ಮೇ ೧೫ರಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ನೋಂದಣಿಗೆ ಚಾಲನೆ
ಕಾರವಾರ: ಐದು ಲಕ್ಷ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಉದ್ದೇಶದಿಂದ ವೆಬ್‌ಪೋರ್ಟಲ್ (www.kaushalkar.com) ವಿನ್ಯಾಸಗೊಳಿಸಿದ್ದು, ಮೇ ೧೫ರಂದು ರಾಜ್ಯದಾದ್ಯಂತ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
ಜಿಲ್ಲೆಯಲ್ಲಿ ಬೆಳಿಗ್ಗೆ ೧೧ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ವೆಬ್‌ಪೋರ್ಟಲ್‌ಗೆ ಚಾಲನೆ ನೀಡುವರು. ಯುವಜನರಿಗೆ ಉದ್ಯೋಗ ಮಾರುಕಟ್ಟೆಗೆ ಬೇಕಾದ ಅಗತ್ಯ ನೈಪುಣ್ಯತೆಗಳಲ್ಲಿ ತರಬೇತಿ ಪಡೆಯಲು ತಮ್ಮ ಹೆಸರನ್ನು ಸ್ವಯಂ ನೋಂದಾಯಿಸಿಕೊಳ್ಳಲು ನೆರವಾಗುತ್ತದೆ.
ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿವಿಧ ಕೌಶಲ್ಯ ತರಬೇತಿಗಳ ಉಪಕ್ರಮಗಳನ್ನು ಒಂದೆಡೆ ತರಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಎಂಬ ಹೊಸ ಇಲಾಖೆಯನ್ನು ಆರಂಭಿಸಲಾಗಿದೆ. ಮುಖ್ಯ ಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಆಯೋಜಿಸಿರುವ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮಕ್ಕೆ ಮೇ ೧೫ರಂದು ಚಾಲನೆ ನೀಡಲಾಗುತ್ತಿದೆ.
ಈ ಯೋಜನೆ ಅಡಿಯಲ್ಲಿ ಪ್ರತ್ಯೇಕ ಉದ್ಯೋಗಗಳಿಗೆ ಕೌಶಲ್ಯ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಯು ತಮ್ಮ ಹೆಸರನ್ನು ಜಾಲ ತಾಣದ ಪೋರ್ಟಲ್ (www.kaushalkar.com) ನಲ್ಲಿ ಸ್ವಯಂ ನೋಂದಾಯಿಸಬಹುದು. ಸದರಿ ಜಾಲತಾಣವನ್ನು ಅಭ್ಯರ್ಥಿಗಳ ಸಾಮರ್ಥ್ಯವನ್ನು ಮತ್ತು ಇವರುಗಳ ಅವಶ್ಯಕತೆಗಳನ್ನು ಗುರುತಿಸುವಂತೆ ವಿನ್ಯಾಸಗೊಳಿಸಲಾಗಿದೆ ಅಲ್ಲದೆ, ಈ ಜಾಲ ತಾಣವು ಪಾಲುದಾರರು, ತರಬೇತಿ ನೀಡುವವರು ಮತ್ತು ಉದ್ಯೋಗದಾತರ ಸಂಸ್ಥೆಗಳಿಗೆ ತಮ್ಮ ಅವಶ್ಯಕತೆಗಳನ್ನು ವೆಬ್‌ಪೋರ್ಟಲ್‌ನಲ್ಲಿ ದಾಖಲಿಸಲು ನೆರವಾಗುತ್ತದೆ ಮತ್ತು ರಾಜ್ಯಾದ್ಯಂತ ಅನೇಕ ಭಾಗಗಳಲ್ಲಿ ನೀಡಲಾಗುತ್ತಿರುವ ವಿವಿಧ ಕೌಶಲ್ಯ ತರಬೇತಿ ಯೋಜನೆಗಳ ಸಂಪೂರ್ಣ ಮಾಹಿತಿ ದೊರಕಿಸಿಕೊಡಲು ನೆರವಾಗುತ್ತದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಈ ವಿಶೇಷ ಕೌಶಲ್ಯ ತರಬೇತಿ ನೈಪುಣ್ಯತೆಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಮೇ೧೫ರಿಂದ ೨೨ರ ವರೆಗೆ ತಾಲ್ಲೂಕು ಕಚೇರಿಗಳಲ್ಲಿ ನಡೆಯು ಕೌಶಲ್ಯ ಶಿಬಿರದಲ್ಲಿ ಅಲ್ಲದೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ತಾಲ್ಲೂಕು ಕಚೇರಿ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಂತರ ಈ ನೋಂದಣಿಯು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ಮುಂದುವರಿಯಲಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಎಲ್.ಚಂದ್ರಶೇಖರ ನಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ತಿಳಿಸಿದ್ದಾರೆ.