ಮೋದಿ 3.0 ಸಂಪುಟ ಪ್ರಮಾಣ; ರಾಜ್ಯದ ನಾಲ್ವರಿಗೆ ಸಚಿವ ಸ್ಥಾನ

Source: Vb | By I.G. Bhatkali | Published on 11th June 2024, 3:48 PM | National News |

ಹೊಸದಿಲ್ಲಿ: ಎನ್‌ಡಿಎ ಮೈತ್ರಿಕೂಟ ಸರಕಾರ ರವಿವಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದ್ದು, ನರೇಂದ್ರ ದಾಮೋದರ ದಾಸ್ ಮೋದಿ ಅವರು ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದ ಅಂಗಣದಲ್ಲಿ ಸಂಜೆ 7:30ಕ್ಕೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ಇತರ 71 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರಲ್ಲಿ 30 ಮಂದಿ ಸಂಪುಟ ದರ್ಜೆ ಸಚಿವರಾಗಿದ್ದರೆ, ಸ್ವತಂತ್ರ ನಿರ್ವಹಣೆಯ ಸಹಾಯಕ ಸಚಿವರಾಗಿ ಐವರು ಹಾಗೂ ಇತರ 36 ಮಂದಿ ಸಹಾಯಕ ಸಚಿವರು. ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಪ್ರಧಾನಿ ಹಾಗೂ ಸಚಿವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

73 ವರ್ಷ ವಯಸ್ಸಿನ ಪ್ರಧಾನಿ ನರೇಂದ್ರ ಮೋದಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ  ಸ್ವೀಕರಿಸಿದರು. ಮೋದಿಯವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಸಭೆಯಲ್ಲಿ ಹರ್ಷೋದ್ಗಾರ ಕೇಳಿಬಂತು.

ಮೋದಿ ಬಳಿಕ ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ, ನಿತಿನ್ ಗಡ್ಕರಿ ಕ್ರಮವಾಗಿ ಪ್ರಮಾಣವಚನ ಸ್ವೀಕರಿಸಿದರು. ನಿರ್ಗಮನ ಸಂಪುಟದ ಸಚಿವರಾದ ನಿರ್ಮಲಾ ಸೀತಾರಾಮನ್, ಎಸ್.ಜೈಶಂಕರ್, ಮಾಜಿ ಮುಖ್ಯಮಂತ್ರಿಗಳಾದ ಮನೋಹರಲಾಲ್ ಖಟ್ಟರ್ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಸಂಪುಟಕ್ಕೆ ಸೇರ್ಪಡೆಗೊಂಡ ಇತರ ಪ್ರಮುಖರು.

ನಿರ್ಗಮನ ಸಂಪುಟದಲ್ಲಿದ್ದ ಹರದೀಪ್ ಸಿಂಗ್‌ಪುರಿ ಹಾಗೂ ಮನ್‌ಸುಖ್ ಮಾಂಡವೀಯ ಅವರು ಕೂಡಾ ಪ್ರಮಾಣವಚನ ಸ್ವೀಕರಿಸಿದ ಇತರ ಪ್ರಮುಖ ಸಚಿವರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ನಾಯಕ ಹೆಚ್. ಡಿ. ಕುಮಾರಸ್ವಾಮಿ ಅವರು ಖಟ್ಟರ್ ಆನಂತರ ಪ್ರಮಾಣವಚನ ಸ್ವೀಕರಿಸಿದರು. ಎನ್‌ಡಿಎ ಮೈತ್ರಿ ಕೂಟದಲ್ಲಿರುವ ಬಿಜೆಪಿ ಮಿತ್ರಪಕ್ಷಗಳ ಪೈಕಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಯಕರಲ್ಲಿ ಕುಮಾರಸ್ವಾಮಿ ಮೊದಲಿಗರು. ಅವರ ಆನಂತರ ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ನಿಕಟವರ್ತಿ ಲಲನ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. ನಿರ್ಗಮನ ಸಂಪುಟದ ಸಚಿವರಾದ ಪ್ರಹ್ಲಾದ್ ಜೋಶಿ, ಸರ್ಬಾನಂದ ಸೊನೊವಾಲ್, ಕಿರಣ್ ರಿಜಿಜು, ಜ್ಯೋತಿರಾದಿತ್ಯ ಸಿಂಧಿಯಾ, ವೀರೇಂದ್ರ ಕುಮಾರ್ ಅವರು ಕೂಡಾ ನೂತನ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

ರಾಜ್ಯದ ನಾಲ್ವರಿಗೆ ಸಚಿವ ಸ್ಥಾನ: ರಾಜ್ಯದ ನಾಲ್ವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಒಲಿದಿದೆ. ಮಾಜಿ ಸಚಿವರಾದ ಪ್ರಹ್ಲಾದ್‌ಜೋಶಿ, ಶೋಭಾ 'ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಹಾಗೂ ಹಿರಿಯ ಬಿಜೆಪಿ ನಾಯಕ ವಿ. ಸೋಮಣ್ಣ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಸಂಸದರು. ನಿರ್ಗಮನ ಸಂಪುಟದಲ್ಲಿ ಪ್ರಹ್ಲಾದ್ ಜೋಶಿ ಅವರು ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ ಸಚಿವರಾಗಿದ್ದರೆ, ಶೋಭಾ ಕರಂದ್ಲಾಜೆ ಅವರು ಕೃಷಿ, ರೈತ ಕಲ್ಯಾಣ, ಆಹಾರ ಸಂಸ್ಕರಣೆ ಸಚಿವೆಯಾಗಿದ್ದರು.

ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ, ಮೂಲತಃ ತಮಿಳುನಾಡಿನವರು.

ಸ್ಮೃತಿ ಇರಾನಿ, ಅನುರಾಗ್, ರಾಣೆಗೆ ಸ್ಥಾನವಿಲ್ಲ: ರವಿವಾರ ಪ್ರಮಾಣವಚನ ಸ್ವೀಕರಿಸಿದ ನೂತನ ಎನ್‌ಡಿಎ ಸರಕಾರದಲ್ಲಿ ಪ್ರಮುಖ ಬಿಜೆಪಿ ನಾಯಕರು ಹಾಗೂ ಮಾಜಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಹಾಗೂ ನಾರಾಯಣ ರಾಣೆ ಅವರನ್ನು ಕೈಬಿಡಲಾಗಿದೆ.

ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರೆದುರು 1.6 ಲಕ್ಷ ಮತಗಳಿಂದ ಸೋಲನುಭವಿಸಿದ್ದರು. ಮೋದಿ ಸರಕಾರದ ಎರಡನೇ ಅವಧಿಯಲ್ಲಿ ಅವರು ಮಹಿಳಾ ಹಾಗೂ ಶಿಶು ಕಲ್ಯಾಣ ಸಚಿವೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯಾದ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು ರಾಹುಲ್‌ರನ್ನು ಪರಾಭವಗೊಳಿಸಿ ದಾಖಲೆ ನಿರ್ಮಿಸಿದ್ದರು.

ನಿರ್ಗಮನ ಸಂಪುಟದಲ್ಲಿ ಕ್ರೀಡೆ ಹಾಗೂ ಮಾಹಿತಿ ಹಾಗೂ ಪ್ರಸಾರ ಖಾತೆಯನ್ನು ಹೊಂದಿದ್ದ ಠಾಕೂರ್ ಅವರು ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಿಂದ ಜಯಗಳಿಸಿದ್ದರು.

'ಹಿಂದಿನ ಸರಕಾರದಲ್ಲಿ ಸೂಕ್ಷ್ಮ, ಕಿರು ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಸಚಿವರಾಗಿದ್ದ ರಾಣೆ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ರತ್ನಗಿರಿ-ಸಿಂಧುದುರ್ಗ ಕ್ಷೇತ್ರದಿಂದ ಜಯ ಗಳಿಸಿದ್ದರು.

ನಿರ್ಗಮನ ಸಂಪುಟದಲ್ಲಿ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್ ಅವರು ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಶಿ ತರೂರ್ ಅವರೆದುರು ತೀರಾ ಕಡಿಮೆ ಮತಗಳ ಅಂತರದಿಂದ ಸೋತಿದ್ದರು.

Read These Next

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...