ಭಟ್ಕಳ: ಇಲ್ಲಿನ ಸದ್ಭಾವನಾ ಮಂಚ್ ವತಿಯಿಂದ ವಿವಿಧ ಸಾಮಾಜಿಕ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಭಾನುವಾರದಂದು “ಸಬ್ಕೋ ಸನ್ಮತಿ ದೇ ಭಗವಾನ್” ಎಂಬ ಘೋಷವಾಕ್ಯದೊಂದಿಗೆ ಸಾಮಾರಸ್ಯದೆಡೆಗೆ ಸದ್ಭಾವನಾ ನಡಿಗೆ ಜಾಥಾವನ್ನು ನಡೆಸುವುದರ ಮೂಲಕ ವಿಶೇಷ ರೀತಿಯಲ್ಲಿ ಗಾಂಧೀ ಸ್ಮೃತಿ ಕಾರ್ಯಕ್ರಮ ನಡೆಯಿತು.
ಶಮ್ಸೂದ್ದೀನ್ ವೃತ್ತದ ಮೂಲಕ ಆರಂಭಗೊAಡ ಸಾಮರಸ್ಯ ನಡಿಗೆ ಹಳೆ ತಹಸಿಲ್ದಾರ್ ಕಚೇರಿಯ ಪಕ್ಕದ ಮೈದಾನದಲ್ಲಿ ಸಮಾಪ್ತಿಗೊಂಡಿತು.
ಸಾಮರಸ್ಯ ನಡಿಗೆಯನ್ನುದ್ದೇಶಿ ಮಾತನಾಡಿದ ಭಟ್ಕಳ ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ್ ಕುಮಾರ್, ಸಮಾನ ಮನಸ್ಕರು ಸೇರಿ ನಮ್ಮ ಊರಿನಲ್ಲಿ, ನಮ್ಮ ಜಿಲ್ಲೆಯಲ್ಲಿ, ನಮ್ಮ ದೇಶದಲ್ಲಿ ಶಾಂತಿ, ಸೌಹಾರ್ದತೆಯನ್ನು ಉಂಟು ಮಾಡುವ ಉದ್ದೇಶದೊಂದಿಗೆ ಇಂದು ಸಾವiರಸ್ಯ ನಡಿಗೆಯನ್ನು ಹಮ್ಮಿಕೊಂಡಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದ ಅವರು, ನಮ್ಮ ಅಕ್ಕಪಕ್ಕದಲ್ಲಿ ದಿನಾಲೂ ಒಂದಿಲ್ಲೊAದು ರೀತಿಯಲ್ಲಿ ಗಲಭೆ,ಗೊಂದಲಗಳು ಸೃಷ್ಟಿಯಾಗುತ್ತಿವೆ. ಇದು ನಿಲ್ಲಬೇಕಾದರೆ ಗಾಂಧೀಜಿಯವರ ಶಾಂತಿ ಮಂತ್ರ ‘ಸಬ್ಕೋ ಸನ್ಮತಿ ದೇ ಭಗವಾನ’ ಎಂಬುದನ್ನು ಅರ್ಥ ಮಾಡಿಕೊಂಡು ಬದುಕಬೇಕು ಎಂದು ಕರೆ ನೀಡಿದರು. ಗಾಂಧೀಜಿಯವರಿಗೆ ಉತ್ತರಕನ್ನಡ ಜಿಲ್ಲೆಯ ನಂಟಿದೆ. ಇಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಅವರು ಪಾಲ್ಗೊಂಡಿದ್ದರು. ಹಾಗಾಗಿ ನಾವು ಇಂದು ಗಾಂಧಿಯವರಿಗೆ ಬಹಳ ಹತ್ತಿರವಾಗಬೇಕಿದೆ. ಅವರ ಕನಸನ್ನು ನನಸಾಗಿಲು ನಾವು ಪ್ರಯತ್ನಪಡಬೇಕಾಗಿದೆ ಎಂದರು.
ಅಂಜುಮನ್ ಶಿಕ್ಷಣ ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಚಿಂತಕ ಪ್ರೋ. ಆರ್.ಎಸ್.ನಾಯಕ ಮಾತನಾಡಿ, ಸತ್ಯ, ಅಹಿಂಸೆ, ಸಾಮಾರಸ್ಯಗಳನ್ನು ಸಾರಿದ ಗಾಂಧೀಜಿಯವರ ತತ್ವ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಕಾಲದ ಬೇಡಿಕೆಯಾಗಿದೆ, ಭಾರತ ಜಗತ್ತಿನಲ್ಲಿ ಪ್ರಗತಿ ಹೊಂದಲು ಇಲ್ಲಿನ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸಾಮರಸ್ಯವೇ ಕಾರಣವಾಗಿದೆ ಎಂದರು.
ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಮಾತನಾಡಿ, ಗಾಂಧೀಯವರ ಸಿದ್ಧಾಂತ ಮತ್ತು ಅವರ ದೃಷ್ಟಿಕೋನವನ್ನು ಹಿಡಿಕೊಂಡು ದೇಶದಲ್ಲಿ ಸಾಮರಸ್ಯ ತರಬೇಕಾಗಿದೆ. ಅವರು ಅನ್ಯಾಯಕ್ಕೆ ಬದಲಾಗಿ ನ್ಯಾಯ, ದ್ವೇಷಕ್ಕೆ ಬದಲು ಪ್ರೇಮವನ್ನು ಬೆಳೆಸಿದರು. ಈ ಜಗತ್ತನ್ನು ಸೃಷ್ಟಿ ಮಾಡಿದವನು ಕೇವಲ ಓರ್ವನೇ ಆಗಿದ್ದು, ನಮ್ಮಲ್ಲಿ ಪರಸ್ಪರ ದ್ವೇಷ, ವೈಷಮ್ಯವನ್ನು ಮರೆತು ಬಾಳಬೇಕು, ನಾವೆಲ್ಲ ಒಂದೇ ಪರಿವಾರವಾಗಿ ಬೆಳೆಯಬೇಕು ಈ ಹಿನ್ನೆಲೆಯಲ್ಲಿ ಭಾರತ ಮಹಾನ್ ಆಗಿದ್ದು ಇದು ಗಾಂಧೀಜಿಯವರ ಕೊಡುಗೆಯಾಗಿದೆ ಎಂದರು.
ನಾಮಾಧಾರಿ ಸಮಾಜದ ಪ್ರಮುಖರಾದ ಎಂ.ಆರ್.ನಾಯ್ಕ, ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಎಸ್.ಐ.ಓ ವಿದ್ಯಾರ್ಥಿ ಮುಖಂಡ ಮುಹಮ್ಮದ್ ತಾಲಿಷ್ ಮಾತನಾಡಿದರು.
ಸಾಮರಸ್ಯ ನಡಿಗೆಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಾದಿಕ್ ಪಿಲ್ಲೂರ್, ಖಲಿಫಾ ಜಮಾಅತುಲ್ ಮುಸ್ಲಿಮೀನ್ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಜಾನ್ ಮೊಹತೆಶಮ್, ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜ್ ಪ್ರಾಂಶುಪಾಲ ವೀರೇಂದ್ರ ಶಾನುಭಾಗ, ಜೆಸಿಐ ಪ್ರಮುಖ ಅಬ್ದುಲ್ ಜಬ್ಬಾರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮನಮೋಹನ್ ನಾಯ್ಕ, ಭಟ್ಕಳ ಮುಸ್ಲಿಮ್ ಯುಥ್ ಫೆಡರೇಷನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ನದ್ವಿ, ನೂರ್ ಜಾಮಿಯಾ ಮಸೀದಿಯ ಇಮಾಮ್ ಖತೀಬ್ ಮೌಲಾನ ನೂರುಲ್ ಅಮೀನ್ ನದ್ವಿ, ಜ.ಇ.ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಪುರಸಭೆಯ ಮಾಜಿ ಅಧ್ಯಕ್ಷ ಮುಹಮ್ಮದ್ ಸಾದಿಖ್ ಮಟ್ಟಾ, ತಂಝೀಮ್ ಸಂಸ್ಥೆಯ ಜೈಲಾನಿ ಶಾಬಂದ್ರಿ ಮುಂತಾದವರು ಭಾಗವಹಿಸಿದ್ದರು.
ಭಟ್ಕಳ ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.