ಲೋಕಸಭಾ ಸ್ಪೀಕ‌ರ್ ಹುದ್ದೆಗೆ ಚುನಾವಣೆ: ಓಮ್ ಬಿರ್ಲಾ, ಸುರೇಶ್ ನಾಮಪತ್ರ ಸಲ್ಲಿಕೆ

Source: Vb | By I.G. Bhatkali | Published on 26th June 2024, 7:34 AM | National News |

ಹೊಸದಿಲ್ಲಿ: ಲೋಕಸಭಾ ಸ್ಪೀಕರ್ ಸ್ಥಾನದ ಚುನಾವಣೆಗೆ ಮಾಜಿ ಸ್ಪೀಕರ್ ಹಾಗೂ ಬಿಜೆಪಿ ಸಂಸದ ಓಮ್ ಬಿರ್ಲಾ ಮತ್ತು ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಮಂಗಳವಾರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಒಮ್ಮತದ ಅಭ್ಯರ್ಥಿಯನ್ನು ಆರಿಸುವ ನಿಟ್ಟಿನಲ್ಲಿ ಆಡಳಿತಾರೂಢ ಮೈತ್ರಿಕೂಟ ಎನ್‌ಡಿಎ ಮತ್ತು ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾ ನಡುವಿನ ಮಾತುಕತೆ ಮುರಿದುಬಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಸ್ಪೀಕ‌ರ್ ಹುದ್ದೆಗಾಗಿ ಲೋಕಸಭೆಯಲ್ಲಿ ಚುನಾವಣೆ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಚುನಾವಣೆ ಬುಧವಾರ ನಡೆಯಲಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 292 ಸ್ಥಾನಗಳನ್ನು ಹೊಂದಿದೆ. ಸರಳ ಬಹುಮತಕ್ಕೆ 272 ಸ್ಥಾನಗಳ ಅಗತ್ಯ ವಿದೆ. ಅದೇ ವೇಳೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 234 ಸದಸ್ಯರನ್ನು ಹೊಂದಿದೆ.

ಇಂಡಿಯಾ ಮೈತ್ರಿಕೂಟದ ಸದಸ್ಯರೊಬ್ಬರನ್ನು ಉಪ ಸ್ಪೀಕರ್ ಮಾಡುವುದಾದರೆ, ಸ್ಪೀಕರ್ ಹುದ್ದೆಗೆ ಸರಕಾರ ಬೆಂಬಲಿತ ಅಭ್ಯರ್ಥಿ ಓಮ್ ಬಿರ್ಲಾರನ್ನು ಬೆಂಬಲಿಸಲು ಪ್ರತಿಪಕ್ಷವು ಒಪ್ಪಿಕೊಂಡಿತ್ತು. ಆದರೆ, ಈ ವಿಷಯದಲ್ಲಿ ಒಮ್ಮತಕ್ಕೆ ಬರಲು ಉಭಯ ಬಣಗಳಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಮಂಗಳವಾರ, ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಪ್ರತಿಪಕ್ಷವನ್ನು ಸಂಪರ್ಕಿಸಿದರು. ಆದರೆ, ನಾಮಪತ್ರ ಸಲ್ಲಿಸುವ ಗಡುವು ಮುಗಿಯಲು ನಿಮಿಷಗಳು ಇರುವಾಗ ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್ ಮತ್ತು ಡಿಎಂಕೆಯ ಟಿ.ಆರ್. ಬಾಲು ರಾಜನಾಥ್ ಸಿಂಗ್‌ರ ಕಚೇರಿಯಿಂದ ಹೊರನಡೆದರು. ಅವರು ಎನ್‌ಡಿಎ ಸೀರ್ಕ ಅಭ್ಯರ್ಥಿಯನ್ನು ಬೆಂಬಲಿಸಲು ನಿರಾಕರಿಸಿದರು.

ಪ್ರತಿಪಕ್ಷಗಳಿಗೆ ಉಪ ಸ್ಪೀಕ‌ರ್ ಹುದ್ದೆಯನ್ನು ಬಿಟ್ಟುಕೊಡುವ ಬಗ್ಗೆ ಸರಕಾರ ಭರವಸೆ ನೀಡಲು ವಿಫಲವಾಗಿದೆ ಎಂದು ಬಳಿಕ ಕೆ.ಸಿ. ವೇಣುಗೋಪಾಲ್ ಹೇಳಿದರು.

ಕೆ. ಸುರೇಶ್ ಸಂಸತ್‌ನ ಅತಿ ಹಿರಿಯ ಸದಸ್ಯರಾಗಿದ್ದಾರೆ ಎಂದು ಇಂಡಿಯಾ ಮೈತ್ರಿಕೂಟ ಹೇಳಿದೆ. ಅವರು ಎಂಟನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ಕೇರಳದ ದಲಿತ ನಾಯಕರಾಗಿದ್ದು, ಅವರನ್ನು ಉಪ ಸ್ಪೀಕರ್ ಮಾಡಬೇಕೆಂದು ಪ್ರತಿಪಕ್ಷ ಮೈತ್ರಿಕೂಟ ಬಯಸಿದೆ.

ಇದಕ್ಕೂ ಮೊದಲು, ಎನ್‌ಡಿಎಯು ಉಪ ಸ್ಪೀಕ‌ರ್ ಹುದ್ದೆಯನ್ನು ಪ್ರತಿಪಕ್ಷಕ್ಕೆ ಕೊಟ್ಟರೆ, ಅದರ ಸ್ಪೀಕರ್ ಅಭ್ಯರ್ಥಿಯನ್ನು ಇಂಡಿಯಾ ಮೈತ್ರಿಕೂಟ ಬೆಂಬಲಿಸುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು.

ಪ್ರತಿಪಕ್ಷಗಳು ಸರಕಾರಕ್ಕೆ ರಚನಾತ್ಮಕ ಸಹಕಾರ ನೀಡಬೇಕೆಂದು ಪ್ರಧಾನಿ ಹೇಳಿದ್ದಾರೆ. ತಾವು ಸ್ಪೀಕರ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಪ್ರತಿಪಕ್ಷಗಳು ಸ್ಪಷ್ಟವಾಗಿ ಹೇಳಿವೆ. ಆದರೆ, ಉಪ ಸ್ಪೀಕರ್ ಹುದ್ದೆಯು ಪ್ರತಿಪಕ್ಷಗಳಿಗೆ ನೀಡುವುದು ಸಂಪ್ರದಾಯವಾಗಿದೆ. ಸ್ಪೀಕ‌ರ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕೋರಿ ರಾಜನಾಥ್ ಸಿಂಗ್ ಮಲ್ಲಿಕಾರ್ಜುನ ಖರ್ಗೆಗೆ ಕರೆ ಮಾಡಿದರು. ಆಗ ಉಪ ಸ್ಪೀಕರ್ ಹುದ್ದೆಯನ್ನು ಪ್ರತಿಪ್ಪಕ್ಕೆ ನೀಡುವ ಬೇಡಿಕೆಯನ್ನು ಖರ್ಗೆ, ರಾಜನಾಥ್ ಸಿಂಗ್ ಮುಂದಿಟ್ಟಿದ್ದಾರೆ. ಆ ಬಳಿಕ, ಸಿಂಗ್ ಖರ್ಗೆಯನ್ನು ಸಂಪರ್ಕಿಸಿಲ್ಲ. ರಚನಾತ್ಮಕ ಸಹಕಾರ ಬೇಕೆಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ, ಈಗ ನಮ್ಮ ನಾಯಕನನ್ನು ಅವಮಾನಿಸಲಾಗುತ್ತಿದೆ' ಎಂದು ರಾಹುಲ್ ನುಡಿದರು. “ಯಾವುದೇ ರಚನಾತ್ಮಕ ಸಹಕಾರವನ್ನು ಪ್ರಧಾನಿ ಮೋದಿ ಬಯಸುತ್ತಿಲ್ಲ. ಸಂಪ್ರದಾಯವನ್ನು ಅನುಸರಿಸಿದರೆ, ಸ್ಪೀಕರ ಚುನಾವಣೆಯಲ್ಲಿ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದು ನಾವು ಹೇಳಿದ್ದೇವೆ' ಎಂದರು.

Read These Next

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...