ಕಾರವಾರ: ಯಾವುದೇ ಗ್ರಾಮ ಪಂಚಾಯತ್‍ಗಳಲ್ಲಿ ಜೆಜೆಎಮ್ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸಲು ಕೈಗೊಳ್ಳುವಲ್ಲಿ ಹಾಗೂ ನೀರಿನ ಮೂಲಗಳ ಸಮಸ್ಯೆ ಇದ್ದಲ್ಲಿ ಈ ಸಭೆಯಲ್ಲಿ ಬಗೆಹರಿಸಿಕೊಳ್ಳಬೇಕು. ಕೆಲಸದ ಪ್ರಗತಿಯಲ್ಲಿ ವಿಳಂಬವಾಗುವುದು ಅಥವಾ ಬಾಕಿಯಿಟ್ಟು ಕಾಮಗಾರಿ ಪೂರ್ಣಗೊಳಿಸಲು ಹಿಂದೇಟು ಹಾಕುವುದನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅಧಿಕಾರಿಗಳಿಗೆ ಸೂಚಿಸಿದರು.
ಶಿರಸಿ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಕೈಗೊಂಡ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕುಗಳಲ್ಲಿ ಜಲಜೀವನ್ ಮಿಷನ್‍ನಡಿ ಕೈಗೊಂಡ ಕಾಮಗಾರಿ ಪ್ರಗತಿ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಜೆಜೆಎಮ್ ಕಾಮಗಾರಿಗೆ ನೀರಿನ ಮೂಲಗಳ ಕೊರತೆಯಿದ್ದಲ್ಲಿ 2025-26ನೇ ಸಾಲಿನ ನರೇಗಾ ಕ್ರಿಯಾಯೋಜನೆ ತಯಾರಿಯಲ್ಲಿ ಜಲ ಮೂಲಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಸೇರಿಸಿಕೊಂಡು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಇನ್ನೂ ಜೆಜೆಎಮ್ ಕಾಮಗಾರಿ ಕೈಗೊಳ್ಳುವಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜೆಜೆಎಮ್ ಅಧಿಕಾರಿಗಳಿಗೆ ಸಹಕರಿಸಬೇಕು. ಹಾಗೂ ತಾಲ್ಲೂಕಿನಾದ್ಯಂತ ಎಲ್ಲಾ ಕಡೆಗಳಲ್ಲಿಯೂ ನೀರಿನ ಗುಣಮಟ್ಟ ಪರೀಕ್ಷೆ ಕಡ್ಡಾಯವಾಗಿ ಮಾಡಲೇಬೇಕು. ಯಾವುದೇ ಸಮಸ್ಯೆ ಎದುರಾಗದಂತೆ ಜಾಗೃತಿ ವಹಿಸಬೇಕು ಎಂದರು.
ಜೆಜೆಎಂ ಯೋಜನೆಯಡಿ ಸಿದ್ದಾಪುರ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಿದಂತೆ ಪ್ರತಿಯೊಂದು ತಾಲೂಕಿನಲ್ಲಿಯೂ ಅಭಿವೃದ್ಧಿ ಸಾಧಿಸಬೇಕು. ಗುತ್ತಿಗೆದಾರ ಕಂಪನಿಗಳಿಗೆ ಗುಣಮಟ್ದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿ ಯೋಜನೆಯು ಜನರಿಗೆ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬ್ಯಾಚ್-2, 3 ಮತ್ತು 4ರಲ್ಲಿ ಕೈಗೊಂಡ ಕಾಮಗಾರಿಗಳ ಮುಕ್ತಾಯ ಪ್ರಮಾಣದಲ್ಲಿ ಪ್ರಗತಿ ಕಡಿಮೆಯಿರುವ ತಾಲೂಕುಗಳು ಹೆಚ್ಚಿನ ಪ್ರಗತಿ ಸಾಧಿಸಿ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್‍ನ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್ ಮಾತನಾಡಿ, ಎಸ್‍ಬಿಎಂ ಯೋಜನೆಯಡಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಗಳ ಪ್ರತಿಯೊಬ್ಬ ಅಧಿಕಾರಿಗಳು, ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಕೆಲವು ಪಂಚಾಯತ್‍ಗಳನ್ನು ಹೊರತು ಪಡಿಸಿ ಇನ್ನುಳಿದ ಪಂಚಾಯತ್‍ಗಳು "ವಿಶ್ವ ಶೌಚಾಲಯ ದಿನ"ದ ಅಂಗವಾಗಿ ಕೈಗೊಂಡ ಅಭಿಯಾನದ ಯಾವುದೇ ಚಟುವಟಿಕೆಗಳನ್ನು ಕೈಗೊಂಡಿರುವುದಿಲ್ಲ. ಈ ಕುರಿತು ಜಾಗೃತರಾಗದಿದ್ದರೆ ನೇರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿ. ಪಂ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಅಬೀಬ ಮಾತನಾಡಿ, ಆರ್ಥಿಕ ವರ್ಷ ಅಂತ್ಯದಲ್ಲಿದ್ದರೂ ಸಹಿತ ಇನ್ನೂ ಕೆಲವು ಗ್ರಾಮ ಪಂಚಾಯತ್‍ಗಳು 15ನೇ ಹಣಕಾಸಿನಲ್ಲಿ ದೊಡ್ಡ ಮೊತ್ತವನ್ನು ಉಳಿಸಿಕೊಂಡಿದ್ದೀರಾ ಯಾವುದೇ ಕಾರಣಕ್ಕೂ ಇದು ಸೂಕ್ತವಲ್ಲ ಕೂಡಲೇ ಈ ಕುರಿತು ಕ್ರಮ ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ರಾಜೀವ್ ಪಿ. ನಾಯ್ಕ, ತಾಲ್ಲೂಕು ಪಂಚಾಯತ್‍ಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರುಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳು, ತಾ.ಪಂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.