ಲೋಕಸಭಾ ಚುನಾವಣೆ; ನಿತೀಶ್, ನಾಯ್ಡು ಕಿಂಗ್ ಮೇಕರ್ಸ್; ಈಗ ಎಲ್ಲರ ಕಣ್ಣು ಇವರತ್ತ

Source: Vb | By I.G. Bhatkali | Published on 5th June 2024, 6:36 AM | National News |

ಹೊಸದಿಲ್ಲಿ: ಮಂಗಳವಾರ ಪ್ರಕಟಗೊಂಡ ಲೋಕಸಭಾ ಚುನಾವಣಾ ಫಲಿತಾಂಶಗಳು ಮತದಾನೋತ್ತರ ಸಮೀಕ್ಷೆಗಳು ಯಾವಾಗಲೂ ಸರಿಯಲ್ಲ ಎನ್ನುವುದನ್ನು ಸಾಬೀತುಗೊಳಿಸಿವೆ.

ಎನ್‌ಡಿಎ ಮೈತ್ರಿಕೂಟ ಅದ್ಭುತ ಬಹುಮತವನ್ನು ಗಳಿಸಲಿದೆ ಎಂಬ ನಿರೀಕ್ಷೆಗಳು ಹುಸಿಗೊಂಡಿವೆ. ಅದು ಸರಳ ಬಹುಮತಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಅತ್ತ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಮತದಾನೋತ್ತರ ಸಮೀಕ್ಷೆಗಳಿಗೆ ಸೆಡ್ಡು ಹೊಡೆದಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಂಡಿತರು ಲೆಕ್ಕಕ್ಕೇ ಇಟ್ಟಿರದ ಇಬ್ಬರು ಹಿರಿಯ ರಾಜಕಾರಣಿಗಳು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ನೂತನ ಸರಕಾರ ರಚನೆಯಲ್ಲಿ ಚೆಡಿಯು ಮುಖ್ಯಸ್ಥ ಕುಮಾರ್ ಮತ್ತು ವರಿಷ್ಠ ಎನ್.ಚಂದ್ರಬಾಬು ನಾಯ್ಡು ಅವರು ಕಿಂಗ್‌ಮೇಕರ್‌ಗಳಾಗಲಿದ್ದಾರೆ ಅಥವಾ ಸ್ವತಃ 'ಕಿಂಗ್' ಆಗಲೂಬಹುದು. ಅಷ್ಟು ಲೋಕಸಭಾ ಸ್ಥಾನಗಳು ಈ ಇಬ್ಬರು ನಾಯಕರ ಬುಟ್ಟಿಯಲ್ಲಿವೆ.

ನಿತೀಶ್‌ರ ಜೆಡಿಯು ಬಿಹಾರದಲ್ಲಿ ಸ್ಥಾನಗಳಿಕೆಯಲ್ಲಿ ತನ್ನ ಹಿರಿಯ ಪಾಲುದಾರ ಬಿಜೆಪಿಯನ್ನು ಹಿಂದಿಕ್ಕಿದೆ. ಅತ್ತ ಆಂಧ್ರಪ್ರದೇಶದಲ್ಲಿ ಟಿಡಿಪಿ ಗಣನೀಯ ಸ್ಥಾನಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಎನ್‌ಡಿಎ ಸರಕಾರ ರಚಿಸಬೇಕಿದ್ದರೆ ಇವರಿಬ್ಬರನ್ನೂ ಭದ್ರವಾಗಿ ಹಿಡಿದಿಟ್ಟುಕೊಳ್ಳಬೇಕಿದೆ. ಇದೇ ಕಾರಣದಿಂದಾಗಿ ಈ ನಾಯಕರು ಇಂದು ರಾಷ್ಟ್ರ ರಾಜಕಾರಣದ ಕೇಂದ್ರಬಿಂದುಗಳಾಗಿದ್ದಾರೆ.

ಇಂಡಿಯಾ ಮೈತ್ರಿಕೂಟ ಈ ಇಬ್ಬರೂ ನಾಯಕರನ್ನು ಸೆಳೆಯಲು ಪ್ರಯತ್ನಗಳನ್ನು ಆರಂಭಿಸಿದ್ದು, ಎನ್‌ಡಿಎಗೆ ತಲೆನೋವನ್ನುಂಟು ಮಾಡಬಹುದು.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ನಾಯ್ಡು ಅವರಿಗೆ ದೂರವಾಣಿ ಕರೆಗಳನ್ನು ಮಾಡಿ ಕೇಂದ್ರದಲ್ಲಿ ಸರಕಾರ ರಚನೆಯ ಬಗ್ಗೆ ಚರ್ಚಿಸಿದ್ದಾರೆ. ನಿತೀಶ್, ನಾಯ್ಡು ಯಾರನ್ನು ಬೆಂಬಲಿಸಲಿದ್ದಾರೆ?

ಎಷ್ಟೇ ಊಹಾಪೋಹದ್ದಾಗಿದ್ದರೂ ಇದು ಇಂದು ಎಲ್ಲರ ತುಟಿಗಳಲ್ಲಿರುವ ಪ್ರಶ್ನೆಯಾಗಿದೆ. ಎನ್‌ಡಿಎ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಅಗತ್ಯ ಸಂಖ್ಯೆಗಳನ್ನು ಇಂಡಿಯಾ ಮೈತ್ರಿಕೂಟಕ್ಕೆ ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ಈ ನಾಯಕರು ವಹಿಸುತ್ತಾರೆಯೇ?

ಮೇಲ್ನೋಟಕ್ಕೆ ಜೆಡಿಯು ಮತ್ತು ಟಿಡಿಪಿ ಎನ್‌ಡಿಎದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇಂಡಿಯಾ ಮೈತ್ರಿಕೂಟವು ತನ್ನ ಬಲವನ್ನು ಹೆಚ್ಚಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳು ಅದರೊಂದಿಗೆ ಕೈಜೋಡಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ರಾಜಕೀಯ ಬಣಗಳನ್ನು ಬದಲಿಸುವಲ್ಲಿ ನಿತೀಶ್ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಚುನಾವಣೆಗಳಿಗೆ ಮುನ್ನ ಅವರ ಆರೋಗ್ಯ ಸರಿಯಿಲ್ಲ ಎಂಬ ಮಾತುಗಳು ಹರಿದಾಡುತ್ತಿದ್ದವು. ಪ್ರಮುಖ ರಾಜಕೀಯ ರಾಲಿಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಪಾಟ್ನಾ ಮತ್ತು ಬಿಹಾರದ ಪ್ರಮುಖ ನಗರಗಳಲ್ಲಿ ಪ್ರಧಾನಿ ಮೋದಿ ಮಾಲಿಗಳನ್ನು ನಡೆಸಿದ್ದಾಗಲೂ ನಿತೀಶ್ ಅನುಪಸ್ಥಿತಿಯು ಎದ್ದು ಕಂಡಿತ್ತು. ಆದರೆ ಪರಿಸ್ಥಿತಿ ಈಗ ಬದಲಾಗಿರುವಂತಿದೆ ಮತ್ತು ಈ ಭರ್ಜರಿ ಚುನಾವಣಾ ಗೆಲುವು ಭವಿಷ್ಯವನ್ನು ಮುನ್ನಡೆಸಲು ನಿತೀಶ್‌ ರಲ್ಲಿ ವಿಶ್ವಾಸವನ್ನು ಮೂಡಿಸುವುದೇ? ಬಿಹಾರದಲ್ಲಿ ಮಾತ್ರವಲ್ಲ,ಮಹತ್ವದ ರಾಷ್ಟ್ರೀಯ ಪಾತ್ರವನ್ನೂ ನಿರ್ವಹಿಸಲು ಜೆಡಿಯು ಸಜ್ಜಾಗಿರುವಂತಿದೆ.

ನಿತೀಶ್ ಯಾವ ಕಡೆ ವಾಲುತ್ತಾರೆ:
ಈ ಸಲ ನಿತೀಶ್ ಬಣವನ್ನು ಬದಲಿಸುವುದಿಲ್ಲ. ನಾವು ಎನ್ ಡಿಎ ಜೊತೆಯಲ್ಲಿ ಮುಂದುವರಿಯುತ್ತೇವೆ. ಮೈತ್ರಿಧರ್ಮ ನಿತೀಶ್ ಗೆ ಗೊತ್ತಿದೆ, ಪ್ರತಿಪಕ್ಷಗಳು ಅವರನ್ನು ಕೀಳಂದಾಜಿಸಿದ್ದವು 'ಎಂದು ಜೆಡಿಯು ನಾಯಕರು ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಈಗ ನಿತೀಶ್‌ರನ್ನು ಓಲೈಸುತ್ತಿವೆ. ಬಿಜೆಪಿ ಎನ್‌ಡಿಎ ಸಂಚಾಲಕ ಹುದ್ದೆಯ ಕೊಡುಗೆಯನ್ನು ಅವರ ಮುಂದಿರಿಸಿದೆ. ಒಂಭತ್ತು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಈಗ ಭಾರತೀಯ ರಾಜಕೀಯಕ್ಕೆ ಹೊಸ ತಿರುವು ನೀಡಬಲ್ಲರು.

ಅತ್ತ ಆಂಧ್ರಪ್ರದೇಶದಲ್ಲಿ ನಾಯ್ಡು ಕೂಡ ತನ್ನ ರಾಜಕೀಯ ಶಕ್ತಿ ಮತ್ತು ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಆಂಧ್ರಪ್ರದೇಶದ ಲೋಕಸಭಾ ಸ್ಥಾನಗಳ ಸಿಂಹಪಾಲನ್ನು ಅವರ ಟಿಡಿಪಿ ಗೆದ್ದುಕೊಂಡಿದೆ. ಇದೇ ವೇಳೆ ಅವರ ರಾಜಕೀಯ ಚಾಣಾಕ್ಷತೆಯೂ ಪರೀಕ್ಷೆಗೊಳಗಾಗಲಿದೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ನಾಯ್ಡು ಅವರು ವಿವಿಧ ಪಕ್ಷಗಳೊಂದಿಗೆ ರಾಜಕೀಯ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಈಗ ಅವರು ಮತ್ತು ಅವರ ಪಕ್ಷ ದಿಲ್ಲಿಯ ಕೇಂದ್ರ ವೇದಿಕೆಯಲ್ಲಿ ನಿರ್ವಹಿಸಲಿರುವ ಪಾತ್ರವನ್ನು ಕಾದು ನೋಡಬೇಕಿದೆ.

Read These Next

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...