ಮಕ್ಕಾ, ಸೆ ೧೩: ಈ ವರ್ಷದ ಹಜ್ ಯಾತ್ರೆಯಲ್ಲಿ ಸುಮಾರು ಇಪ್ಪತ್ತು ಲಕ್ಷ ಜನರು ಮಕ್ಕಾ ನಗರಕ್ಕೆ ಆಗಮಿಸಿದ್ದು ಹಜ್ ಯಾತ್ರೆಯ ವಿಧಿಗಳಿಗನುಸಾರವಾಗಿ ಅರಫಾತ್ ಬೆಟ್ಟದತ್ತ ನಿನ್ನೆ ತಲುಪಿದ್ದಾರೆ. "ಲಬ್ಬೈಕ್ ಅಲ್ಲಾ ಹುಮ್ಮ ಲಬ್ಬೈಕ್" (ಓ ಅಲ್ಲಾಹ್, ನಾನು ನಿನ್ನ ಕರೆಗೆ ಓಗೊಟ್ಟು ಬಂದಿದ್ದೇನೆ) ಎಂಬ ಘೋಷಣೆಯನ್ನು ಪಠಿಸುತ್ತಿದ್ದ ಯಾತ್ರಿಕರು ಭಾನುವಾರ ಬೆಳಿಗ್ಗೆ ಅರಫಾತ್ ಬೆಟ್ಟ ಮತ್ತು ಮೈದಾನ ಇರುವ ಸ್ಥಳಕ್ಕೆ ಆಗಮಿಸಿದ್ದಾರೆ.
ಈ ಇಡಿಯ ದಿನ ಅರಫಾತ್ ನಲ್ಲಿ ಕಳೆಯುವ ಯಾತ್ರಿಕರು ತಮ್ಮ ಪಾಪಗಳನ್ನು ಮನ್ನಿಸಲು ಮತ್ತು ಸದ್ಗತಿ ಪ್ರಾಪ್ತಿಗಾಗಿ ಅಲ್ಲಾಹನಲ್ಲಿ ಬೇಡಿಕೊಳ್ಳುತ್ತಾರೆ. ಸಂಜೆಯ ಮಗ್ರಿಬ್ ನಮಾಜ್ ನವರೆಗೂ ಅರಫಾತ್ ಮೈದಾನದಲ್ಲಿ ಸಮಯ ಕಳೆದ ಬಳಿಕ ಪಕ್ಕದ ಇನ್ನೊಂದು ವಿಶಾಲ ಮೈದಾನವಾದ ಮುಜ್ದಲಿಫಾ ದತ್ತ ತೆರಳಿ ಇಡಿಯ ರಾತ್ರಿ ಅಲ್ಲಿ ಕಳೆಯುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಹಜ್ ಅರೇಬಿಯಾದಲ್ಲಿ ಬೇಸಿಗೆಯ ಸಮಯದಲ್ಲಿ ಆಗಮಿಸುತ್ತಿದ್ದು ದಿನದ ತಾಪಮಾನ ಗರಿಷ್ಟ ಮಟ್ಟದಲ್ಲಿರುತ್ತದೆ. ಆದರೆ ಭಕ್ತಿಭಾವದ ಪರಾಕಾಷ್ಠೆಯಲ್ಲಿರುವ ಯಾತ್ರಿಕರು ಈ ಬೇಗೆಯನ್ನೂ ಲೆಕ್ಕಿಸದೇ ತಮ್ಮ ವಿಧಿಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಬಿಸಿಲ ಬೇಗೆಯನ್ನು ಕಡಿಮೆಗೊಳಿಸಲು ಹಾಗೂ ಯಾತ್ರಿಕರಿಗೆ ಎದುರಾಗುವ ಯಾವುದೇ ತೊಂದರೆಯನ್ನು ನಿಭಾಯಿಸಲು ಈ ಸ್ಥಳದಾದ್ಯಂತ ಸೌದಿ ಅರೇಬಿಯಾ ಸರ್ಕಾರ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಉಚ್ಛ ಹಜ್ ಸಮಿತಿಯ ಚೇರ್ಮನ್ನರಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ನಾಯಿಫ್ ರವರು ಸೌದಿ ದೊರೆ ಹಾಗೂ ಎರಡು ಪವಿತ್ರ ಮಸೀದಿಗಳ ಅಭಿರಕ್ಷಕರಾದ ದೊರೆ ಸಲ್ಮಾನ್ ರನ್ನು ಅಭಿನಂದಿಸಿದ್ದಾರೆ. ಒಟ್ಟು 164 ರಾಷ್ಟ್ರಗಳಿಂದ 13,25,372. ಯಾತ್ರಿಕರು ಆಗಮಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು ಐದು ಶೇಖಡಾ ಅಂದರೆ 64,889 ಯಾತ್ರಿಕರು ಕಡಿಮೆ ಆಗಮಿಸಿದ್ದಾರೆ. ಸೌದಿ ಅರೇಬಿಯಾದಲ್ಲಿರುವ ಯಾತ್ರಿಕರೂ ಸೇರಿದರೆ ಈ ವರ್ಷ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಮಕ್ಕಾ ನಗರದಲ್ಲಿದ್ದಾರೆ.
ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ನೂರ್ ರೆಹಮಾನ್ ಶೇಖ್ ರವರು ಈ ಬಗ್ಗೆ ತಮ್ಮ ಹರ್ಷ ವ್ಯಕ್ತಪಡಿಸಿ ಯಾತ್ರಿಕರು ಮಕ್ಕಾದಿಂದ ಮೀನಾ ಕಡೆಗೆ ಯಾವುದೇ ತೊಂದರೆ ಇಲ್ಲದೇ ತಲುಪಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಭಾರತೀಯ ಹಜ್ ಯಾತ್ರಿಕರು ಸುರಕ್ಷಿತರಾಗಿದ್ದು ಇದುವರೆಗೆ ಹಜ್ ವಿಧಿಗಳನ್ನು ಸುಗಮವಾಗಿ ಕ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ.