ಜಾರ್ಖಂಡ್: ಹೇಮಂತ್ ಸೊರೇನ್‌ಗೆ ಹೈಕೋರ್ಟ್ ಜಾಮೀನು

Source: Vb | By I.G. Bhatkali | Published on 29th June 2024, 8:16 AM | National News |

ರಾಂಚಿ: ಭೂವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಿಗೆ ರಾಜ್ಯ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ಸೊರೇನ್ ಈ ಪ್ರಕರಣದಲ್ಲಿ ತಪ್ಪಿತಸ್ಥರಲ್ಲ ಎನ್ನುವುದನ್ನು ನ್ಯಾಯಾಲಯ ಕಂಡುಕೊಂಡಿದೆ ಎಂದು ಅವರ ವಕೀಲ ಅರುನಬ್ ಚೌಧರಿ ಹೇಳಿದರು.

ಹೈಕೋರ್ಟ್ ಜೂನ್ 13ರಂದು ಸೊರೇನ್‌ರ ಜಾಮೀನು ಅರ್ಜಿ ಕುರಿತ ತೀರ್ಪನ್ನು ಕಾದಿರಿಸಿತ್ತು.

“ಹೈಕೋರ್ಟ್ ಸೊರೇನ್‌ರಿಗೆ ಜಾಮೀನು ನೀಡಿದೆ. ಅವರು ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಾಣುವಂತೆ ತಪ್ಪಿತಸ್ಥರಲ್ಲ, ಹಾಗಾಗಿ ಜಾಮೀನಿನಲ್ಲಿರುವಾಗ ಅರ್ಜಿದಾರರು ಅಪರಾಧ ಮಾಡುವ ಸಾಧ್ಯತೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ' ಎಂದು ಪಿಟಿಐಯೊಂದಿಗೆ ಮಾತನಾಡಿದ ವಕೀಲರು ಹೇಳಿದರು.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಮ್ಎಮ್)ದ ಕಾರ್ಯಕಾರಿ ಅಧ್ಯಕ್ಷರಾಗಿರುವ ಸೊರೇನ್‌ರನ್ನು ಜಾರಿ ನಿರ್ದೇಶನಾಲಯವು ಜನವರಿ 31ರಂದು ಬಂಧಿಸಿತ್ತು.

ರಾಜಕೀಯ ಪ್ರೇರಿತ ಮತ್ತು ಸುಳ್ಳು ಮೊಕದ್ದಮೆಯಲ್ಲಿ ಸೊರೇನ್‌ರನ್ನು ಅನ್ಯಾಯವಾಗಿ ಸಿಲುಕ್ಕಿಸಿಹಾಕಲಾಗಿದೆ ಎಂಬುದಾಗಿ ಅವರ ಪರವಾಗಿ ಹಿರಿಯ ವಕೀಲೆ ಮೀನಾಕಿ ಅರೋರ ಹೈಕೋರ್ಟ್‌ನಲ್ಲಿ ವಾದಿಸಿದ್ದರು.

ರಾಂಚಿಯಲ್ಲಿ 8.86 ಎಕರೆ ಜಮೀನನ್ನು ಪಡೆಯಲು ಅವರು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯದಲ್ಲಿ ಆರೋಪಿಸಿತ್ತು.

ಅಕ್ರಮ ಭೂ ವ್ಯವಹಾರದಲ್ಲಿ ಹೇಮಂತ್ ಸೊರೇನ್ ಶಾಮೀಲಾಗಿರುವುದನ್ನು ಸಾಕ್ಷಿಗಳು ಖಚಿತಪಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ವಕೀಲ ಎಸ್.ವಿ. ರಾಜು ಹೇಳಿದ್ದರು.

ಅವರ ಇನ್ನೋರ್ವ ವಕೀಲ ಕಪಿಲ್ ಸಿಬಲ್ ವಾದಿಸಿದ್ದರು. ಒಂದು ವೇಳೆ, ಆರೋಪಗಳು ನಿಜವೇ ಆಗಿದ್ದರೂ, ಅವುಗಳು ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಸಿವಿಲ್ ವ್ಯಾಜ್ಯವೇ ಹೊರತು ಕ್ರಿಮಿನಲ್ ಚಟುವಟಿಕೆಯಲ್ಲ ಎಂದು ಅವರು ಹೇಳಿದ್ದರು.

ಅನುಷ್ಠಾನ ನಿರ್ದೇಶನಾಲಯವು ಬಂಧಿಸಿದ ಬಳಿಕ, ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ನಿಷ್ಠಾವಂತ ಚಂಪೈ ಸೊರೇನ್ ನೂತನ ಮುಖ್ಯಮಂತ್ರಿಯಾಗಿದ್ದಾರೆ.

ತನ್ನ ಬಂಧನವನ್ನು ಪ್ರಶ್ನಿಸುವ ಅವರ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಮೊದಲು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಆದರೆ, ಅನುಷ್ಠಾನ ನಿರ್ದೇಶನಾಲಯವು ಸಲ್ಲಿಸಿರುವ ದೂರನ್ನು ವಿಶೇಷ ನ್ಯಾಯಾಲಯವೊಂದು ಗಣನೆಗೆ ತೆಗೆದುಕೊಂಡಿದೆ ಎನ್ನುವ ಅಂಶವನ್ನು ಸೊರೇನ್ ಬಹಿರಂಗಪಡಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ, ಸೊರೇನ್ ಮೇ 22ರಂದು ತನ್ನ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಂಡಿದ್ದರು.

ರಾಂಚಿಯಲ್ಲಿರುವ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನ್ಯಾಯಾಲಯವೂ ಮೇ 13ರಂದು ಸೊರೇನ್ ರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಬಳಿಕ ಸೊರೇನ್ ಮೇ 27ರಂದು ಹೈಕೋರ್ಟ್‌ನಲ್ಲಿ ಹೊಸದಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈಗ ಹೈಕೊರ್ಟ್ ಅವರಿಗೆ ಜಾಮೀನು ನೀಡಿದೆ.

Read These Next

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...