ಕೋಲಾರ, ಜುಲೈ 31:ಸರ್ಕಾರವು ಜನ ಸಾಮಾನ್ಯರಿಗಾಗಿ ಕೈಗೊಂಡಿರುವ ಪ್ರತಿಯೊಂದು ಪ್ರಗತಿಪರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ಅವರು ಅಭಿಪ್ರಾಯಪಟ್ಟರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಪ್ರಗತಿ ಮಾಹಿತಿ” ವಿಶೇಷ ಪ್ರಚಾರ ಕಾರ್ಯಕ್ರಮದ ಎಲ್.ಇಡಿ. ಪ್ರದರ್ಶನ ವಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಸರ್ಕಾರವು ಜನರಿಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಉಪಯೋಗಿಸಿಕೊಳ್ಳಬೇಕು. ಸರ್ಕಾರವು ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಕ್ಷೀರಧಾರೆ, ಋಣಮುಕ್ತ, ಮನಸ್ವಿನಿ, ಮೈತ್ರಿಯಂತಹ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಇದು ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಇಂತಹ ಯೋಜನೆಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಚಾರ ನೀಡುವ ಮೂಲಕ ಜನರ ಮನೆ ಬಾಗಿಲಿಗೆ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸರ್ಕಾರದ 4 ವರ್ಷದ ಸಾಧನೆ ಕಿರುಪುಸ್ತಕವನ್ನು ವಿತರಿಸಲಾಯಿತು. ಪ್ರಗತಿಯ ಮಾಹಿತಿ ವಾಹನವು ಕೋಲಾರ ತಾಲ್ಲೂಕಿನಲ್ಲಿ ದಿನಾಂಕ: 31-07-2017 ರಿಂದ 02-08-2017 ರವರೆಗೆ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ದಿನಾಂಕ: 02-08-2017 ರಿಂದ 04-08-2017 ರವರೆಗೆ, ಮುಳಬಾಗಿಲು ತಾಲ್ಲೂಕಿನಲ್ಲಿ ದಿನಾಂಕ:05-08-2017 ರಿಂದ 07-08-2017 ರವರೆಗೆ, ಬಂಗಾರಪೇಟೆ ತಾಲ್ಲೂಕಿನಲ್ಲಿ ದಿನಾಂಕ:08-08-2017 ರಿಂದ 10-08-2017 ರವರೆಗೆ, ಮಾಲೂರು ತಾಲ್ಲೂಕಿನಲ್ಲಿ 10-08-2017 ರಿಂದ 12-08-2017 ರವರೆಗೆ ಪ್ರತಿ ತಾಲ್ಲೂಕಿನ ತಲಾ 13 ಆಯ್ದ ಗ್ರಾಮಗಳಂತೆ ಜಿಲ್ಲೆಯ 65 ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಯಲಿದೆ.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.