ಅರ್ಜಿ ಆಹ್ವಾನ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಕಛೇರಿಯಲ್ಲಿ ಇಲಾಖೆಯ ಯೋಜನೆಗಳನ್ನು ಸಮಪರ್ಕವಾಗಿ ಇ-ಆಫೀಸ್ ತಂತ್ರಾಂಶ ...

ಬೆಂಗಳೂರು: ರಾಷ್ಟ್ರ ದಲ್ಲಿ ರಾಜ್ಯ ಕೃಷಿ ವಿಶ್ವವಿದ್ಯಾನಿಲಯವು ಸಂಶೋಧನೆ, ಅಭಿವೃದ್ಧಿಯಲ್ಲಿ ಪ್ರಮಖ ಪಾತ್ರ ವಹಿಸಿದೆ : ಕೆ.ಎಚ್.ಮುನಿಯಪ್ಪ

ರಾಷ್ಟ್ರದಲ್ಲಿ ನಮ್ಮ ಕೃಷಿ ವಿಶ್ವವಿದ್ಯಾನಿಲಯವು ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ಮತ್ತು ಅಭಿವೃಧ್ಧಿಯಲ್ಲಿ ಪ್ರಮುಖ ...