ಕಾರವಾರ: ವಿಪತ್ತು ಎದುರಿಸಲು ಯೋಜನೆ ಸಿದ್ದಪಡಿಸಿಕೊಂಡು, ತ್ವರಿತವಾಗಿ ಸ್ಪಂದಿಸಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ

Source: S O News | By I.G. Bhatkali | Published on 1st December 2024, 2:02 AM | Coastal News |

ಕಾರವಾರ: ಜಿಲ್ಲೆಯ ಕೈಗಾ ಅಣು ಸ್ಥಾವರ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ, ಜಿಲ್ಲೆಯ ಮುಂಚೂಣಿ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ಪರಿಸ್ಥಿತಿಯ ಹತೋಟಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಸಕಲ ಸಿದ್ದತೆಗಳೊಂದಿಗೆ ಜಾಗೃತವಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.

ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ, ಕೈಗಾ ಅಣು ಸ್ಥಾವರ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ವಿವಿಧ ಇಲಾಖೆಗಳ ಕರ್ತವ್ಯಗಳ ಕುರಿತ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಗುಡ್ಡಕುಸಿತ ಸಂಭವಿಸುವ 439 ಸ್ಥಳಗಳನ್ನು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವತಿಯಿಂದ ಗುರುತಿಸಲಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಯಾವುದೇ ಕಾರಣಗಳಿಂದ ತುರ್ತು ಪರಿಸ್ಥಿತಿ ಘೋಷಿಸಿದಲ್ಲಿ , ಈ ವ್ಯಾಪ್ತಿಯಲ್ಲಿನ ಶಾಲೆಗಳು, ಆಸ್ಪತ್ರೆಗಳು, ಜನವಸತಿ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತಕ್ಷಣದಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಇದಕ್ಕಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿರಬೇಕು ಎಂದರು.
ಅವಘಡಗಳು ನಡೆದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಯೋಜನೆಯನ್ನು ಸಿದ್ದಪಡಿಸಿಕೊಂಡಿದ್ದರೆ, ಸಂಭವಿಸಬಹುದಾದ ಹೆಚ್ಚಿನ ಅನಾಹುತಗಳನ್ನು ಯಶಸ್ವಿಯಾಗಿ ತಪ್ಪಿಸಲು ಸಾಧ್ಯವಾಗಲಿದೆ ಎಂದ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ತುರ್ತು ಸಂದರ್ಭದಲ್ಲಿ ಕೈಗಾ ಅಣು ಸ್ಥಾವರದ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕೈಗಾ ಅಣು ವಿದ್ಯುತ್ ಸ್ಥಾವರದ ಹಿರಿಯ ತಾಂತ್ರಿಕ ಇಂಜಿನಿಯರ್ ಅಮೋಲ್ ಶುಕ್ಲಾ ಮಾತನಾಡಿ, ಪ್ರಸ್ತುತ ದೇಶದಲ್ಲಿ 7 ಪ್ರದೇಶದಲ್ಲಿ ಮಾತ್ರ ಅಣು ವಿದ್ಯುತ್ ಉತ್ಪಾದನಾ ಸ್ಥಾವರಗಳಿದ್ದು, ಕೈಗಾದಲ್ಲಿ 220 ಮೆ.ವ್ಯಾಟ್ ನ 4 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇತರೆ ವಿದ್ಯುತ್ ಉತ್ಪಾದನಾ ಕ್ರಮಗಳಿಗೆ ಹೋಲಿಸಿದ್ದಲ್ಲಿ ಅಣು ವಿದ್ಯುತ್ ಮೂಲಕ ಕಡಿಮೆ ವೆಚ್ಚದಲ್ಲಿ ಮತ್ತು ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ಪಡೆಯಲು ಸಾಧ್ಯವಿದೆ. ಅಣು ವಿದ್ಯುತ್ ಸ್ಥಾವರದಲ್ಲಿ ಮಾತ್ರವಲ್ಲದೇ ಅನೇಕ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಳಿಗೆ ನಿರ್ದಿಷ್ಟ ಪ್ರಮಾಣದ ಅಣು ವಿಕರಣಗಳ ಬಳಕೆಯಾಗುತ್ತಿದ್ದು, ಕೈಗಾ ವಿದ್ಯುತ್ ಘಟಕದಲ್ಲಿ  ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳ ದೇಹದಲ್ಲಿನ ಅಣು ವಿಕರಣಗಳ ಪ್ರಮಾಣಗಳ ಬಗ್ಗೆ ಪ್ರತಿ ದಿನ ತಪಾಸಣೆ ನಡೆಸಲಾಗುತ್ತಿದ್ದು, ಘಟಕದ ಆರಂಭದಿ0ದ ಇದುವರೆಗೂ ವಿಕಿರಣ ಪ್ರಮಾಣ ನಿಗಧಿಗಿಂತಲೂ ಅತ್ಯಂತ ಕಡಿಮೆ ಇದೆ ಎಂದರು.

ಹಿರಿಯ ತಾಂತ್ರಿಕ ಇಂಜಿನಿಯರ್ ಚಿತ್ತರಂಜನ್ ಮಾತನಾಡಿ, ಕೈಗಾದಲ್ಲಿ ವಿದ್ಯುತ್ ಉತ್ಪಾದನಾ ಘಟಕ, ಅಣು ವಿದ್ಯುತ್ ಸ್ಥಾವರದ ಪ್ರದೇಶ ಮತ್ತು ಕೈಗಾ ಅಣು ವಿದ್ಯುತ್ ಸ್ಥಾವರದ ಹೊರ ಪ್ರದೇಶದಲ್ಲಿ ವಿಕಿರಣ ಸೋರಿಕೆಯಾಗದಂತೆ 3 ಹಂತದಲ್ಲಿ ಸಂಪೂರ್ಣ ಸುರಕ್ಷತೆಯನ್ನು ಕೈಗೊಂಡಿದ್ದು, ಈ ಬಗ್ಗೆ 24*7 ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಸೋರಿಕೆಯಾಗಿರುವುದು ಕಂಡು ಬಂದಲ್ಲಿ ಅದನ್ನು ನಿಯಂತ್ರಿಸುವ ಕುರಿತಂತೆ ಸಹ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಕೈಗಾ ಸೇರಿದಂತೆ ಇದುವರೆಗೆ ಭಾರತದ ಯಾವುದೇ ಅಣು ವಿದ್ಯುತ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಪ್ರಕರಣ ಸಂಭವಿಸಿಲ್ಲ ಎಂದರು.

ಕೈಗಾ ಅಣು ವಿದ್ಯುತ್ ಸ್ಥಾವರದ ಒಳಗಿನ ಪ್ರದೇಶದಲ್ಲಿ ವಿಕಿರಣ ಸೋರಿಕೆಯಾದಲ್ಲಿ ಅದನ್ನು ಅಲ್ಲಿಯೇ ನಿಯಂತ್ರಿಸಲು ಸಂಸ್ಥೆಯಿ0ದಲೇ ಕ್ರಮ ಕೈಗೊಳ್ಳಲಾಗುವುದು ಆದರೆ ಹೊರ ಪ್ರದೇಶದಲ್ಲಿ ಹರಡಿದಲ್ಲಿ ಮಾತ್ರ ಅದರ ನಿಯಂತ್ರಣಕ್ಕೆ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದ್ದಲ್ಲಿ, ನ್ಯೂಕ್ಲಿಯರ್ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದರು.

ನ್ಯೂಕ್ಲಿಯರ್ ತುರ್ತು ಪರಿಸ್ಥಿತಿಯ ಸಂದರ್ಭಕ್ಕೆ ಕಾರಣಗಳು ಮತ್ತು ಆ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ತುರ್ತು ನಿರ್ವಹಣಾ ಕ್ರಮಗಳ ಕುರಿತಂತೆ ಕಾರ್ಯಾಗಾರದಲ್ಲಿ ವಿವರವಾಗಿ ತಿಳಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸಾಜಿದ್ ಅಹಮದ್ ಮುಲ್ಲಾ, ಕೈಗಾ ಅಣು ವಿದ್ಯುತ್ ಸ್ಥಾವರದ ಹಿರಿಯ ತಾಂತ್ರಿಕ ಇಂಜಿನಿಯರ್ ರಾಜೇಶ್ ಪೈ, ಜಯರಾಮ್ ಹಾಗೂ ವಿವಿಧ ಇಲಾಖೆಗಳ ಅನುμÁ್ಠನಾಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

For report in English, click here

Read These Next