ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನ ಪ್ರಚಾರ ಶ್ರಮವನ್ನು ಹಾಡಿ ಹೊಗಳಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ ಅವರು ಬಿಜೆಪಿಯನ್ನು ತೆಗಳಿದ್ದಾರೆ!
ಲೋಕಸಭೆ ಚುನಾವಣೆಯ ನಮೋ ಬ್ರಿಗೇಡ್ ಯಾತ್ರೆಯನ್ನು ಮುಗಿಸಿದ ಬಳಿಕ ಫೇಸ್‌ಬುಕ್‌ನಲ್ಲಿ ಲೈವ್ ಬಂದು ಮಾತನಾಡಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಬಿಜೆಪಿಯ ಪ್ರಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ಅದ್ಭುತವಾಗಿ ಕೆಲಸ ಮಾಡಿದ್ದೀರಿ. 2014 ಮತ್ತು 2019ನಲ್ಲಿ ನೀವು ಮಾಡದ ಕಾರ್ಯಗಳನ್ನು ಈಗ ತುಂಬಾ ಚೆನ್ನಾಗಿ ಮಾಡಿದ್ದೀರಿ. ಈ ನಿಟ್ಟಿನಲ್ಲಿ ನಾನು ನಿಮಗೆ ಶುಭಾಶಯ ತಿಳಿಸುತ್ತೇನೆ” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ತೆಗಳಿರುವ ಸೂಲಿಬೆಲೆ, “ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗಿಂತ ಚೆನ್ನಾಗಿ ಪ್ರಚಾರ ಮಾಡಿದ್ದೀರಿ. ಬಿಜೆಪಿಗರು ಅನೇಕ ಮನೆಗಳಿಗೆ ಭೇಟಿ ನೀಡಿಲ್ಲ. ಬಹುತೇಕ ಕಡೆಗಳಲ್ಲಿ ಬಿಜೆಪಿಗರಿಗೆ ಮನೆ ಮನೆ ಭೇಟಿ ಸಾಧ್ಯವೇ ಆಗಿಲ್ಲ. ಮನೆ ಮನೆ ಭೇಟಿ ಮಾಡಿ ಪ್ರಚಾರ ಮಾಡುವುದರಲ್ಲಿ ಯಾವತ್ತೂ ಬಿಜೆಪಿ ಕಾರ್ಯಕರ್ತರು ಅಗ್ರಣಿಯರಾಗಿರುತ್ತಿದ್ದರು. ಆದರೆ ಈ ಚುನಾವಣೆಯಲ್ಲಿ ಸಂಪೂರ್ಣವಾಗಿ ಅದರ ಅನುಪಸ್ಥಿತಿ ನಾನು ಗಮನಿಸಿದ್ದೇನೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾಂಗ್ರೆಸ್‌ನವರಿಗೆ ಕಾರ್ಯಕರ್ತರು ಇಲ್ಲ. ಆದರೂ ಎನ್‌ಜಿಒಗಳ ಮೂಲಕ, ಇತರೆ ರೀತಿಯಲ್ಲಿ, ಹೇಗೋ ಪ್ರಯತ್ನ ಮಾಡಿ ಮನೆ ಮನೆಗೆ ಕರಪತ್ರ ನೀಡಿದ್ದಾರೆ, ಗ್ಯಾರಂಟಿ ಕಾರ್ಡ್‌ಗಳನ್ನು ಹಂಚುವ ಮೂಲಕ ಉತ್ತಮ ಪ್ರಯತ್ನ ಮಾಡಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
“ಹಾಗಿರುವಾಗ ಈ ಚುನಾವಣೆಯ ಫಲಿತಾಂಶ ಏನಾಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು, ನಾನು ಆ ಅಂದಾಜು ಮಾಡಲು ಸಾಧ್ಯವಿಲ್ಲ. ನಾನು ಪ್ರಾಮಾಣಿಕವಾಗಿ ಎಲ್ಲವುದರ ವಾಸ್ತವ ಅರಿತುಕೊಂಡಿರುವ ಕಾರಣ, ಏನು ನಡೆಯುತ್ತಿದೆ ಎಂದು ನೋಡಿರುವ ಕಾರಣದಿಂದಾಗಿ ಈಗಲೇ ಏನನ್ನೂ ಅಂದಾಜು ಮಾಡಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ಕರ್ನಾಟಕದಲ್ಲಿ ಬಿಜೆಪಿಗೆ ಸೋಲಿನ ಸುಳಿವು ನೀಡಿದ್ದಾರೆ.
“ಆದರೆ ನರೇಂದ್ರ ಮೋದಿ ಅವರ ಅಲೆ ಮತ್ತು ಗ್ಯಾರಂಟಿ ಕಾರ್ಡ್, ಕಾಂಗ್ರೆಸ್‌ನವರ ಪರಿಶ್ರಮ ಇವೆರಡ ನಡುವೆ ಭರ್ಜರಿಯಾದ ಹೋರಾಟ ನಡೆಯುತ್ತಿದೆ. ಹೇಗೆ ಫಲಿತಾಂಶ ಬರುತ್ತದೆ ಎಂದು ನಾವು ನೋಡಬೇಕು” ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
“ಜನರು ಉರಿ ಬಿಸಿಲಿನಲ್ಲೂ ಬಂದು ಮತ ಹಾಕಿದ್ದಾರೆ. ಉತ್ತಮ ಪ್ರಮಾಣದಲ್ಲಿ ಮತದಾನ ನಡೆದಿದೆ. ಆದರೆ ಈ ವೋಟು ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದ ವೋಟೋ ಅಥವಾ ಗ್ಯಾರಂಟಿ ಮೇಲಿನ ಆಸೆಯ ವೋಟು ಎಂದು ಜೂನ್ 4ರಂದು ತಿಳಿದು ಬರಲಿದೆ” ಎಂದು ಹೇಳಿದ್ದಾರೆ.