ಜೆರುಸಲೇಂ: ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಗಾಝಾದಲ್ಲಿ ತಾಂಡವವಾಡುತ್ತಿರುವ ಭೀಕರ ಯುದ್ಧವು ಮಂಗಳವಾರ ಎರಡನೇ ತಿಂಗಳಿಗೆ ಕಾಲಿರಿಸಿದೆ. ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ತನ್ನ ವಶದಲ್ಲಿರುವ 240 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವವರೆಗೆ ಕದನವಿರಾಮ ಘೋಷಿಸುವುದಿಲ್ಲವೆಂದು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಲ್ಲದೆ ಯುದ್ಧ ಕೊನೆಗೊಂಡ ಆನಂತರ ಗಾಝಾದ ಒಟ್ಟಾರೆ ಭದ್ರತೆಯನ್ನು ಇಸ್ರೇಲ್ ವಹಿಸಿಕೊಳ್ಳಲಿದೆಯೆಂದೂ ಅವರು ತಿಳಿಸಿದ್ದಾರೆ. ಆದರೆ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಮಾಡುವ ಹಾಗೂ 20.40 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಗಾಝಾಕ್ಕೆ ನೆರವು ಸಾಮಗ್ರಿಗಳ ಪೂರೈಕೆ ಉದ್ದೇಶದಿಂದ ವ್ಯೂಹಾತ್ಮಕವಾಗಿ ತಾತಾಲಿಕ ಯುದ ತಾತ್ಕಾಲಿಕ ಯುದ್ಧ ನಿಲುಗಡೆ' ಮಾಡುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.
ಕಳೆದ ಒಂದು ತಿಂಗಳಿಂದ ಗಾಝಾ ಮೇಲೆ ಇಸ್ರೇಲ್ ನಡೆಸಿದ ಭೀಕರ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ಈಗ 10 ಸಾವಿರಕ್ಕೇರಿದ್ದು, ಅವರಲ್ಲಿ ಬಹುತೇಕ ಮಂದಿ ನಾಗರಿಕರು ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಯುದ್ಧವು ದಿನದಿಂದ ದಿನಕ್ಕೆ ಭೀಕರತೆಯನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಕೂಡಾ ತೀವ್ರ ಕಳವಳ ವ್ಯಕ್ತಪಡಿಸಿದ್ದು ಗಾಝಾದ ಕರಾವಳಿ ಪ್ರದೇಶವು ಮಕ್ಕಳ ಸ್ಮಶಾನವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ. ಇಸ್ರೇಲ್ ಸೋಮವಾರ ಹೇಳಿಕೆಯೊಂದನ್ನು ನೀಡಿ, ತನ್ನ ಪಡೆಗಳು ಉತ್ತರ ಗಾಝಾಪಟ್ಟಿಯಲ್ಲಿ ಹಮಾಸ್ ಹೋರಾಟಗಾರರ ಮಿಲಿಟರಿ ಭದ್ರಕೋಟೆ ಯೊಂದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದೆ. ಟ್ಯಾಂಕ್ ನಿರೋಧಕ ಕ್ಷಿಪಣಿ, ರಾಕೆಟ್ ಲಾಂಚರ್‌ಗಳು, ಶಸ್ತ್ರಾಸ್ತ್ರಗಳು ಹಾಗೂ ವಿವಿಧ ಗುಪ್ತಚರ ಸಾಮಗ್ರಿಗಳು ಅಲ್ಲಿ ಪತ್ತೆಯಾಗಿವೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಒಂದು ತಿಂಗಳಿಂದ ಇಸ್ರೇಲ್ ನಡೆಸುತ್ತಿರುವ ದಾಳಿಗಳಿಂದಾಗಿ ಗಾಝಾ ನಗರ ಸ್ಮಶಾನಸದೃಶವಾಗಿ ದೆ. ವೈಮಾನಿಕ ಬಾಂಬ್ ದಾಳಿಗಳಿಂದಾಗಿ ಕಟ್ಟಡಗಳು ಕುಸಿದುಬಿದ್ದಿರುವುದು ನಗರಾದ್ಯಂತ ಕಂಡುಬರುತ್ತಿದೆ. ಆಸ್ಪತ್ರೆಗಳಲ್ಲಿ ಗಾಯಾಳುಗಳು ತುಂಬಿತುಳುಕುತ್ತಿದ್ದು ಆಸ್ಪತ್ರೆಯ ಹೊರಗಡೆ ಮೃತದೇಹಗಳ ಸಾಲುಗಳೇ ಕಂಡುಬರುತ್ತಿವೆ. ವಿದ್ಯುತ್ ಸಂಪರ್ಕ ಸ್ಥಗಿ ತಗೊಳಿಸಿದ್ದರಿಂದ ವೈದ್ಯರುಗಳು ಮೊಬೈಲ್ ಬೆಳಕಿನ ನೆರವಿನಿಂದ ಶಸ್ತ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.