ಉತ್ತರ ಕನ್ನಡದಲ್ಲಿ ಆಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಣೆ; 253 ಕಿಮೀ ಉದ್ದದ ಮಾನವ ಸರಪಳಿ ನಿರ್ಮಾಣ

Source: S O News | By I.G. Bhatkali | Published on 15th September 2024, 6:34 PM | Coastal News |

ಕಾರವಾರ:  ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಜಾಪ್ರಭುತ್ವ ವಿರೋಧಿಗಳಿಂದ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬ ಸಾರ್ವಜನಿಕರ ಕೂಡಾ ಒಗ್ಗಟ್ಟಾಗಿ ಸ್ವಾತಂತ್ರö್ಯ ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಎತ್ತಿ ಹಿಡಿಯುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.

ಅವರು ಭಾನುವಾರ ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಅರಣ್ಯ ಜೀವ ಪರಿಸರ ಮತ್ತು ಪರಿಸರ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಜಿಲ್ಲೆ ಮತ್ತು ವಿವಿಧ ಸಂಘಟನೆ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತಂತೆ ಸುಳ್ಳು ಸಂದೇಶ ಸಾರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ನಡೆಸುವ ಪ್ರಯತ್ನಗಳನ್ನು ಸಾರ್ವಜನಿಕರು ಒಗ್ಗಟ್ಟಾಗಿ ವಿರೋಧಿಸಬೇಕು. ಸಮಾನತೆ, ಗೌರವ, ಒಗ್ಗಟ್ಟು, ಸಾಮರಸ್ಯದಿಂದ ಜನತೆ ಜೀವಿಸಬೇಕು. ಪ್ರಜಾಪ್ರಭುತ್ವ ಮತ್ತು ಸಂವಿಧಾನ ನಮ್ಮ ಅತ್ಯಮೂಲ್ಯ ಆಸ್ತಿ ಎಂದರು. 

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತಂತೆ ಮುಂದಿನ ಜನಾಂಗಕ್ಕೆ ಅರಿವು ಮತ್ತು ಜಾಗ್ರತೆ ಮೂಡಿಸುವುದು ಅತ್ಯಗತ್ಯವಾಗಿದ್ದು ಶಾಲಾ ಕಾಲೇಜುಗಳಲ್ಲಿ ಪ್ರತಿ ದಿನ ಇವುಗಳ ಬಗ್ಗೆ ತಿಳಿಸುವ ಮೂಲಕ ಸುಭದ್ರ ದೇಶ ನಿರ್ಮಾಣ ಮಾಡಬೇಕು ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ, ಜಿಲ್ಲೆಯಲ್ಲಿ ಹಳಿಯಾಳ ತಾಲ್ಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲ್ಲೂಕಿನ ಗೋರಟೆವರೆಗೆ ಒಟ್ಟು 253 ಕಿಮೀ ಉದ್ದದ ಮಾನವ ಸರಪಳಿ ರಚಿಸಿದ್ದು, ಅರಣ್ಯ ಪ್ರದೇಶದಲ್ಲಿ ಮತ್ತು ಅಪಾಯಕಾರಿ ಗುಡ್ಡಕುಸಿತ ಪ್ರದೇಶದಲ್ಲಿ ವಾಹನಗಳಲ್ಲಿ ಧ್ವಜ ರ‍್ಯಾಲಿಯ ಮೂಲಕ ಸರಪಳಿಯನ್ನು ಜೋಡಿಸಲಾಗಿದ್ದು ಜಿಲ್ಲೆಯ 1 ಲಕ್ಷ ಕ್ಕೂ ಅಧಿಕ ಸಾರ್ವಜನಿಕರು ಈ ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದಾರೆ. ದೇಶದ ಪ್ರಜೆಗಳು ಶಾಂತಿ, ಸಮಾನತೆ, ಸಹಿಷ್ಣುತೆ, ಸೌಹಾರ್ದತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹೋದರ ಸಹೋದರಿಯರಂತೆ ಬಾಳಬೇಕು ಎಂದರು. 

ಮಾನವ ಸರಪಳಿಯಲ್ಲಿ ಪಾಲ್ಗೊಂಡ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ನಾನು ಹೊನ್ನಾವರದಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸುತ್ತಿರುವುದರಿಂದ ಹಳಿಯಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಸಾಧ್ಯವಾಗುತ್ತಿಲ್ಲ. ಭಾರತವು ತನ್ನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಗತ್ತಿಗೆ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಪ್ರತಿಯೊಂದು ಸೂತ್ರವು ನಮ್ಮ ರಾಷ್ಟçದ ಪ್ರಗತಿ ಮತ್ತು ಸೌಹಾರ್ದತೆಯ ಆಧಾರವಾಗಿದೆ ಎಂದರು.

ರಾಜ್ಯದಲ್ಲಿ ಕಳೆದ ವರ್ಷ "ಸಂವಿಧಾನ ಓದು" ಎಂಬ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದೇವೆ. ಈ ವರ್ಷ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲು, ವಿಶೇಷವಾದ "ಮಾನವ ಸರಪಳಿ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುವುದು ಅತಿ ಮುಖ್ಯವಾಗಿದೆ. ಕಾರ್ಯಕ್ರಮದ ನಂತರ ಸಸಿ ನೆಡುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದ್ದು, ಇದು ಪರಿಸರ ಸಂರಕ್ಷಣೆಯತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಸ್ವಾಮಿ ವಸ್ತçದ ಅವರು ಪ್ರಜಾಪ್ರಭುತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.

ಹೊನ್ನಾವರದ ಗೇರುಸೊಪ್ಪ ಸರ್ಕಲ್ ಬಳಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ, ಡಾ.ಬಿ.ಆರ್ ಅಂಬೇಡ್ಕರ್, ಒನಕೆ ಓಬವ್ವ, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ಭಾರತ ಮಾತೆಯ ವೇಷ ಧರಿಸಿದ್ದ ಪುಟಾಣಿಗಳು, ಹಾಲಕ್ಕಿ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಿತು. 

ಹೊನ್ನಾವರ ಪಟ್ಟಣ ಪಂಚಾಯತ್ ಅಧ್ಯಕ್ಷ ನಾಗರಾಜ ಭಟ್, ಉಪಾಧ್ಯಕ್ಷ ಸುರೇಶ ಹೊನ್ನಾವರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಉಪ ವಿಭಾಗಾಧಿಕಾರಿಗಳಾದ ಕನಿಷ್ಕ, ಡಾ. ನಯನಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್, ಮತ್ತಿತರು ಉಪಸ್ಥಿತರಿದ್ದರು. 

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಸ್ವಾಗತಿಸಿದರು, ಶಿಕ್ಷಕರಾದ ಸುದೇಶ ನಾಯ್ಕ ಮತ್ತು ವಸಂತಲಕ್ಷ್ಮೀ ಹೆಗಡೆ ನಿರೂಪಿಸಿದರು. ನಳಿನಿ ಪಟಗಾರ ವಂದಿಸಿದರು.

Read These Next

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದ ಕ್ರಮಕ್ಕೆ ಸಂಸದ ಕಾಗೇರಿ ಕಿಡಿ: ಸೇಡಿನ ರಾಜಕೀಯ ಆರೋಪ

ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದೆಯಾದರೂ, ...

ಕಾರವಾರ: ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ; ಈಶ್ವರ್ ಕಾಂದೂ

ಉತ್ತರ ಕನ್ನಡ​​​​​​​ ಜಿಲ್ಲೆಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾ ...

ಸೆ. 19ರಿಂದ 24ರ ವರೆಗೆ ಉತ್ತರ ಕನ್ನಡದಲ್ಲಿ ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಕ್ರೀಡಾಪಟುಗಳ ಆಯ್ಕೆಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳು

ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ...