ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ
- ಎಂ.ಆರ್.ಮಾನ್ವಿ ಭಟ್ಕಳ
ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ಸಚ್ಚಾರಿತ್ರ್ಯದ ಹರಣ. ಯುವ ಸಮುದಾಯ ವಿಶೇಷವಾಗಿ, ಈ ಸಮಸ್ಯೆಗಳಿಗೆ ಒಡ್ಡಿಕೊಳ್ಳುತ್ತಿದ್ದು, ಅವರ ನಡೆ-ನುಡಿಗಳಲ್ಲಿ ಚಾರಿತ್ರ್ಯಹೀನತೆಯ ಲಕ್ಷಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭಗಳಲ್ಲಿ, ಪ್ರವಾದಿ ಮುಹಮ್ಮದ್ (ಸ) ಅವರ ಜೀವನವನ್ನು ನಾವು ಒಂದು ಮಾರ್ಗದರ್ಶನವಾಗಿ ತೆಗೆದುಕೊಳ್ಳಬಹುದು.
ಪ್ರವಾದಿ ಮುಹಮ್ಮದ್ (ಸ) ಅವರು ಪರಿಪೂರ್ಣ ಚಾರಿತ್ರ್ಯದ ಮಾದರಿಯಾಗಿದ್ದರು. ಪವಿತ್ರ ಕುರ್‌ಆನ್‌ನಲ್ಲಿ 'ವ ಇನ್ನಕ ಲಾ ಅಲಾ ಕುಲ್ಕಿನ್ ಅಝೀಮ್' ಎಂದು ಹೇಳಲಾಗಿದೆ, ಅಂದರೆ ಅವರು ಅತ್ಯುನ್ನತ ಚಾರಿತ್ರ್ಯದವರು ಎಂಬುದು ಇದರ ಅರ್ಥ. ಅವರ ಜೀವನದ ಪ್ರತಿಯೊಂದು ಹಂತವೂ ನೈತಿಕತೆ ಮತ್ತು ಸಚ್ಚಾರಿತ್ರ್ಯದ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ.
ಇಂದಿನ ವಿಲಾಸಿ ಬದುಕಿನ ಜಗತ್ತಿನಲ್ಲಿ, ನಮ್ಮ ಜೀವನ ಶೈಲಿಯೇ ಬದಲಾಗಿ ಬಿಟ್ಟಿದೆ. ತಕ್ಷಣದ ಸುಖಕ್ಕಾಗಿ ಹಾತೊರೆಯುವ ಪ್ರವೃತ್ತಿ ಬೆಳೆದು ಬರತೊಡಗಿದೆ. ಸಾಮಾಜಿಕ ಮಾಧ್ಯಮಗಳು ಮತ್ತು ಆಧುನಿಕ ತಂತ್ರಜ್ಞಾನಗಳು, ಯುವಕರನ್ನು ಸುಲಭವಾಗಿ ಅಕರ್ಷಿತರನ್ನಾಗಿ ಮಾಡುತ್ತಿದ್ದು, ಅವುಗಳ ಮೂಲಕ ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯವನ್ನು ಬಹು ದೂರ ಬಿಟ್ಟು ಸಾಗುತ್ತಿದ್ದೇವೆ. ಅನೇಕ ಯುವಕರು, ಕೇವಲ ಕ್ಷಣಿಕ ಸುಖ ಮತ್ತು ಲಾಭಕ್ಕಾಗಿ ನೈತಿಕತೆಯ ಮೇರೆಯನ್ನು ಮೀರುತ್ತಿದ್ದಾರೆ. ಇದರಿಂದಾಗಿ ಅವರ ಬದುಕಿನಲ್ಲಿ ಶಾಶ್ವತ ಸುಖ ಮತ್ತು ಸಂತೋಷಗಳು ಮಾಯವಾಗಿ ಅನೇಕಾರು ಸಾಮಾಜಿಕ ಒಡಕುಗಳಿಗೆ ಕಾರಣವಾಗುತ್ತಿದ್ದಾರೆ.
ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶಮಯ ಜೀವನದಲ್ಲಿ ನಮಗೊಂದು ಮಾರ್ಗದರ್ಶನವಿದೆ. ಪರಿಹಾರವಿದೆ. ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಅವರು ಸತ್ಯ, ನ್ಯಾಯ, ಸಹನೆ, ಮತ್ತು ದಯಾಳುತನದ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಮಕ್ಕದ ಸಾರ್ವಜನಿಕರಿಂದ ಚಾರಿತ್ರ್ಯಹೀನ ಆರೋಪಗಳನ್ನು ಎದುರಿಸಿದಾಗಲೂ, ಅವರು ಧೀರತೆಯಿಂದ ನೈತಿಕ ಮೌಲ್ಯಗಳನ್ನು ಪಾಲಿಸಿದರು. ಅವರು ಯಾವಾಗಲೂ ತಮ್ಮ ಶತ್ರುಗಳಿಗೂ ವಾತ್ಸಲ್ಯ ಭರಿತ ನೋಟದಿಂದ ಕಾಣುತ್ತಿದ್ದರು.
ಪ್ರಸಕ್ತ ಸಮಾಜದಲ್ಲಿ ಈ ನೈತಿಕ ಮೌಲ್ಯಗಳು, ಸತ್ಯತೆ, ಸಚ್ಚಾರಿತ್ರ್ಯ, ಮತ್ತು ನ್ಯಾಯದ ಪ್ರಾಮುಖ್ಯತೆ ಹೆಚ್ಚಾಗಿದೆ. ಯುವಕರು ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಅವರು ನೈತಿಕ ದಾರಿಯಲ್ಲಿ ಸಾಗಬಹುದು. ಪ್ರವಾದಿ ಮುಹಮ್ಮದ್ (ಸ) ಅವರ ದಾರ್ಶನಿಕತೆ, ಕೇವಲ ಧಾರ್ಮಿಕತೆ ಅಲ್ಲ, ಅವರು ಬದುಕನ್ನು ಹೇಗೆ ಬದುಕಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಅವರ ಬದುಕಿನಲ್ಲಿ ನಮಗೊಂದು ಪಾಠವಿದೆ. ಮಾರ್ಗದರ್ಶನವಿದೆ ಅವರು ಜಗತ್ತಿಗೆ ಮಾದರಿ ವ್ಯಕ್ತಿಯಾಗಿದ್ದರು. ಅವರ ಹಾದಿಯಲ್ಲಿ ನಡೆಯುವುದಾದರೆ ನಾವು ಉತ್ತಮ, ಪ್ರಾಮಾಣಿಕ, ಮತ್ತು ಸಚ್ಚಾರಿತ್ರ್ಯವಂತ ವ್ಯಕ್ತಿಗಳಾಗಿ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ. ಅರಬ್ ನ ಅಜ್ಞಾನಿಗಳನ್ನು ಜ್ಞಾನದಾಹಿಗಳನ್ನಾಗಿ ಮಾಡಿ, ಮೃಗೀಯ ಮನಸ್ಸುಗಳಲ್ಲಿ ಮಾನವೀಯತೆಯ ಬೀಜವನ್ನು ಮೊಳಕೆಯೊಡೆಯುವಂತೆ ಮಾಡಿದರು. ಇದು ಇಂದು ಕೂಡ ಸಾಧ್ಯವಾಗಬಲ್ಲದು. ಅಂತಹ ಮನಸ್ಸು, ಹೃದಯಗಳನ್ನು ಬೆಳೆಸಿಕೊಂಡಾಗ ಮಾತ್ರ ಅದು ಸಾಧ್ಯವಾಗಬಲ್ಲದು. ಅವರ ಬದುಕು ನಮಗೆಲ್ಲ ಪ್ರೇರಣೆಯಾದಗ ಮಾತ್ರ ಇಂತಹ ಒಂದು ಬದಲಾವಣೆ ಉಂಟಾಗಲು ಸಾಧ್ಯ. ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ನೈತಿಕತೆ ಮತ್ತು ಸಚ್ಚಾರಿತ್ರ್ಯವನ್ನು ಅಳವಡಿಸಬೇಕು. ಈ ಮೂಲಕ ನಾವು ಕೇವಲ ನಮ್ಮ ಜೀವನವನ್ನು ಮಾತ್ರ ಉತ್ತಮಗೊಳಿಸದೆ, ಇಡೀ ಸಮಾಜವನ್ನೂ ಪರಿವರ್ತಿಸಲು ಸಾಧ್ಯವಾಗಬಹುದು.
'ಪ್ರವಾದಿ ಮುಹಮ್ಮದ್ (ಸ) ಯಾರು ಮತ್ತು ಏನು?' ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದರೆ, ಅವರು ಎಲ್ಲಾ ಮನುಷ್ಯರಿಗಾಗಿ ಶಾಂತಿ, ಪ್ರೀತಿ, ಮತ್ತು ನ್ಯಾಯವನ್ನು ಕಾಪಾಡಿದ ಮಾದರಿ ವ್ಯಕ್ತಿತ್ವ. ಅವರ ಬದುಕಿನ ಮೌಲ್ಯಗಳನ್ನು ಆಚರಿಸಿದಾಗ ಮಾತ್ರ ನಾವು ನಮ್ಮ ಇಂದಿನ ಜಗತ್ತನ್ನು ಸುಸ್ಥಿರ ಮತ್ತು ಸಮಾನತೆ, ಸಹಿಷ್ಣುತೆ, ಮತ್ತು ಶಾಂತಿಯ ತಾಣವನ್ನಾಗಿಸಬಹುದು.