ವಿಶ್ವವಿಖ್ಯಾತ ವಿಜ್ಞಾನಿ ಸರ್. ಸಿ. ವಿ. ರಾಮನ್, ಬೆಳಕಿನ ಚದರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದ ದಿನ. ಮಾನವನ ಏಳ್ಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ವಹಿಸುತ್ತಿರುವ ಮಹತ್ತರ ಪಾತ್ರವನ್ನು ಗುರುತಿಸಿ, ಆ ವಲಯಕ್ಕೆ ಮತ್ತಷ್ಟು ಬಲತುಂಬುವ, ಸಂಶೋಧನಾ ರಂಗದಿಂದ ವಿಮುಖರಾಗುತ್ತಿರುವ ಪೀಳಿಗೆಯನ್ನು ವಿಜ್ಞಾನಮುಖಿಯಾಗಿಸವ ಕೆಲಸ ಆಗಬೇಕಿದೆ.
ಮನುಕುಲದ ಇತಿಹಾಸದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಷ್ಟು ವೈಜ್ಞಾನಿಕ ಪ್ರಗತಿ ಇನ್ಯಾವ ಕಾಲದಲ್ಲಿಯೂ ನಡೆದಿಲ್ಲ. ವಿಶ್ವೇಶ್ವರಯ್ಯ ಹಾಗೂ ಸಿ. ವಿ. ರಾಮನ್‍ನವರನ್ನು ಮರೆತಿರುವ ಕಾಲವಿದು. ನಮ್ಮ ದೇಶದ ವಿಶ್ವವಿದ್ಯಾಲಯಗಳು ಕಳೆದ ಎಂಬತ್ತೆಳು ವರ್ಷಗಳಲ್ಲಿ ಮತ್ತೊಬ್ಬ ಸಿ. ವಿ. ರಾಮನ್, ವಿಶ್ವೇಶ್ವರಯ್ಯ ರನ್ನು ಕೊಟ್ಟಿಲ್ಲ. ಇದರ ಬಗ್ಗೆಕಾರಣ ಹುಡುಕಲು ಹೊರಟರೆ ನಮ್ಮೆಲ್ಲ ಪ್ರತಿಭಾವಂತ ವಿದ್ಯಾರ್ಥಿಗಳು ಮೂಲ ವಿಜ್ಞಾನ ಅಧ್ಯಯನದಿಂದ ವಿಮುಖರಾಗಿರುವ ಕಠೋರ ಸತ್ಯ ಗೋಚರಿಸುತ್ತದೆ. ಒಂದೆಡೆ ಸಂಪನ್ಮೂಲಗಳ ಕೊರತೆ, ಮತ್ತೊಂದೆಡೆ ಅನ್ಷೇಷಕ ಪ್ರವೃತ್ತಿಯ ವಿದ್ಯಾರ್ಥಿಗಳ ಅಭಾವ. ಈ ನೆಪಗಳಿಗೂ ಮಿಗಿಲಾದ ಒಂದು ಪ್ರಮುಖ ಕಾರಣವೊಂದಿದೆ. ಅದುವೇ ಬದಲಾಗುತ್ತಿರುವ ಆದ್ಯತೆ.
1928 ರ ಫೆಬ್ರವರಿ 28 ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ. ವಿ. ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಾಭಂಗಣದಲ್ಲಿ ಕ್ರಿ. ಶ 1928 ರ ಫೆಬ್ರವರಿ 28 ರಂದು ಸಿ. ವಿ. ರಾಮನ್ ಅವರು ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳ ಹೊಂದನ್ನು ಪ್ರತಿಪಾದಿಸಿದರು. ಎರಡು ವರ್ಷಗಳ ನಂತರ ಈ ಅವಿಷ್ಕಾರಕ್ಕಾಗಿ ರಾಮನ್ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತು. ಮುಂದಿನ ದಿನಗಳಲ್ಲಿ ಅದು ರಾಮನ್ ಪರಿಣಾಮವೆಂದೇ ಪ್ರಸಿದ್ಧವಾಯಿತು. 1987 ರಿಂದಲೂ ದೇಶದ್ಯಂತ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 2017 ನೇ ಸಾಲಿನ ರಾಷ್ಟ್ರೀಯ ವಿಜ್ಞಾನ ದಿನದ Theme “Science and Tecnology for Specially abled persons”.. ವಿಜ್ಞಾನ ಮತ್ತು ತಂತ್ರಜ್ಞಾನವು ವಿಶೇಷ ಸಾಮಥ್ರ್ಯವುಳ್ಳ ವ್ಯಕ್ತಿಗಳಿಗಾಗಿ”
ಸಿ. ವಿ. ರಾಮನ್ ರವರ ತಂದೆಯ ಹೆಸರು ಚಂದ್ರಶೇಖರ ಅಯ್ಯರ ತಾಯಿ ಪಾರ್ವತಿ ಅಮ್ಮಾಳ ಇವರ ಉದರದಲ್ಲಿ ರಾಮನ್ ರವರು 7 ನವೆಂಬರ್ 1888 ರಲ್ಲಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದರು. 1904 ರಲ್ಲಿ ಬಿ.ಎ. ಪದವಿಯನ್ನು ಇಂಗ್ಲೀಷ ಹಾಗೂ ಭೌತಶಾಸ್ತ್ರದಲ್ಲಿ ಅಧ್ಯಯನ ಮಾಡಿ ಚಿನ್ನದ ಪದಕವನ್ನು ಪಡೆದರು. ತದನಂತರ 1907 ರಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಎಂ. ಎ. ಪದವಿಯನ್ನು ಪಡೆದರು. ಮದ್ರಾಸ ಸರ್ಕಾರವು ನಡೆಸಿದ ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿ. ವಿ. ರಾಮನ್ ರವರು ಪ್ರಥಮ ಸ್ಥಾನವನ್ನು ಪಡೆದರು. 1907 ರಲ್ಲಿ ಕಲ್ಕತ್ತಾದಲ್ಲಿ ಅಸಿಸ್ಟೆಂಟ ಅಕೌಂಟೆಂಟ ಜನರಲ್ ಆಗಿ ಸೇವೆಗೆ ಸೇರಿದರು. 1917 ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದದ ಭೌತಶಾಸ್ತ್ರದ ಪ್ರಾಧ್ಯಾಪಕರಾದರು. 1930 ರಲ್ಲಿ ‘ರಾಮನ್ ಪರಿಣಾಮ’ ಕ್ಕೆ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಮನ್‍ರು 1931 ರಲ್ಲಿ ಬೆಂಗಳೂರಿನಲ್ಲಿರುವ ಟಾಟಾ ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡರು. 1934 ಎಪ್ರೀಲ್ ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. 1941 ರಲ್ಲಿ ಅಮೆರಿಕದ ಅತ್ಯುನ್ನತ ಫ್ರಾಂಕ್ಲಿನ್ ಪದಕ ಪಡೆದರು. 1948 ರಲ್ಲಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದರು. 1948 ರಲ್ಲಿ ತಮ್ಮ ಸ್ವಂತ ಸಂಶೋಧನಾಲಯ ರಾಮನ್ ಸಂಶೋಧನಾ ಸಂಸ್ಥೆ ಆರಂಭಿಸಿದರು. 1954 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದರು. ತಮ್ಮ ಜೀವನವನ್ನು ಪೂರ್ತಿಯಾಗಿ ವಿಜ್ಞಾನಕ್ಕೆ ಮುಡಿಪಾಗಿಟ್ಟ ರಾಮನ್‍ರು ನವೆಂಬರ 21, 1970 ರಂದು ನಿಧನರಾದರು.
ಸೂರ್ಯನ ಬೆಳಕನ್ನು ಪಟ್ಟಕದ (Prism) ಮೂಲಕ ಹಾಯಿಸಿದಾಗ ವರ್ಣವಿಭಜನೆಗೊಂಡು ಏಳು ವರ್ಣಗಳ ರೋಹಿತ ಉಂಟಾಗುತ್ತದೆ. ಬೆಳಕಿನಲ್ಲಿರುವ ತರಂಗಾಂತರಗಳು ಪ್ರತ್ಯೇಕಗೊಳ್ಳುವುದೇ ಇದಕ್ಕೆ ಕಾರಣ. ಇಲ್ಲಿ ವರ್ಣವೆಂಧರೆ ತರಂಗಾಂತರ ( wave length)
ಬೆಳಕಿನ ಕಿರಣಗಳು ಪಾರದರ್ಶಕ ವಸ್ತುಗಳ ಮೂಲಕ ಹಾದುಹೋಗುವಾಗ ಹಲವು ಅಣುಗಳು ಚೈತನ್ಯವನ್ನು ಬಿಟ್ಟುಕೊಡುತ್ತವೆ. ಆದ್ದರಿಂದ ಚದುರಿಸಲ್ಪಟ್ಟ ಬೆಳಕು ಅಪತನಗೊಂಡು ಬೆಳಕಿಗಿಂತ ಕಡಿಮೆ ತರಂಗ ದೂರದ ಮತ್ತು ಹೆಚ್ಚು ತರಂಗ ದೂರದ ತರಂಗಗಳನ್ನು ಹೊಂದಿರುತ್ತದೆ. ಇದನ್ನು ರಾಮನ್‍ರು ಕಂಡು ಹಿಡಿದರು. ಈ ಸಂಶೋಧನೆಯನ್ನು ಮೆಚ್ಚಿ 1928 ರಲ್ಲಿ ಬ್ರಿಟೀಶ ಸರ್ಕಾರವು ಸರ್ ಎಂದು ಬಿರುದು ನೀಡಿತು.
1921 ರಲ್ಲಿ ಅವರು ಭಾರತದಿಂದ ಲಂಡನ್ನಿನತ್ತ ಕೈಗೊಂಡ ಮೊದಲ ಪಯಣದಲ್ಲಿ ಮೆಡಿಟರೇನಿಯನ್ ಸಮುದ್ರದ ನೀರಿನ ಪಾರದರ್ಶಕವಲ್ಲದ ನೀಲ ವರ್ಣವು ಬೆರಗು ಹುಟ್ಟಿಸಿತು. ನಂತರ ಇವರು ಯುರೋಪ ಪ್ರವಾಸ ಕೈಗೊಂಡರು. ಇರೋಪರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಾಣ ಸುವ ಹಿಮರಾಶಿಯ ಬಣ್ಣ ನೀಲ ಹಸಿರು ಆದರೆ ಒಂದು ಹಿಡಿ ಹಿಮವನ್ನು ಕೈಯಲ್ಲಿ ತೆಗೆದುಕೊಂಡು ಗಮನಿಸಿದ್ದರೆ ಪಾರದರ್ಶಕವಾಗಿ ಕಾಣುತ್ತದೆ. ಇದು ಸಮುದ್ರ ನೀರಿಗೂ ಅನ್ವಯಿಸುತ್ತದೆ. ಹಿಮರಾಶಿ ಅಥವಾ ಸಮುದ್ರ ನೀರಿನ ಬಣ್ಣ ಎಲ್ಲರ ದೃಷ್ಟಿಯಲ್ಲಿ ಅದೇ ಸಹಜ ರಾಮನ್ನರಿಗೆ ಕುತುಹಲಕಾರಿ ಸಂಗತಿಯಾಗಿತ್ತು.
ವಾಯುಮಂಡಲದಲ್ಲಿ, ದ್ರವರೂಪದ ವಸ್ತುಗಳಲ್ಲಿ ಬೆಳಕು ಚದುರುವ ಬಗ್ಗೆ ಸಾಗರದ ನೀರಿನಲ್ಲಿ ತೋರುವ ವರ್ಣವೈವಿಧ್ಯವನ್ನು ಕುರಿತು “Molecular diffraction of light’’ ಎಂಬ ಪ್ರಬಂಧ ಬರೆದರು. ಭಾರತಕ್ಕೆ ಹಿಂದಿರುವಾಗ ಮೆಡಿಟರೇನಿಯನ್ ಸಾಗರವನ್ನು ದಾಟುವಾಗ ಸೂರ್ಯನ ಬಿಸಿಲಿನಲ್ಲಿ ಅದುಕ್ಷಣಕೊಂಡು ಬಣ್ಣ ತಾಳುತ್ತಿತ್ತು. ಬೆಳಕು ನೀರನ್ನು ಹೊಕ್ಕು ಚದುರಿದ್ದ ಕಾರಣ ವರ್ಣ ವೈವಿದ್ಯ ಉಂಟಾಯಿತು. ಈ ವಿಷಯವನ್ನು ಚಿಂತಿಸಿ ‘The colour of the Sea' ಎನ್ನುವ ಪ್ರಬಂಧವನ್ನು ಬರೆದರು.
ರಾಮನ್ ಪರಿಣಾಮ ( Raman Effect) ಏಕ ವರ್ಣೀ (ತರಂಗಾತರ) ಬೆಳಕನ್ನು ಪಾರದರ್ಶಕ ಮಾಧ್ಯಮದ ಮೂಲಕ ಹಾಯಿಸಿದಾಗ ಅದರಲ್ಲಿ ಕೆಲವಂಶ ಚದುರುತ್ತದೆ. ಈ ಬೆಳಕನ್ನು ರೋಹಿತ ದರ್ಶಕ (Spectro Meter) ದ ಮೂಲಕ ಪರೀಕ್ಷಿಸಿದಾಗ ಮೂಲ ಬೆಳಕಿನ ಅಲೆಯೊಂದಿಗೆ ಅದಕ್ಕಿಂತ ಕಡಿಮೆ ಮತ್ತು ಹೆಚ್ಚಿನ ತರಂಗಾಂತರವುಳ್ಳ ಬೆಳಕಿನ ಅಲೆಗಳು ಕಂಡುಬರುತ್ತವೆ. ಇದಕ್ಕೆ ಕಾರಣವೆಂದರೆ ಬೆಳಕು ಮಾಧ್ಯಮದಲ್ಲಿನ ಅಣುಗಳೊಂದಿಗೆ ವರ್ತಿಸಿ ತನ್ನಲ್ಲಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಅಥವಾ ಅವುಗಳಿಂದ ಶಕ್ತಿಯನ್ನು ಪಡೆಯುತ್ತದೆ. ಈ ಪರಿಣಾಮಕ್ಕೆ “ರಾಮನ್ ಪರಿಣಾಮ’ ಎನ್ನುವರು.
ಈ ಅನ್ವೇಷಣೆಯ ಮಹತ್ವವೆಂದರೆ ಇವನ್ನು ರಾಸಾಯನಿಕ ಸಂಯುಕ್ತಗಳ ಅಣು ರಚನೆ ಮತ್ತು ವಿನ್ಯಾಸವನ್ನು ತಿಳಿಯಲು ಬಳಸಿಕೊಳ್ಳಬಹುದು. ರಾಮನ್‍ರ ಈ ಅನ್ವೇಷಣೆಯಿಂದ 2500 ರಾಸಾಯನಿಕ ಸಂಯುಕ್ತಗಳ ರಚನೆಯನ್ನು ತಿಳಿಯಲಾಯಿತು. ರಾಮನ್‍ರು ಈ ಪ್ರಯೋಗಕ್ಕೆ ಉಪಯೋಗಿಸಿದ ಉಪಕರಣಗಳು, ಮುಖ್ಯವಾಗಿ ಬೆಳಕು ನೀಡುವ Mercury Arc Lamp ಬೆಂಜಿನ್ ತುಂಬಿದ ಗಾಜಿನ ಪಾತ್ರೆ ಮತ್ತು ರೋಹಿತ ದರ್ಶಕ (Pocket – spectroscope) ಇವೆಲ್ಲವುಗಳ ಮೊತ್ತ 200 ರೂ ಗಿಂತ ಕಡಿಮೆ.
ಅಬ್ದುಲ್ ಕಲಾಂ, ಸಿ.ವಿ.ರಾಮನ್, ವಿಶ್ವೇಶ್ವರಯ್ಯ ಇವರನ್ನು ನಮ್ಮ ಯುವ ವಿಜ್ಞಾನ ವಿದ್ಯಾರ್ಥಿಗಳಿಗೆ ರೋಲ್ ಮಾಡಲ್‍ಗಳಾಗಬೇಕು. ಹಾಗಾದಲ್ಲಿ ಮಾತ್ರ ನಮ್ಮ ದೇಶವೂ ಮಂಚೂಣ ರಾಷ್ಟ್ರಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಹುದು, ಇಂದು ಮಾತ್ರವಲ್ಲ, ಪ್ರತಿದಿನವೂ ವಿಜ್ಞಾನ ದಿನವಾಗಲಿ ಎಂಬುದು ವಿಜ್ಞಾನಾಸಕ್ತರೆಲ್ಲರ ಹಾರೈಕೆ.
ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೋ: 9632332185