ದ್ವೇಷ ಭಾಷಣ ದೇಶದ್ರೋಹಿ ಹೇಳಿಕೆಗಿಂತ ಭಿನ್ನ: ಸುಪ್ರೀಂ

Source: Vb | By I.G. Bhatkali | Published on 16th November 2024, 2:28 AM | National News |

ಹೊಸದಿಲ್ಲಿ: ದ್ವೇಷ ಭಾಷಣಗಳನ್ನು ಮಾಡುವವರು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಹಾನಿಯನ್ನುಂಟು ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಳ್ಳುವಂತೆ ಎಪ್ರಿಲ್ 2023ರಲ್ಲಿ ದೇಶಾದ್ಯಂತ ಪೊಲೀಸರಿಗೆ ನಿರ್ದೇಶನಗಳನ್ನು ಹೊರಡಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅರಾಜಕತೆ ಮತ್ತು ಪ್ರತ್ಯೇಕತಾವಾದವನ್ನು ಬಹಿರಂಗವಾಗಿ ಉತ್ತೇಜಿಸುವ ದೇಶದ್ರೋಹ ಭಾಷಣಗಳ ಪ್ರವೃತ್ತಿಯನ್ನು ತಡೆಯಲು ಇಂತಹುದೇ ಕ್ರಮವನ್ನು ಕೋರಿದ್ದ ಅರ್ಜಿಯನ್ನು ಗುರುವಾರ ತಿರಸ್ಕರಿಸಿದೆ.

ಹಿಂದೂ ಸೇವಾ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾ. ಸಂಜಯ್ ಕುಮಾರ್ ಅವರ ಪೀಠವು, ದ್ವೇಷ ಭಾಷಣ ದೇಶ ದ್ರೋಹಿ ಹೇಳಿಕೆಗಳಿಗಿಂತ ಭಿನ್ನವಾಗಿದೆ ಎಂದು ಸ್ಪಷ್ಟಪಡಿಸಿತು. ಅರ್ಜಿಯು ರಾಜಕೀಯ ನಾಯಕರಿಂದ, ವಿಶೇಷವಾಗಿ ಪ್ರತಿಪಕ್ಷ ನಾಯಕರಿಂದ ರಾಷ್ಟ್ರೀಯ ಸಮಗ್ರತೆಗೆ ಹಾನಿಕಾರಕವಾದ ಮತ್ತು ಸರಕಾರದ ಭದ್ರತೆಗೆ ಬಹಿರಂಗವಾಗಿ ಬೆದರಿಕೆಗಳನ್ನು ಒಡ್ಡುವ ಪ್ರಚೋದನಕಾರಿ ಬಹಿರಂಗ ಭಾಷಣಗಳು ಮತ್ತು ಮಾಧ್ಯಮಗಳಿಗೆ ಸಂದರ್ಶನಗಳು ಹೆಚ್ಚುತ್ತಿದೆ ಎಂದು ಆರೋಪಿಸಿ, ಇದನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯದ ತುರ್ತು ಹಸ್ತಕ್ಷೇಪವನ್ನು ಕೋರಿತ್ತು.

ಆದರೆ, ದ್ವೇಷ ಭಾಷಣ ಹಾಗೂ ಜನರ ತಪ್ಪು ಅಥವಾ ಸುಳ್ಳು ಪ್ರತಿಪಾದನೆಗಳು ಅಥವಾ ಸುಳ್ಳು ಹೇಳಿಕೆಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಈ ಅರ್ಜಿಯನ್ನು ನಾವು ಒಪ್ಪಿಕೊಂಡರೆ ಅದು ಇಂತಹುದೇ ಅರ್ಜಿಗಳ ಮಹಾಪೂರಕ್ಕೆ ಕಾರಣವಾಗುತ್ತದೆ ಎಂದು ಹೇಳಿತು.

“ದ್ವೇಷ ಭಾಷಣಗಳು ಸಾಮಾಜಿಕ ಸಾಮರಸ್ಯಕ್ಕೆ ಹಾನಿಯನ್ನುಂಟು ಮಾಡುವುದರಿಂದ ಅವುಗಳನ್ನು ತಡೆಯಲು ಕೋರಿದ್ದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಅಂಗೀಕರಿಸಿತ್ತು. ಮಾರ್ಗಸೂಚಿಗಳನ್ನು ನಿಗದಿಗೊಳಿಸಲಾಗಿದ್ದು, ಅವುಗಳ ಉಲ್ಲಂಘನೆಗಾಗಿ ನ್ಯಾಯಾಂಗ ನಿಂದನೆ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ನೀವು ಕೇಳಿರುವುದು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ನಾವು ಅರ್ಜಿಯನ್ನು ಅಂಗೀಕರಿಸಿದರೆ ಅದು ಇಂತಹ ಅರ್ಜಿಗಳ ಮಹಾಪೂರಕ್ಕೆ ಕಾರಣವಾಗುತ್ತದೆ ಮತ್ತು ವಿಷಯವನ್ನು ನಿಭಾಯಿಸುವುದು ಅಸಾಧ್ಯವಾಗುತ್ತದೆ 'ಎಂದು ಮು.ನ್ಯಾ. ಖನ್ನಾ ನೇತೃತ್ವದ ಪೀಠವು ತಿಳಿಸಿತು.

ಅರ್ಜಿಯನ್ನು ವಜಾಗೊಳಿಸಿದ ಪೀಠವು, ಅರ್ಜಿದಾರರು ಯಾವುದೇ ನಿರ್ದಿಷ್ಟ ಕುಂದುಕೊರತೆಯನ್ನು ಹೊಂದಿದ್ದರೆ ಸೂಕ್ತ ವೇದಿಕೆಯನ್ನು ಸಂಪರ್ಕಿಸಬಹುದು ಎಂದು ಹೇಳಿತು.

Read These Next

ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ

ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...

ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...