ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ನಿಡ್ಡೇಲ್ ಮೈದಾ ಫಾಕ್ಟರಿ ಎಂಬಲ್ಲಿ ದಿನಾಂಕ: 24-08-2018 ರಂದು ಸಂಜೆ ವೇಳೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್ ನ್ನು ಸುಲಿಗೆ ಮಾಡಿದ್ದ ಪ್ರಕರಣದ ಆರೋಪಿ
ಆರೀಫ್ (24) ತಂದೆ: ದಿ|| ಯಾಸ್ಮಿನ್ ವಾಸ: ಮಸೀದಿ ಕಂಪೌಡು, ವಾಮಂಜೂರು, ಮಂಗಳೂರು
ಹಾಗೂ ಇನ್ನೊಬ್ಬ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನೊಂದಿಗೆ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ನಂಬರ್ ಇಲ್ಲದ ಹೋಂಡಾ ಆಕ್ಟಿವಾ ವಾಹನ ಸಮೇತ ದಿನಾಂಕ: 16-09-2018 ರಂದು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಜಂಕ್ಷನ್ ನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿ ಆರೀಫ್ ಎಂಬಾತನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕೊಲೆ ಯತ್ನ ಹಾಗೂ ದರೋಡೆಗೆ ಯತ್ನದಂತಹ 03 ಪ್ರಕರಣಗಳು ದಾಖಲಾಗಿರುತ್ತದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹೊರತು ಪಡಿಸಿ ಪ್ರಸ್ತುತ ಆರೀಫ್ ಎಂಬಾತನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು, ಒಟ್ಟಾಗಿ ಮಂಗಳೂರು ನಗರ ಪೊಲೀಸ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 06 ಮಹಿಳೆಯರ ಬ್ಯಾಗ್ ಸುಲಿಗೆ ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿ ಆರೀಫ್ ಎಂಬಾತನು ದ.ಕ. ಜಿಲ್ಲಾ ಪೊಲೀಸ್ ಸರಹದ್ದಿನ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 21-06-2018 ರಂದು ನಡೆದ ಪಾಣೆಮಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಎ.ಟಿ.ಎಂ. ಕಳವು ಯತ್ನ ಪ್ರಕರಣದಲ್ಲಿ ಕೂಡ ಭಾಗಿಯಾಗಿರುತ್ತಾನೆ. ಈತನು ಈಗಾಗಲೇ ದಸ್ತಗಿರಿಯಾದ ಅಜರುದ್ದೀನ್ ಎಂಬಾತನೊಂದಿಗೆ ಲಾರಿ ಬ್ಯಾಟರಿ ಕಳವು ಹಾಗೂ ಕಾಂಕ್ರೀಟ್ ಕಬ್ಬಿಣದ ಶೀಟ್ ಕಳವು ಪ್ರಕರಣದಲ್ಲಿ ಕೂಡ ಭಾಗಿಯಾಗಿರುತ್ತಾನೆ.
ಆರೋಪಿ ಆರೀಫ್ ಎಂಬಾತನ ವಶದಲ್ಲಿದ್ದ ಹೋಂಡಾ ಆಕ್ಟಿವಾ, ಕೃತ್ಯ ನಡೆಸಲು ಉಪಯೋಗಿಸಿದ ಎರಡು ಹೆಲ್ಮೆಟ್, ಸುಲಿಗೆ ಮಾಡಿದ ಬ್ಯಾಗ್ ಗಳಲ್ಲಿದ್ದ ಎಂಟು ವಿವಿಧ ಕಂಪೆನಿಗಳ ಮೊಬೈಲ್ ಫೋನ್ ಹಾಗೂ ಎ.ಟಿ.ಎಂ. ಕಳವು ಯತ್ನ ಕ್ಕೆ ಉಪಯೋಗಿಸಿದ ರಾಡ್ ನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸೊತ್ತುಗಳ ಒಟ್ಟು ಮೌಲ್ಯ ರೂ. 87,750/- ಆಗಿರುತ್ತದೆ. ಆರೋಪಿ ಆರೀಫ್ ಎಂಬಾತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನು ಕೂಡ ಆರೀಫ್ ನೊಂದಿಗೆ ಮಹಿಳೆಯರ ಬ್ಯಾಗ್ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
ಈ ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಟಿ. ಆರ್. ಸುರೇಶ್, ಉಪ-ಪೊಲೀಸ್ ಆಯುಕ್ತರಾದ ಶ್ರೀಮತಿ ಉಮಾ ಪ್ರಶಾಂತ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಮರಾವ್ ರವರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರವೀಶ್ ನಾಯಕ್, ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್., ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಜಾನಕಿ ಹಾಗೂ ಸಿಬ್ಬಂದಿಗಳಾದ ಸಂತೋಷ್, ಮದನ್, ವಿನೋದ್, ರಾಜೇಶ್, ನೂತನ್, ಸತೀಶ್, ಸಂದೀಪ್, ಜೀವನ್, ಮೇಘರಾಜ್ ರವರು ಪಾಲ್ಗೊಂಡಿರುತ್ತಾರೆ.
ಮಂಗಳೂರು ನಗರ ಪೊಲೀಸ್