ಭಟ್ಕಳ ಆನಂದ ಆಶ್ರಮ ಕಾನ್ವೆಂಟ್ ಶಾಲೆಯಲ್ಲಿ ಸುವರ್ಣ ಮಹೋತ್ಸವ
ಭಟ್ಕಳ: ನಗರದ ಆನಂದ ಆಶ್ರಮ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅರ್ಸುಲೈನ್ ಫ್ರಾನ್ಸಿಸ್ಕನ್ ಮಂಗಳೂರಿನ ಸುಪೀರಿಯ್ ಜನರಲ್ ಹಾಗೂ ಅಧ್ಯಕ್ಷೆ ರೆ.ಸಿಸ್ಟರ್ ಮಿಲ್ಲಿ ಫೆರ್ನಾಂಡೀಸ್ ಸುವರ್ಣ ಮಹೋತ್ಸವ ಲಾಂಚನದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಂಡಳ್ಳಿ ಲೂಡ್ಸ್ ಮಾತಾ ದೇವಾಲಯದ ಪ್ಯಾರಿಸ್ ಪ್ರೀಸ್ಟ್ ರೆ.ಫಾ. ಪ್ರೇಮಕುಮಾರ್ ಡಿಸೋಜ ದೇವರ ಸ್ತುತಿಯನ್ನು ಪಠಿಸುವ ಮೂಲಕ ಪ್ರಾರ್ಥಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಬ್ಬಡ್ಡಿ ತಂಡವನ್ನು ಗೌರವಿಸಿ, ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ ಮಂಗಳೂರಿನ ಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯು ಕೇವಲ ಭಟ್ಕಳದಲ್ಲಿ ಮಾತ್ರವಲ್ಲಿ ದೇಶದೆಲ್ಲೆಡೆ, ವಿದೇಶದಲ್ಲಿಯೂ ಕೂಡಾ 125 ವಿದ್ಯ ಸಂಸ್ಥೆಗಳನ್ನು ಹೊಂದಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಒಂದು ಮಗುವಿಗೆ ಉತ್ತಮ ಶಿಕ್ಷಣವನ್ನು ನೀಡಿದರೆ ಅದು ಮುಂದೆ ಸಮಾಜಕ್ಕೆ ಆಸ್ತಿಯಾಗುತ್ತದೆ. ನಾನು ಶಿಕ್ಷಣಕ್ಕೆ ಪ್ರಥಮ ಆಧ್ಯತೆಯನ್ನು ನೀಡುತ್ತಿದ್ದು ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ಉದ್ದೇಶವಾಗಿದೆ. ಹಿಂದೆ ಹಣವಿದ್ದವರಿಗೆ ಮಾತ್ರ ಶಿಕ್ಷಣ ಎನ್ನುವ ಕಾಲವೊಂದಿತ್ತು. ಆದರೆ ಇಂದು ಕಡು ಬಡವರ ಮಕ್ಕಳೂ ಕೂಡಾ ಉನ್ನತ ವ್ಯಾಸಾಂಗ ಮಾಡುವಂತಹ ವಾತಾವರಣ ಇದೆ.
ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆಯಾದಲ್ಲಿ ಸಹಾಯ ಸಹಕಾರ ಮಾಡಲು ಸಿದ್ಧನಿದ್ದೇನೆ ಎಂದೂ ಅವರು ಹೇಳಿದರು.
ಭಟ್ಕಳದಲ್ಲಿ ವಿದ್ಯಾ ಸಂಸ್ಥೆಯು 50 ವಸಂತಗಳನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರೆ ಭಟ್ಕಳದ ಜನತೆ ಭಾಗ್ಯವಂತರು. ಅಂದು ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆನ್ನುವ ಹಂಬಲದಿಂದ ಶಾಲೇ ಆರಂಭಿಸಿದ ಅವರ ಕಾರ್ಯ ಶ್ಲಾಘನೀಯ. ಆನಂದ ಆಶ್ರಮ ಶಾಲೆಯಲ್ಲಿನ ಶಿಸ್ತು, ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ತಯಾರು ಮಾಡುವ ಅವರ ಸಂಸ್ಕಾರ ಶ್ಲಾಘನೀಯವಾದದ್ದು ಅಲ್ಲದೇ ಇಲ್ಲಿ ಕುಳಿತಿರುವ ಪಾಲಕರಲ್ಲಿಯೂ ಕೂಡಾ ಶಿಸ್ತು ನೋಡಿ ನಮ್ಮೂರಿನ ಈ ಶಾಲೆಯ ಕುರಿತು ಹೆಮ್ಮೆಯೆನಿಸುತ್ತಿದೆ ಎಂದರು. ಆನಂದ ಆಶ್ರಮ ಕಾನ್ವೆಂಟ್‍ನಲ್ಲಿ ಓದಿದ ಮಕ್ಕಳು ಇಂದು ಪ್ರಪಂಚದಾದ್ಯಂತ ಹರಡಿಕೊಂಡಿದ್ದು ಇದು ನಮ್ಮೂರಿನ ಹೆಮ್ಮೆ ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಶಾಲೆಯ ಹಳೆವಿದ್ಯಾರ್ಥಿ ಹಾಗೂ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಹಾಗೂ ಫ್ರೊ. ಶಶಿರಶ್ಮಿ ಆಚಾರ್ಯ ಮಾತನಾಡಿ ಆನಂದ ಆಶ್ರಮ ಕಾನ್ವೆಂಟ್ ಶಾಲೆಯಲ್ಲಿ ಹಾಕಿಕೊಟ್ಟ ಭದ್ರ ಬುನಾದಿಯು ಮುಂದಿನ ವಿದ್ಯಾಭ್ಯಾಸಕ್ಕೆ ಅತ್ಯಂತ ಸಹಕಾರಿಯಾಗಿದ್ದು ನಾನೋರ್ವ ಆನಂದ ಆಶ್ರಮ ಕಾನ್ವೆಂಟ್ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ, ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯ ಕಾರ್ಯದರ್ಶಿ ರೆ.ಸಿಸ್ಟರ್ ಫಿಲೋಮಿನಾ ನೊರೊನ್ಹ, ಪ್ರೊವಿನ್ಸಿಯಲ್ ಸುಪಿರಿಯರ್ ರೆ.ಸಿಸ್ಟರ್ ಕ್ಲಾರಾ ಮೆನೆಜಸ್, ಉಪ ಕಾರ್ಯದರ್ಶಿ ರೆ.ಸಿಸ್ಟಿರ್ ಜ್ಯುಲಿಯಾನಾ ಪಾಯ್ಸ, ಪಾಲಕ, ಶಿಕ್ಷಕ ಸಮಿತಿ ಉಪಾಧ್ಯಕ್ಷ ನಾಗರಾಜ ಈ.ಎಚ್., ಕೆ.ಟಿ.ಎಫ್.ಎಫ್. ನಿರ್ದೇಶಕ ಹಾಗೂ ಹಳೆವಿದ್ಯಾರ್ಥಿ ತನ್ವೀರ್ ಕಾಸರಗೋಡ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ ಅವರನ್ನ ಅರ್ಸುಲೈನ್ ಪ್ರಾನ್ಸಿಸ್ಕನ್ ಸಂಸ್ಥೆಯ ವತಿಯಿಂದ ಅಧ್ಯಕ್ಷೆ ಸಿಸ್ಟರ್ ಮಿಲ್ಲಿ ಫೆರ್ನಾಂಡೀಸ್ ಸನ್ಮಾನಿಸಿದರು. ಸಿಸ್ಟರ್ ಮಿಲ್ಲಿ ಫೆರ್ನಾಂಡೀಸ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಆನಂದ ಆಶ್ರಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕಿಯರಾಗಿ ಸೇವೆ ಸಲ್ಲಿಸಿದವರನ್ನು, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಲವೀನಾ ಡಿಸೋಜ ಅವರನ್ನ ಹಾಗೂ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅರ್ಸುಲೈನ್ ಫ್ರಾನ್ಸಿಸ್ಕರ್ ಸಂಸ್ಥೆಯಡಿಯಲ್ಲಿ ಬರುವ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು, ಪಾಲಕ-ಶಿಕ್ಷಕ ಸಮಿತಿಯ ಸದಸ್ಯರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನಿತರನ್ನು ಪೆಟ್ರಿಕ್ ಟೆಲ್ಲಿಸ್, ಆಶಾ, ಮೂಕಾಂಬಿಕಾ, ವನಿತಾ, ಸಿಸ್ಟರ್ ಟ್ರೆಸಿ ಡಿಮೆಲ್ಲೊ,
ಕಾರ್ಯಕ್ರಮವು ಆನಂದ ಆಶ್ರಮ ಶಾಲೆಯ ವಿದ್ಯಾರ್ಥಿಗಳ ಸ್ವಾಗತ ನೃತ್ಯದಿಂದ ಆರಂಭವಾಯಿತು. ರೆ.ಸಿಸ್ಟರ್ ಲವೀನಾ ಜ್ಯೋತಿ ಡಿಸೋಜ ಸ್ವಾಗತಿಸಿ ಕಾನ್ವೆಂಟ್‍ನ ಚಟುವಟಿಕೆಗಳನ್ನು ಪರಿಚಯಿಸಿದರು. ರೆ. ಸಿಸ್ಟರ್ ಲುಸಿ ಡಿಸೋಜ ಸ್ವಾಗತಿಸಿದರು.
ಸಿಸ್ಟರ್ ಶಾಂತಿ ಡಿಸೋಜ ಹಾಗೂ ಆಂಟಿನಿ ಮಿರಾಂಡ ನಿರ್ವಹಿಸಿದರು. ಜೆಸ್ಸಿಂತಾ ಪಿಂಟೋ ವಂದಿಸಿದರು.
Golden Jubilee Celebrations Commence at Bhatkal Anand Ashram Convent School