ನೀಟ್ ಪರೀಕ್ಷೆಗಳಲ್ಲಿ ಭಾರಿ ಅಕ್ರಮ ಬಯಲು; ಪ್ರಥಮ ರ‍್ಯಾಂಕ್ ಪಡೆದುಕೊಂಡ ಒಂದೇ ಕೇಂದ್ರದ 6 ವಿದ್ಯಾರ್ಥಿಗಳು?

Source: SOnews | By Staff Correspondent | Published on 7th June 2024, 7:02 PM | National News |

 

ಹೊಸದಿಲ್ಲಿ: ನೀಟ್-ಯುಜಿ 2024ರ ಫಲಿತಾಂಶಗಳು ಪ್ರಕಟಗೊಂಡಿದ್ದು, ಕೆಲವು ಅಚ್ಚರಿದಾಯಕ ಅಂಶಗಳು ಬಹಿರಂಗಗೊಂಡ ಬಳಿಕ ಹಲವರು ಮತ್ತು ನೀಟ್ ಆಕಾಂಕ್ಷಿಗಳ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮಹಾಪೂರದೋಪಾದಿ ಹರಿದುಬಂದಿವೆ. 67 ವಿದ್ಯಾರ್ಥಿಗಳು ಪರಿಪೂರ್ಣ 720 ಅಂಕ ಗಳಿಕೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳ ಆರೋಪಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. 

ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಗಳಿಸಿರುವವರ ಪೈಕಿ ಆರು ಅಭ್ಯರ್ಥಿಗಳು ಹರ್ಯಾಣದ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು ಮತ್ತು ಅವರ ಅನುಕ್ರಮ ಸಂಖ್ಯೆಗಳು ಒಂದೇ ಆಗಿದ್ದವು ಎನ್ನುವ ಅಚ್ಚರಿಯ ಅಂಶವು ಬಹಿರಂಗಗೊಂಡಿದೆ. ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಅನೇಕ ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಗಳಿಸಿರುವುದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎನ್ನುವುದನ್ನು ತೋರಿಸಿದೆ. 

ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನ ಪೋಷಕರು ಪರೀಕ್ಷೆಗೆ ಸಂಬಂಧಿಸಿದಂತೆ ಬಹಿರಂಗಗೊಂಡಿರುವ ಅಂಶಗಳಲ್ಲಿಯ ವೈಪರೀತ್ಯಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವಂತೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ)ಗೆ ಬರೆದಿರುವ ಪತ್ರಗಳಲ್ಲಿ ಕೋರಿದ್ದಾರೆ.  718 ಮತ್ತು 719 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಅಂಕಪಟ್ಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪ್ರತಿ ನೀಟ್ ಪ್ರಶ್ನೆಗೆ ನಾಲ್ಕು ಅಂಕಗಳು ಮತ್ತು ಒಂದು ಋಣಾತ್ಮಕ ಅಂಕವಿರುವಾಗ ಇದು ತಮಗೆ ಮನದಟ್ಟಾಗಿಲ್ಲ ಎಂದು ಪೋಷಕರು ವಾದಿಸಿದ್ದಾರೆ.    ಇಬ್ಬರು ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಳಕೆದಾರರೋರ್ವರು, ‘ಅಂಕ ಪದ್ಧತಿಗಳು ಬದಲಾಗಿರದಿದ್ದರೆ ಯಾರೇ ಆದರೂ 718 ಮತ್ತು 719 ಅಂಕಗಳನ್ನು ಗಳಿಸಲು ಹೇಗೆ ಸಾಧ್ಯ? ಇದು ಎನ್‌ಟಿಎಯ ಬಹು ದೊಡ್ಡ ಹಗರಣವಾಗಿದೆ’ ಎಂದು ಬರೆದಿದ್ದಾರೆ.   ತಾವು ಕೆಲವು ಕಾನೂನು ಪ್ರಕರಣಗಳು ಮತ್ತು ವ್ಯರ್ಥಗೊಂಡ ಸಮಯದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ನೀಟ್ ಅರ್ಜಿದಾರರಿಂದ ನಿವೇದನೆಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಎನ್‌ಟಿಎ, ಸರ್ವೋಚ್ಚ ನ್ಯಾಯಾಲಯವು ತನ್ನ 2018ರ ತೀರ್ಪಿನಲ್ಲಿ ರೂಪಿಸಿದ್ದ ಮತ್ತು ಅನುಮೋದಿಸಿದ್ದ ಸಾಮಾನ್ಯೀಕರಣ ಪದ್ಧತಿಯು ಅರ್ಜಿದಾರರು ಅನುಭವಿಸಿರುವ ಸಮಯ ನಷ್ಟವನ್ನು ಸರಿದೂಗಿಸಲು ಇಂತಹ ಪ್ರಕರಣಗಳು ಪ್ರಾತಿನಿಧ್ಯಗಳನ್ನು ಗಣನೆಗೆ ತೆಗೆದುಕೊಂಡಿದೆ. ವ್ಯರ್ಥವಾದ ಸಮಯವನ್ನು ಲೆಕ್ಕ ಹಾಕಿದ ಬಳಿಕ ಈ ಅರ್ಜಿದಾರರಿಗೆ ಕೃಪಾಂಕಗಳನ್ನು ನೀಡಲಾಗಿದೆ. ಹೀಗಾಗಿ ಅವರು ಗಳಿಸಿರುವ ಅಂಕಗಳು 718 ಅಥವ 719 ಆಗಿರಬಹುದು ಎಂದು ಸಮಜಾಯಿಷಿ ನೀಡಿದೆ.

ಈ ನಡುವೆ ಪ್ರಶ್ನೆಪತ್ರಿಕೆ ಸೋರಿಕೆಯ ವರದಿಗಳು, ಕಳೆದುಕೊಂಡ ಸಮಯಕ್ಕಾಗಿ ಕೊನೇ ಕ್ಷಣದಲ್ಲಿ ನೀಡಲಾದ ಕೃಪಾಂಕಗಳು ಮತ್ತು 2024ರ ನೀಟ್ ಫಲಿತಾಂಶಗಳಲ್ಲಿ ತಪ್ಪುಗಳಿಂದಾಗಿ ಗಣನೀಯ ಸಂಖ್ಯೆಯ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳು ನೀಟ್ ಮರುಪರೀಕ್ಷೆಗಾಗಿ ಆಗ್ರಹಿಸತೊಡಗಿದ್ದಾರೆ.   ಈ ವಿವಾದಗಳ ನಡುವೆ ಎನ್‌ಟಿಎ ನೀಟ್ ಯುಜಿ 2024ರ ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗಳನ್ನು ದೃಢವಾಗಿ ನಿರಾಕರಿಸಿದೆ. ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ವದಂತಿಗಳನ್ನು ಅದು ಅಲಕ್ಷಿಸಿದೆ. ಈ ವರದಿಗಳು ಸುಳ್ಳಾಗಿವೆ ಮತ್ತು ಪರೀಕ್ಷಾ ವಿಧಾನವು ಸುರಕ್ಷಿತ ಮತ್ತು ನಿಷ್ಪಕ್ಷವಾಗಿದೆ ಎಂದು ಎನ್‌ಟಿಎ ಪ್ರತಿಪಾದಿಸಿದೆ. 

ಎನ್‌ಟಿಎ ಪ್ರತಿಕ್ರಿಯೆ ಕೇಳಿದ ಕಲಕತ್ತಾ ಹೈಕೋರ್ಟ್  2024ರ ನೀಟ್-ಯುಜಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾಗಿರುವ ಅವ್ಯವಹಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯಿಸಿ 10 ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಕಲಕತ್ತಾ ಉಚ್ಚ ನ್ಯಾಯಾಲಯವು ಎನ್‌ಟಿಎಗೆ ಸೂಚಿಸಿದೆ.  ಅನ್ವಯವಾಗುವ ಅಂಕ ಪದ್ಧತಿಯ ಪ್ರಕಾರ ಕೆಲವು ಅಭ್ಯರ್ಥಿಗಳು ಗರಿಷ್ಠ 720 ಅಂಕಗಳ ಪೈಕಿ 718 ಅಥವಾ 719 ಅಂಕಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.  

ಪರೀಕ್ಷಾ ಅಕ್ರಮಗಳ ಕುರಿತು ಕ್ರಮಕ್ಕೆ ಸರಕಾರಕ್ಕೆ ಪ್ರಿಯಾಂಕಾ ಗಾಂಧಿ ಆಗ್ರಹ   ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪತ್ತೆಯಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮೋದಿ ಸರಕಾರವನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸುವ ಮೂಲಕ ವಿದ್ಯಾರ್ಥಿಗಳ ‘ಕಾನೂನುಬದ್ಧ ದೂರುಗಳನ್ನು’ ಪರಿಹರಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.  ‘ಮೊದಲು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಯಿತು ಮತ್ತು ಈಗ ವಿದ್ಯಾರ್ಥಿಗಳು ಫಲಿತಾಂಶಗಳಲ್ಲಿಯೂ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ . ಒಂದೇ ಪರೀಕ್ಷಾ ಕೇಂದ್ರದ ಆರು ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿರುವ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಗೊಂಡಿವೆ ಮತ್ತು ಹಲವಾರು ರೀತಿಗಳ ಅವ್ಯವಹಾರಗಳು ಮುನ್ನೆಲೆಗೆ ಬಂದಿವೆ. ಫಲಿತಾಂಶಗಳು ಪ್ರಕಟಗೊಂಡ ಬಳಿಕ ದೇಶಾದ್ಯಂತ ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಗಳಿವೆ. ಇದು ತುಂಬ ದುಃಖಕರ ಮತ್ತು ಆಘಾತಕಾರಿಯಾಗಿದೆ ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಪ್ರಿಯಾಂಕಾ,‘ಸರಕಾರವು ಲಕ್ಷಾಂತರ ವಿದ್ಯಾರ್ಥಿಗಳ ಧ್ವನಿಯನ್ನೇಕೆ ನಿರ್ಲಕ್ಷಿಸುತ್ತಿದೆ? ನೀಟ್ ಪರೀಕ್ಷಾ ಫಲಿತಾಂಶಗಳಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ಕಾನೂನುಬದ್ಧ ಪ್ರಶ್ನೆಗಳಿಗೆ ಉತ್ತರಗಳನ್ನು ವಿದ್ಯಾರ್ಥಿಗಳು ಬಯಸಿದ್ದಾರೆ. ಸಮಗ್ರ ತನಿಖೆಯನ್ನು ನಡೆಸುವ ಮೂಲಕ ಈ ಕಾನೂನುಬದ್ಧ ಪ್ರಶ್ನೆಗಳನ್ನು ಬಗೆಹರಿಸುವುದು ಸರಕಾರದ ಜವಾಬ್ದಾರಿಯಲ್ಲವೇ ’ ಎಂದು ಪ್ರಶ್ನಿಸಿದ್ದಾರೆ.  ನೀಟ್ ಪರೀಕ್ಷೆಯ ವೇಳೆಯೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ರೀತಿ ಏನು ನಡೆದಿಲ್ಲ ಎಂದು ಎನ್ ಟಿ ಎ ಹೇಳಿತ್ತು . ಹೀಗಿರುವಾಗ ಪಟ್ನಾದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತಾಗಿ ಬಂಧನಗಳು ಮತ್ತು ಎಫ್ಐಆರ್ ಏಕೆ ದಾಖಲಾಗಿದೆ ಎಂಬುದಕ್ಕೆ ಎನ್ ಟಿ ಎ ಉತ್ತರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಆಗ್ರಹಿಸಿದ್ದಾರೆ.

Read These Next

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...