ಭಟ್ಕಳ: ತಾಲೂಕಿನ ಬಡ ಕೂಲಿ ಕಾರ್ಮಿಕರು ಹಾಗೂ ಲಾರಿ ಮಾಲಕರು ಮರಳು ಸಮಸ್ಯೆ ಪರಿಹರಿಸಲು ತಾಲ್ಲೂಕು ಆಡಳಿತ ಸೌಧಕ್ಕೆ ಬುಧವಾರ "ಬೃಹತ್ ಪ್ರತಿಭಟನಾ ಮೆರವಣಿಗೆ" ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಆಗ್ರಹಿಸಲಾಯಿತು.
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮರಳು ಮೂಲ ವಸ್ತುವಾಗಿ ಅತೀ ಮುಖ್ಯ ಪಾತ್ರವಹಿಸಿದೆ. ಆದರೆ, ಸರಕಾರ ಮತ್ತು ಸ್ಥಳೀಯಾಡಳಿತದ ಅವೈಜ್ಞಾನಿಕ ನೀತಿಗಳು ಮರಳುಗಾರಿಕೆ ತಾತ್ಕಾಲಿಕವಾಗಿ ನಿಲ್ಲಿಸಲು ಕಾರಣವಾಗಿದ್ದು, ಪರಿಣಾಮವಾಗಿ ಸಾವಿರಾರು ಕಾರ್ಮಿಕರು ಆರ್ಥಿಕ ಸಂಕಟಕ್ಕೆ ಸಿಲುಕಿದ್ದಾರೆ. ಮರಳುಗಾರಿಕೆಯನ್ನು ನಂಬಿ, ತಮ್ಮ ಜೀವನ ನಿರ್ವಹಿಸುತ್ತಿರುವ ಬಡ ವರ್ಗದ ಕಾರ್ಮಿಕರು ಈಗ ನಿಸ್ಸಹಾಯ ಸ್ಥಿತಿಗೆ ತಲುಪಿದ್ದಾರೆ.
ಬ್ಯಾಂಕಿನಿಂದ ಸಾಲ ಪಡೆದು ಲಾರಿ ಖರೀದಿಸಿದ ಲಾರಿ ಮಾಲಕರು, ಮರಳು ತುಂಬಿಸುನೆಂಬ ಭರವಸೆಯಲ್ಲಿ ಕಟ್ಟಡ ಗುತ್ತಿಗೆಗಾರರ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈ ನಂಬಿಕೆಯೇ ಈಗ ಕುಸಿತಗೊಂಡಿದೆ, ಏಕೆಂದರೆ ಸ್ಥಳೀಯ ಆಡಳಿತ ದಿಢೀರ್ ಬಂದು ಮರಳುಗಾರಿಕೆ ಸ್ಥಗಿತಗೊಳಿಸಿದೆ. ಈ ತೀರ್ಮಾನದಿಂದ ಗುತ್ತಿಗೆದಾರರು, ಲಾರಿ ಚಾಲಕರು, ಗಿಲಾಯಿ ಮಾಡುವವರು, ಹಾಗೂ ಇತರ ಎಲ್ಲಾ ಕಾರ್ಮಿಕರು ಉದ್ಯೋಗ ಕಳೆದುಕೊಂಡು ತೊಂದರೆ ಅನುಭವಿಸುತ್ತಿದ್ದಾರೆ.
ಪಕ್ಕದ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿ ಸಿಗುತ್ತಿದೆ ಎಂಬ ವಿಷಯವೂ ಭಟ್ಕಳದ ಕಾರ್ಮಿಕರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತೀಚೆಗೆ ಬಡ ಕಾರ್ಮಿಕರು ಮತ್ತು ಲಾರಿ ಮಾಲಕರ ತಂಡ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಉಡುಪಿ ಜಿಲ್ಲೆಯ ಕುಂದಾಪುರದಿಂದ ಮರಳು ಪೂರೈಕೆ ಪುನರಾರಂಭಿಸಲು ವಿನಂತಿಸಿದ್ದಾರೆ.
ಕಳೆದ ಆರು ತಿಂಗಳುಗಳಿಂದ ನಮ್ಮ ಬದುಕು ತೀವ್ರ ಸಂಕಟಕ್ಕೆ ಸಿಲುಕಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದೇವೆ. ಸುಮಾರು 1000 ಕೋಟಿ ರೂ. ಬೆಲೆಯ ಕಾಮಗಾರಿಗಳು ಭಟ್ಕಳದಲ್ಲಿ ನಿಂತಿವೆ. ಇದರಿಂದ ಬಡ ಕೂಲಿ ಕಾರ್ಮಿಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಸರ್ಕಾರವು ಆರ್ಥಿಕ ಪರಿಹಾರ ಒದಗಿಸಬೇಕೆಂದು ಕೇಳಿಕೊಳ್ಳುತ್ತೇವೆ," ಎಂದು ಕಾರ್ಮಿಕರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಭಟ್ಕಳ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಶೋಸಿಯೇಶನ್ ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ, ಭಟ್ಕಳ ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ಕಾರ್ಯದರ್ಶಿ, ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಸುರೇಶ ಪೂಜಾರಿ, ಭಟ್ಕಳ ಸೆಂಟ್ರಿಂಗ್ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಕಾರ್ಯದರ್ಶಿ ಶಿವರಾಮ ನಾಯ್ಕ, ಭಟ್ಕಳ ಸೆಂಟ್ರಿಂಗ್ ಸಂಘದ ಸಹ ಕಾರ್ಯದರ್ಶಿ ರಾಮ ಹೆಬಳೆ, ಭಟ್ಕಳ ಕಟ್ಟಡ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಹೆಬಳೆ, ಭಟ್ಕಳ ಕಟ್ಟಡ ಕೂಲಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ನಾಯ್ಕ ಚೌಥನಿ, ಭಟ್ಕಳ ಕಟ್ಟಡ ಕೂಲಿ ಪೇಂಟಿಂಗ್ ಸಂಘದ ರಾಮ ನಾಯ್ಕ, ಮಂಜುನಾಥ ಗೊಂಡ ಭಟ್ಕಳ ಟಿಪ್ಪರ್ ಮಾಲಕರ ಸಂಘದ ಅಜೀಜ್ ಸೇರಿದಂತೆ ಹಲವಾರು ಕಾರ್ಮಿಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.