ಚಂಡಿಗಡ: ಹರ್ಯಾಣದ ಚರ್ಖಿ ದಾದ್ರಿ ಜಿಲ್ಲೆಯಲ್ಲಿ ಬೀಫ್ ಸೇವಿಸಿದ್ದ ಆರೋಪದಲ್ಲಿ 26ರ ಹರೆಯದ ವಲಸೆ ಕಾರ್ಮಿಕನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಸುಮಾರು ಎರಡು ತಿಂಗಳುಗಳ ಬಳಿಕ ಶನಿವಾರ ಸತ್ಯ ಹೊರಬಿದ್ದಿದೆ. ಹತ ಕಾರ್ಮಿಕನ ಮನೆಯಿಂದ ವಶಪಡಿಸಿಕೊಳ್ಳಲಾಗಿದ್ದ ಮಾಂಸದ ಸ್ಯಾಂಪಲ್ ದನದ ಮಾಂಸವಲ್ಲ ಎಂದು ಪ್ರಯೋಗಾಲಯ ವರದಿಯು ದೃಢಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಪ.ಬಂಗಾಳದ ವಲಸೆ ಕಾರ್ಮಿಕ ಸಾಬಿರ್ ಮಲಿಕ್ ಗುಜರಿ ಹೆಕ್ಕುವ ಕೆಲಸ ಮಾಡಿಕೊಂಡಿದ್ದು, ಚರ್ಖಿ ದಾದ್ರಿ ಜಿಲ್ಲೆಯ ಭದ್ರಾ ಗ್ರಾಮದ ಬಳಿ ಜೋಪಡಿಯಲ್ಲಿ ವಾಸವಾಗಿದ್ದ. ಆ.27ರಂದು ಗುಂಪೊಂದು ಬೀಫ್ ಸೇವನೆ ಆರೋಪದಲ್ಲಿ ಆತನನ್ನು ಥಳಿಸಿ ಹತ್ಯೆಗೈದಿತ್ತು.
ಹತ್ಯೆಗೆ ಕೆಲವು ಗಂಟೆಗಳ ಮುನ್ನ ಪೊಲೀಸರಿಗೆ ಕರೆ ಮಾಡಿದ ಗುಂಪು, ಪ್ರದೇಶಗಳಲ್ಲಿಯ ಜೋಪಡಿಗಳಲ್ಲಿ ಬೀಫ್ ಅಡಿಗೆ ಮಾಡಿ ತಿನ್ನಲಾಗುತ್ತಿದೆ ಎಂದು ಆರೋಪಿಸಿತ್ತು.
ಪೊಲೀಸರು ಗ್ರಾಮವನ್ನು ತಲುಪುವ ಮುನ್ನವೇ ಗುಂಪು ಮಲಿಕ್‌ನನ್ನು ಥಳಿಸಿ ಹತ್ಯೆಗೈದಿತ್ತು. ಆತನ ಜೋಪಡಿಯಲ್ಲಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
'ಪ್ರಯೋಗಾಲಯದ ವರದಿಯನ್ನು ನಾವು ಸ್ವೀಕರಿಸಿದ್ದು, ಅದು ದನದ ಮಾಂಸವಲ್ಲ ಎನ್ನುವುದು ದೃಢಪಟ್ಟಿದೆ' ಎಂದು ಪೊಲೀಸರು ಶನಿವಾರ ತಿಳಿಸಿದರು.
ಹತ್ಯೆಗೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಆರು ಜನರನ್ನು ಶೀಘ್ರ ಬಂಧಿಸ ಲಾಗುವುದು. ಸದ್ಯವೇ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಎಸ್‌ಪಿ ಪೂಜಾ ವಶಿಷ್ಠ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.