ಖಾಸಗಿ ಬಸ್ಸಿನಲ್ಲಿ ಸಹ ಪ್ರಯಾಣಿಕರು ಹಾಗೂ ಚಾಲಕನಿಂದ ಭಟ್ಕಳದ ಯುವಕನಿಗೆ ಥಳಿತ; ಭಟ್ಕಳದಲ್ಲಿ ಬಸ್ ತಡೆದು ಪ್ರತಿಭಟನೆಗೆ ಯತ್ನ
ಭಟ್ಕಳ: ಹೈದರಾಬಾದಿನಿಂದ ಮಂಗಳೂರಿಗೆ ಬರುತ್ತಿರುವ ಖಾಸಗಿ ಓಲ್ವೋ ಸ್ಲೀಪರ್ ಬಸ್ಸಿನಲ್ಲಿ ಗಂಗಾವತಿ ಬಳಿ ಭಟ್ಕಳದ ಯುವಕನ ಮೇಲೆ ಸೋಮವಾರದಂದು ರಾತ್ರಿ ೧೧ಗಂಟೆ ಸುಮಾರು ಗುಂಪು ಹಲ್ಲೆ ನಡೆದಿದೆ ಎನ್ನಲಾಗಿದ್ದು ಹಲ್ಲೆಗೊಳಗಾದ ಯುವಕ ಮಂಗಳವಾರ ಸಂಜೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಸಂಬಂಧಿಸಿದಂತೆ ಆಕ್ರೋಶಿತ ಭಟ್ಕಳದ ನೂರಾರು ಯುವಕರು ಮಂಗಳೂರಿನಿಂದ ಹೈದರಾಬಾದ್ ಗೆ ಹೋಗುತ್ತಿದ್ದ ಅದೇ ಬಸ್ಸನ್ನು ಭಟ್ಕಳದ ಹೊಟೇಲ್ ವೈಭವದ ಎದರು ತಡೆಯಲು ಪ್ರಯತ್ನಿಸಿದಾಗ ಪೊಲೀಸರು ಆಕ್ರೋಶಿತರನ್ನು ಚದುರಿಸಿ ಯುವಕರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎನ್ನಲಾಗಿದೆ.
ಬಸ್ಸಿನಲ್ಲಿ ಹಲ್ಲೆಗೊಳಗಾದ ಯುವಕನನ್ನು ಭಟ್ಕಳ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಹನಿಫಾಬಾದ್ ನಿವಾಸಿ ಮುಜೀಬುರ್ರಹ್ಮಾನ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಎಪ್ರಿಲ್ ೨೨ ರಂದು ಹೈದರಾಬಾದ್ ನಲ್ಲಿ ಎಕ್ಸಿಬ್ಯೂಷನ್ ನಲ್ಲಿ ಸೋಡಾ ಸ್ಟಾಲ್ ಹಾಕಲು ಭಟ್ಕಳದಿಂದ ತೆರಳಿದ ಮುಜೀಬ್ ಅಲ್ಲಿ ಎರಡು ತಿಂಗಳು ಕೆಲಸ ಮಾಡಿ ಸೋಮವಾರ ಸಂಜೆ ಹೈದರಾಬಾದ್ ನಿಂದ ಭಟ್ಕಳ ಮಾರ್ಗವಾಗಿ ಮಂಗಳೂರಿಗೆ ಹೋಗುವ ಖಾಸಗಿ ಬಸ್ ನಲ್ಲಿ ಪ್ರಯಾಣಿಸಿದ್ದಾನೆ. ರಾತ್ರಿ ಎಂಟು ಗಂಟೆ ಸುಮಾರು ಯುವಕನಿಗೆ ಮೈಕೈ ನೋವು ಆರಂಭಗೊಂಡಿದ್ದು ಜ್ವರ ಕಾಣಿಸಿಕೊಂಡಿದೆ. ಇದರಿಂದಾಗಿ ಈತ ಬಸ್ಸಿನಲ್ಲಿ ಅತ್ತಿತ್ತ ಓಡಾಲು ಆರಂಭಿಸಿದ್ದಾನೆ. ಮುಂದಿನ ಆಸನದಲ್ಲಿ ಕುಳಿತ ವ್ಯಕ್ತಿಯೊಬ್ಬನ ಬಳಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದವಾಗಿದೆ. ಕೊನೆಗೆ ಯುವಕ ಬಸ್ಸಿನ ಕ್ಯಾಬಿನ್ ಗೆ ಹೋಗಿ ಚಾಲಕನ ಬಳಿ ಜ್ವರ ಮೈಕೈ ನೋವಿನ ಬಗ್ಗೆ ಹೇಳಿಕೊಂಡಿದ್ದಾನೆ ಚಾಲನ ತನ್ನಲ್ಲಿದ್ದ ಮಾತ್ರೆಯನ್ನು ನೀಡಿದ್ದು ಅದರ ಸೇವೆನಯಿಂದಾಗಿ ಮಾತ್ರೆಯ ಪವರ್ ಹೆಚ್ಚಾಗಿ ಯುವಕನಿಗೆ ಮತ್ತು ಬಂದಂತಾಗಿದೆ. ನಂತ ಆತನ ಮೇಲೆ ಹಲ್ಲೆ ನಡೆದಿದೆ. ಎಷ್ಟು ಜನರು ಹಲ್ಲೆ ಮಾಡಿದ್ದಾರೆ ಏಕೆ ಹಲ್ಲೆ ಮಾಡಿದ್ದಾರೆ ಎನ್ನುವುದು ಯುವಕನಿಗೆ ನೆನಪಿಲ್ಲ.
ನೀನು ಈಗ ದೇವರಲ್ಲಿ ಪ್ರಾರ್ಥನೆ ಮಾಡಿಕೊ ನಿನ್ನ ಕತೆ ಮುಗಿಯಿತು ಎಂದು ಚಾಲಕ ಹೇಳಿದ್ದಾಗಿ ಯುವಕ ಮಾಹಿತಿ ನೀಡಿದ್ದಾನೆ.. ಗಂಗಾವತಿಯ ಸಮಿಪ ಯುವಕ ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ಬಸ್ಸಿನಿಂದ ಕೆಳಕ್ಕೆ ಇಳಿದಿದ್ದಾನೆ ಆತನನ್ನು ಅಲ್ಲಿಯೇ ಬಿಟ್ಟು ಬಸ್ ಪ್ರಯಣಿಸಿದೆ. ಅಲ್ಲಿನ ಸ್ಥಳಿಯರು ಕಳ್ಳ ಇರಬಹುದು ಎಂದು ತಿಳಿದು ಅವರು ಸಹ ಯುವಕನ ಮೇಲೆ ಹಲ್ಲೆ ಮಾಡಿದ್ದಾಗಿ ಮುಜೀಬ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ. ನಂತರ ಬೇರೆ ಬಸ್ ಹಿಡಿದು ಮಂಗಳವಾರ ಸಂಜೆ ಭಟ್ಕಳಕ್ಕೆ ತಲುಪಿ ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಸಂದರ್ಭದಲ್ಲಿ ಮಾಧ್ಯಮದವರ ಮುಂದೆ ತನ್ನ ಮೇಲಾದ ಹಲ್ಲೆಯ ಘಟನೆಯನ್ನು ವಿವರಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಮಂಗಳೂರಿನಿಂದ ಭಟ್ಕಳ ಮಾರ್ಗವಾಗಿ ಹೈದರಾಬಾದ್ ಹೋಗುವ ಖಾಸಗಿ ಬಸ್ ಮಂಗಳವಾರ ಸಂಜೆ ೬ಗಂಟೆಗೆ ಭಟ್ಕಳಕ್ಕೆ ಬರುತ್ತದೆ ಎಂಬುದನ್ನು ಅರಿತ ಭಟ್ಕಳದ ನೂರಾರು ಮಂದಿ ಯುವಕರು ಬಸ್ ನ್ನು ತಡೆದು ಚಾಲಕ ಮತ್ತು ಕಂಡಕ್ಟರ್ ನನ್ನು ವಿಚಾರಿಸಲು ರಾ.ಹೆ.೬೬ರ ಹೊಟೇಲ್ ವೈಭವ್ ಬಳಿ ಸೇರಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡದೆ ಯುವಕರನ್ನು ಚದುರಿಸಿದ್ದಾರೆ.
ಹೈದರಾಬಾದ್‌ನಿಂದ ಭಟ್ಕಳಕ್ಕೆ ತೆರಳುತ್ತಿದ್ದಾಗ ಕೊಪ್ಪಳ ಸಮೀಪದ ಗಂಗಾವತಿಯಲ್ಲಿ ಭಟ್ಕಳದ ಒಬ್ಬ ವ್ಯಕ್ತಿಗೆ ಇಬ್ಬರು ಬಸ್ ಪ್ರಯಾಣಿಕರು ಮತ್ತು ಕಂಡಕ್ಟರ್ ಥಳಿಸಿದ್ದಾರೆ. ಸಂಬಂಧಿಕರು ಮತ್ತು ಸ್ನೇಹಿತರು ಭಟ್ಕಳದಲ್ಲಿ ಬಸ್ ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಪೊಲೀಸರು ಅವರನ್ನು ತಡೆದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರನ್ನು ಮುಖಾಮುಖಿ ಮಾಡಿದ್ದರಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು.
ಯುವಕನ ಮೇಲೆ ಹಲ್ಲೆಯಾದರೂ ಪೊಲೀಸರು ಪ್ರಕರಣವನ್ನು ದಾಖಲಿಸುತ್ತಿಲ್ಲ ಎಂದು ಹಲ್ಲೆಗೊಳಗಾದ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.ಅಲ್ಲದೆ ಬಸ್ಸಿನ ಚಾಲಕ ಮತ್ತು ನಿರ್ವಾಹಕನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಸ್ ನ್ನು ವಶಕ್ಕೆ ಪಡೆದು, ಚಾಲಕ ಮತ್ತು ನಿರ್ವಾಹಕನನ್ನು ವಿಚಾರಣೆಗೊಳಪಡಿಸಬೇಕು, ಅಲ್ಲದೆ ಬಸ್ಸಿನಲ್ಲಿರುವ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಭಟ್ಕಳ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ಈ ಘಟನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಮತ್ತು ನಮ್ಮಲ್ಲಿ ಯಾವುದೇ ದೂರು ಬಂದಿಲ್ಲ. ಭಟ್ಕಳದಲ್ಲಿ ಬಸ್ ತಡೆಯುವ ಪ್ರಯತ್ನ ನಡೆದಿತ್ತು. ಅದನ್ನು ಪೊಲೀಸರು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.