ನ.26ರೊಳಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ; ಸಿಇಸಿ ರಾಜೀವ್ ಕುಮಾರ್
ಹೊಸದಿಲ್ಲಿ: ಮಹಾ ರಾಷ್ಟ್ರ ವಿಧಾನ ಸಭೆಗೆ ಈ ವರ್ಷದ ನವೆಂಬರ್ 26ರೊಳಗೆ ಚುನಾವಣೆಗಳು ನಡೆಯಲಿದೆಯೆಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಲಿ ವಿಧಾನಸಭೆಯ ಅವಧಿಯು 2024ರ ನವೆಂಬರ್ 26ರಂದು ಮುಕ್ತಾಯಗೊಳ್ಳಲಿದೆ. ಅದಕ್ಕಿಂತ ಮುನ್ನ ನೂತನ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದರು.
ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ವು ಪರಿಶೀಲಿಸುತ್ತಿದೆ . ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆಗೆ ಮುನ್ನ ರಾಜಕೀಯ ಪಕ್ಷಗಳು ಸೇರಿದಂತೆ ಸಂಬಂಧಪಟ್ಟ ಪಾಲುದಾರರನ್ನು ಚುನಾವಣಾ ಆಯೋಗ ಭೇಟಿಯಾಗಲಿದೆ ಹಾಗೂ ದೀಪಾವಳಿ ಮತ್ತಿತರ ಹಬ್ಬಗಳನ್ನು ಗಮನದಲ್ಲಿರಿಸಿಕೊಂಡು ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗುವುದೆಂದು ತಿಳಿಸಿದರು.
ವಿಧಾನಸಭಾ ಚುನಾವಣೆಗಾಗಿ ಮಹಾರಾಷ್ಟ್ರಾದ್ಯಂತ 1,00,186 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದೆಂದು ಅವರು ತಿಳಿಸಿದರು. ಮಹಾರಾಷ್ಟ್ರದ ಕೆಲವು ನಗರ ಕೇಂದ್ರಗಳು ದೇಶದಲ್ಲೇ ಅತ್ಯಂತ ಕಡಿಮೆ ಶೇಕಡಾವಾರು ಮತದಾನವನ್ನು ದಾಖಲಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆಯುಳ್ಳವನೇ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಮತದಾರರಿಗಿದೆ. ಈ ಬಗ್ಗೆ ರಾಜಕೀಯ ಪಕ್ಷಗಳು ಮಾಹಿತಿ ನೀಡಬೇಕಾಗಿದೆ. ಮಹಾರಾಷ್ಟ್ರದಲ್ಲಿ ಲಂಚ, ಆಮಿಷಗಳಿಂದ ಮುಕ್ತವಾದ ವಿಧಾನಸಭಾ ಚುನಾವಣೆಯನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಹೆಲಿಕಾಪ್ಟರ್‌ಗಳ ಮೂಲಕ ನಿಗಾಯಿರಿಸಲಾಗುವುದೆಂದು ಅವರು ಹೇಳಿದ್ದಾರೆ.