ಹುಬ್ಬಳ್ಳಿ:ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ವಿಗ್ರಹಗಳನ್ನು ನೈಸರ್ಗಿಕವಾಗಿ ವಿಸರ್ಜಿಸಲು ವೈಜ್ಞಾನಿಕ ವಿಧಾನ ಪ್ರಕಟಿಸಿದ ನಗರಪಾಲಿಕೆ
ಹುಬ್ಬಳ್ಳಿ ಧಾರವಾಡ: ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದ್ರು ಭಕ್ತರು ಮಾತ್ರ ಕೆಲವು ಕಡೆ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಿ ಈಗ ವಿಸರ್ಜನೆ ಮಾಡಲು ಪಾಲಿಕೆ ಅವಕಾಶ ನೀಡುತ್ತಿಲ್ಲ ಎಂದು ಕೊರಗುತ್ತಿದ್ದಾರೆ. ಎಲ್ಲಿ ವಿಸರ್ಜನೆ ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.
ಇದಕ್ಕೆ ಮಹಾನಗರ ಪಾಲಿಕೆ ಹೊಸ ಉಪಾಯ ಕಂಡು ಹಿಡಿದಿದೆ. ಪಿಒಪಿ ಮೂರ್ತಿಗಳನ್ನು ಕೆರೆ, ಬಾವಿಗಳಲ್ಲಿ ವಿಸರ್ಜನೆ ಮಾಡದೇ ವೈಜ್ಞಾನಿಕವಾಗಿ ನೀರಿನಲ್ಲಿ ಮುಕ್ತಿ ನೀಡಬಹುದು ಎಂಬುದನ್ನು ಸ್ವಯಂ ಪ್ರಯೋಗ ನಡೆಸುವ ಮೂಲಕ ಸಾರ್ವಜನಿಕರಿಗೆ ಹೊಸ ದಾರಿ ಹುಡುಕಿ ಕೊಟ್ಟಿದೆ.
16 ಪಿಒಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿರುವ ಪಾಲಿಕೆ ಅಧಿಕಾರಿಗಳು ವಾಷಿಂಗ್ ಸೋಡಾ ಬಳಸಿ ಪಿಒಪಿ ಗಣೇಶನನ್ನು ಕರಗಿಸಿ ಪರಿಸರ ಮೇಲಾಗುವ ದುಷ್ಪರಿಣಾಮ ತಡೆಯಬಹುದು ಎಂಬುದನ್ನು ಕಂಡುಕೊಂಡಿದ್ದಾರೆ.
ಕರಗಿಸುವದು ಹೇಗೆ..
ಪಿಒಪಿ ಗಣೇಶ ಮೂರ್ತಿ ಎಷ್ಟು ಕೆ ಜಿ ಇರುತ್ತದೆಯೋ ಅಷ್ಟೇ ಕೆಜಿ ವಾಷಿಂಗ್ ಸೋಡಾವನ್ನು ಒಂದು ಬಕೆಟ್ ನಲ್ಲಿ ನೀರು ಹಾಕಿ ದ್ರಾವಣ ಮಾಡಬೇಕು. ನಂತರ ದ್ರಾವಣದಲ್ಲಿ ಪಿಒಪಿ ಮೂರ್ತಿಯನ್ನು ಹಾಕಬೇಕು. ಇದಾದ ಬಳಿಕ 24 ಗಂಟೆಯಲ್ಲಿ ಮೂರ್ತಿ ಕರಗುತ್ತದೆ. ಪಿಒಪಿಯಲ್ಲಿರುವ ಜಿಪ್ಸ್ಂ ಕರಗಿ, ಕ್ಯಾಲ್ಸಿಯಂ ಕಾರ್ಬೋನೈಟ್ ಮತ್ತು ಅಮೋನಿಯಂ ಸಲ್ಫೇಟ್ ಆಗಿ ಮಾರ್ಪಾಡಾಗುತ್ತದೆ. ಕ್ಯಾಲ್ಸಿಯಂ ಕಾರ್ಬೋನೇಟ್ ಕೇಳಭಾಗದಲ್ಲಿದ್ರೆ, ಅಮೋನಿಯಂ ಸಲ್ಫೇಟ್ ನೀರಿನ ರೂಪದಲ್ಲಿ ಮೇಲೆ ಬರುತ್ತದೆ.
ಗಣಪನಿಂದ ಬಳಪ..
ನೀರಿನ ರೂಪದಲ್ಲಿ ಬರುವ ಅಮೋನಿಯಂ ಸಲ್ಫೇಟ್ ಹಸಿ ಕಸಕ್ಕೆ ಹಖುವದರಿಂದ ಕಸದಿಂದ ಉತ್ತಮ ಗೊಬ್ಬರ ಪಡೆಯಬಹುದು. ಕೆಳಭಾಗದ ಕ್ಯಾಲ್ಸಿಯಂ ಕಾರ್ಬೊನೇಟ್ ನಿಂದ ಬಳಪ ತಯಾರಿಸಬಹುದು. ಬಳಪಗಳನ್ನು ಶಾಲೆ ಮಕ್ಕಳಿಗೆ ಉಚಿತವಾಗಿ ಹಂಚಬಹುದು. ಒಂದು ಮೂರ್ತಿಯನ್ನು ಕರಗಿಸಲು 20 ರೂಪಾಯಿ ಖರ್ಚು ಮಾಡಲು ಪಾಲಿಕೆ ಸಿದ್ದವಾಗಿದೆ.
ಆದ್ರೆ ನಿಷೇಧದ ನಡುವೆಯೂ ಪಿಒಪಿ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಿದವರಿಗೆ ಸಾರ್ವಜನಿಕ ಗಣೇಶ ವಿಸರ್ಜನೆಗೆ ಅವಕಾಶವಿಲ್ಲ. ತಮ್ಮ ಮನೆಯಲ್ಲಿಯೇ ಗಣೇಶ ಮೂರ್ತಿಗಳನ್ನು ಕರಗಿಸಿಕೊಳ್ಳಬಹುದು ಎಂದು ಜಿಲ್ಲಾಡಳಿತ ಹಾಗೂ ಪಾಲಿಕೆ ತಿಳಿಸಿದೆ.