ವಿಶ್ವದಾಖಲೆಯ ಪ್ರಜಾಪ್ರಭುತ್ವದ ಸರಪಳಿ; 2,500 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ಸರಪಳಿ ಯಶಸ್ವಿ; ಸಿಎಂ, ಸಚಿವರು, ಶಾಸಕರು ಸಹಿತ 31 ಜಿಲ್ಲೆಗಳಿಂದ ಲಕ್ಷಾಂತರ ನಾಗರಿಕರು, ವಿದ್ಯಾರ್ಥಿ-ಯುವಜನರು ಭಾಗಿ

Source: S O News | By I.G. Bhatkali | Published on 16th September 2024, 6:45 AM | State News |

ಬೆಂಗಳೂರು: 'ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ'ದ ಅಂಗವಾಗಿ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯು ಹಮ್ಮಿಕೊಂಡಿದ್ದ 'ಮಾನವ ಸರಪಳಿ ಆಂದೋಲನ'ವು ರಾಜ್ಯದ 31 ಜಿಲ್ಲೆಗಳಲ್ಲಿಯೂ ಅತ್ಯಂತ ಯಶಸ್ವಿಯಾಗಿದ್ದು, ಆ ಮೂಲಕ ವಿಶ್ವದಾಖಲೆಯನ್ನು ಬರೆದಿದೆ.

ರವಿವಾರ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವದಡಿ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಂತೆ ಬೀದರ್‌ನ ಬಸವಕಲ್ಯಾಣದ ಅನುಭವ ಮಂಟಪದಿಂದ ಚಾಮರಾಜನಗರದವರೆಗೆ ಸುಮಾರು 2,500 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ಸರಪಳಿಯನ್ನು ರಚಿಸಲು ರಾಜ್ಯ ಸರಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಯಶಸ್ವಿಯಾಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳ ಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದರು. 31 ಜಿಲ್ಲೆಗಳಿಂದಲೂ ಲಕ್ಷಾಂತರ ಜನರು ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸುವ ಮೂಲಕ ಪರಸ್ಪರ ಪ್ರಜಾಪ್ರಭುತ್ವದ ಪ್ರೀತಿಯನ್ನು ಹಂಚಿದರು. ಮಾನವ ಸರಪಳಿಯ ಮಾರ್ಗದುದ್ದಕ್ಕೂ ಅರಣ್ಯ ಇಲಾಖೆಯ ಸಹಯೋಗದಲ್ಲಿ 10 ಲಕ್ಷ ಸಸಿಗಳನ್ನು ಇದೇ ವೇಳೆ ನೆಡಲಾಯಿತು.

ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾರಿತ್ರಿಕ ಮಾನವ ಸರಪಳಿಗೆ ಚಾಲನೆ ನೀಡುತ್ತಿದ್ದಂತೆ ಜಿಲ್ಲಾ ಕೇಂದ್ರಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಮಾನವ ಸರಪಳಿಯಲ್ಲಿ ಭಾಗವಹಿಸಿದರು.

ಬೀದರ್‌ನಲ್ಲಿ ಬೃಹತ್‌ ಮಾನವ ಸರಪಳಿ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಜಿಲ್ಲೆಯಾದ್ಯಂತ 40 ಕಿ.ಮೀ.ವರೆಗೆ 35 ಸಾವಿರ ಜನರು ಭಾಗಿಯಾಗಿ ಮಾನವ ಸರಪಳಿ ರಚನೆಯಾಗಿತ್ತು. ಬಸವಕಲ್ಯಾಣದಿಂದ ಹುಮ್ನಾಬಾದ್‌ಗೆ ತಲುಪಿ ಬಳಿಕ ಕಲಬುರಗಿಯ ಕಿಣ್ಣಿ ಸಡಕ್ ತಲುಪಿತು.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್ ನಿಂದ ಚಿತ್ತಾಪುರ ತಾಲೂಕಿನ ದೇವಲಾಪುರದ ವರೆಗೆ ಮಾನವ ಸರಪಳಿ ನಿರ್ಮಾಣವಾಗಿತ್ತು. ಈ ಕಾರ್ಯಕ್ರಮಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವೀರಶೈವ ಕಲ್ಯಾಣ ಮಂಟಪದ ಬಳಿ ಚಾಲನೆ ನೀಡಿದರು. ಜಿಲ್ಲೆಯಾದ್ಯಂತ 113 ಕಿ.ಮೀ. ಮಾನವ ಸರಪಳಿ ರಚನೆಯಾಗಿತ್ತು.

Karnataka creates history with 2,500-km-long human chain on International Day of Democracy

ಬಾಗಲಕೋಟೆ ಜಿಲ್ಲೆಯಲ್ಲಿ 105 ಕಿ.ಮೀ. ಮಾನವಸರಪಳಿ ಆಲಮಟ್ಟಿಯಿಂದ ಸಾಲಹಳ್ಳಿವರೆಗೆ ರಚನೆಯಾಗಿತ್ತು. ಚಾಮರಾಜನಗರ ಜಿಲ್ಲೆಯಲ್ಲಿ 24 ಕಿ.ಮೀ. ಉದ್ದದ ಮಾನವ ಸರಪಳಿ ರಚನೆಯಾಗಿದ್ದರೆ, ಮಂಡ್ಯ ಜಿಲ್ಲೆಯ ನಿಡಘಟ್ಟದಿಂದ ಸಿದ್ದಲಿಂಗಪುರದವರೆಗೆ 62 ಕಿ.ಮೀ. ಮಾನವ ಸರಪಳಿ ನಿರ್ಮಾಣವಾಗಿತ್ತು.

ಚಿತ್ರದುರ್ಗದಲ್ಲಿ 145 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣವಾಗಿದ್ದು, 1.50ಲಕ್ಷ ಜನ ಭಾಗಿಯಾಗಿದ್ದರು. ಮೊಳಕಾಲ್ಕೂರು ತಾಲೂಕಿನ ಮೇಗಲಕಣಿವೆ ಗ್ರಾಮದಿಂದ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿವರೆಗೆ ಮಾನವ ಸರಪಳಿ ರಚನೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾನವ ಸರಪಳಿಗೆ ಚಾಲನೆ ನೀಡಿದರು.

ಧಾರವಾಡ ಜಿಲ್ಲೆಯಲ್ಲಿ 55 ಕಿ.ಮೀ. ಮಾನವ ಸರಪಳಿ ನಿರ್ಮಾಣವಾಗಿದ್ದು, ಕೆಸಿಡಿ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಚಾಲನೆ ನೀಡಿದರು. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು. ಹಾಸನ ಜಿಲ್ಲೆಯ ಕೊಡಗು ಗಡಿ ಕಡುವಿನಹೊಸಹಳ್ಳಿಯಿಂದ ಚಿಕ್ಕಮಗಳೂರು ಜಿಲ್ಲೆಯ ಗಡಿವರೆಗೆ 114 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣವಾಗಿತ್ತು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾರೇಹಳ್ಳಿಯಿಂದ ಮಡಕೆ ಚೀಲೂರುವರೆಗೆ 60 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಕೊಡಗು ಜಿಲ್ಲೆಯ ಸಂಪಾಜೆಯಿಂದ ಶಿರಂಗಾಲದವರೆಗೆ 72.7 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಚಾಲನೆ ನೀಡಿದರು.

ಕೋಲಾರ ಜಿಲ್ಲೆಯ ಚೊಕ್ಕನಹಳ್ಳಿ ಗ್ರಾಮದಿಂದ ವೆಂಕಟಾಪುರ ಗ್ರಾಮದವರೆಗೆ 55 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣವಾಗಿತ್ತು. ತುಮಕೂರು ಜಿಲ್ಲೆಯಲ್ಲಿ 25 ಲಕ್ಷ ಜನರಿಂದ ಮಾನವ ಸರಪಳಿ ನಿರ್ಮಾಣವಾಗಿದ್ದು, ಮಾನವ ಸರಪಳಿಗೆ ಸಚಿವ ಪರಮೇಶ್ವ‌ರ್ ಚಾಲನೆ ನೀಡಿದರು. ರಾಮನಗರ ಜಿಲ್ಲೆಯ ಮೈಸೂರು-ಬೆಂಗಳೂರು ಹಳೇ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಾಣವಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಚಿವ ಮಂಕಾಳ ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಚಾಲನೆ ನೀಡಿದರು. ಉತ್ತರಕನ್ನಡ ಜಿಲ್ಲೆಯಲ್ಲಿ 143 ಕಿ.ಮೀ. ಉದ್ದದ ಮಾನವ ಸರಪಳಿ ಹಳಿಯಾಳದ ಮಾವಿನಕೊಪ್ಪದಿಂದ ಭಟ್ಕಳದ ಶಿರೂರುವರೆಗೆ ರಚನೆಯಾಗಿತ್ತು. 80 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 132 ಕಿ.ಮೀ. ಮಾನವ ಸರಪಳಿ ನಿರ್ಮಾಣವಾಗಿದ್ದು, ಉಡುಪಿ ಜಿಲ್ಲಾ ಗಡಿ ಹೆಜಮಾಡಿಯಿಂದ ಕೊಡಗು ಜಿಲ್ಲಾ ಗಡಿ ಸಂಪಾಜೆಯವರೆಗೆ ಮಾನವ ಸರಪಳಿ ರಚನೆಯಾಗಿತ್ತು. ಉಡುಪಿ ಜಿಲ್ಲೆಯ ಗಡಿ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್‌ನಿಂದ, ಕಾಪು ತಾಲೂಕಿನ ಹೆಜಮಾಡಿ ಸೇತುವೆವರೆಗೆ 106 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣವಾಗಿತ್ತು.

Read These Next

ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಸವರ್ಣೀಯರಿಂದ ಹಲ್ಲೆ;21 ಮಂದಿಯ ಬಂಧನ

ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಸವರ್ಣೀಯರು ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ...

ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗಾಗಿ ಜಿಲ್ಲಾಡಳಿತಕ್ಕೆ ಸಮಗ್ರ ಮಾರ್ಗಸೂಚಿಗಳು

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಬೀದರ್‍ನಿಂದ ಚಾಮರಾಜನಗರದವೆರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ...

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯನ್ನು ಅಳವಡಿಸಿ, ಖಾಸಗಿ ವೀಡಿಯೋಗಳನ್ನು ಚಿತ್ರೀಕರಿಸಿ ಮಾಧ್ಯಮಗಳಲ್ಲಿ ಪ್ರಸಾರ ...