ಹೊಸದಿಲ್ಲಿ: ಹಮಾಸ್-ಇಸ್ರೇಲ್ ನಡುವಿನ ಯುದ್ಧದಲ್ಲಿ ನಾಗರಿಕರ ಸಾವುಗಳನ್ನು ಭಾರತವು ಬಲವಾಗಿ ಖಂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಇಲ್ಲಿ ಹೇಳಿದರು. ಈ ಸಂಘರ್ಷದ ಸಂದರ್ಭದಲ್ಲಿ ಪಶ್ಚಿಮ ಏಶ್ಯದಲ್ಲಿ ಹೊರಹೊಮ್ಮುತ್ತಿರುವ ಸವಾಲುಗಳನ್ನು ಎದುರಿಸಲು ಜಾಗತಿಕ ದಕ್ಷಿಣ ದೇಶಗಳ ನಡುವೆ ಒಗ್ಗಟ್ಟಿನ ಅಗತ್ಯಕ್ಕೆ ಅವರು ಒತ್ತು ನೀಡಿದರು.
ಭಾರತವು ವರ್ಚುವಲ್ ಆಗಿ ಆಯೋಜಿಸಿದ್ದ ಎರಡನೇ 'ವಾಟ್ಸ್ ಆಫ್ ಗ್ಲೋಬಲ್ ಸೌಥ್' ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಮಾತುಕತೆ, ರಾಜತಾಂತ್ರಿಕತೆ ಮತ್ತು ಸಂಯಮದೊಂದಿಗೆ ಪರಿಸ್ಥಿತಿಯನ್ನು ಎದುರಿಸುವ ಭಾರತದ ನಿಲುವನ್ನು ಒತ್ತಿ ಹೇಳಿದರು. ಅ.7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಯನ್ನು ಖಂಡಿಸಿದ ಅವರು,ಸಂಘರ್ಷದಲ್ಲಿ ನಾಗರಿಕರ ಸಾವುನೋವುಗಳಿಗೆ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸಿದರು.
'ವಾಯ್ಸ್ ಆಫ್ ಗ್ಲೋಬಲ್ ಸೌಥ್' ಶೃಂಗಸಭೆಯ ಮಹತ್ವಕ್ಕೆ ಒತ್ತು ನೀಡಿದ ಪ್ರಧಾನಿ,ಅದು 21ನೇ ಶತಮಾನದ ಬದಲಾಗುತ್ತಿರುವ ಆಯಾಮಗಳನ್ನು ಪ್ರತಿಬಿಂಬಿಸುವ ವಿಶಿಷ್ಟ ವೇದಿಕೆಯಾಗಿದೆ ಎಂದು ಹೇಳಿದರು.
ಸಮಾಲೋಚನೆ, ಸಂವಹನ, ಸಹಕಾರ, ಸೃಜನಾತ್ಮಕತೆ ಮತ್ತು ಸಾಮರ್ಥ್ಯ ನಿರ್ಮಾಣ ಈ ಅಂಶಗಳನ್ನು ಆಧರಿಸಿದ ಪರಸ್ಪರ ಸಹಕಾರಕ್ಕೂ ಅವರು ಕರೆ ನೀಡಿದರು.