ಭಟ್ಕಳ: ಗುರುವಾರ ಹೊನ್ನಾವರದ ಟೋಂಕಾದಲ್ಲಿ ಮೀನುಗಾರರ ಮೇಲೆ ಪೊಲೀಸ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸುಮಾರು ೨೦೦ಕ್ಕೂ ಹೆಚ್ಚು ಮೀನುಗಾರರು ಮುರುಡೇಶ್ವರದಲ್ಲಿರುವ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ್ ವೈದ್ಯರ ಮನೆ ಮುಂದೆ ಸುಮಾರು ೩ ತಾಸು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಗಣಪತಿ ತಾಂಡೇಲ, ಸಚಿವರು ಈ ಮುಂಚೆ ನಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಸರ್ಕಾರ ಪೊಲೀಸರನ್ನು ಬಳಸಿಕೊಂಡು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಹಾಗಾಗಿ ನಾವು ಸಚಿವರ ಬಳಿ ಬಂದಿದ್ದೇವೆ. ಅವರು ಕೊಟ್ಟ ಮಾತನ್ನು ಈಡೇರಿಸಿಕೊಡಬೇಕೆಂದು ಆಗ್ರಹಿಸಿದರು.
ಉಷಾ ಎನ್ನುವ ಮೀನುಗಾರ ಮಹಿಳೆ ಮಾತನಾಡಿ, ಪೊಲೀಸರು ನಮ್ಮ ಜನರನ್ನು ಹಿಡಿಕೊಂಡು ಹೋಗಿದ್ದಾರೆ. ನಮ್ಮ ಮನೆಮಠ ಬಿಟ್ಟು ಇಲ್ಲಿ ಬಂದಿದ್ದೇವೆ ಸಚಿವರು ನಮ್ಮ ಸಮಸ್ಯೆಯನ್ನು ಆಲಿಸಬೇಕು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
ಸಚಿವ ವೈದ್ಯರು ಗುರುವಾರ ಸಂಜೆ ಬೆಂಗಳೂರು ತಲುಪಿದ್ದು ಅವರ ಅನುಪಸ್ಥಿತಿಯಲ್ಲಿ ಸಚಿವರ ಪತ್ನಿ ಪುಷ್ಪಲತಾ ರವರು ಮೀನುಗಾರರೊಂದಿಗೆ ಮಾತನಾಡಿ ಸಮಾಧಾನ ಪಡಿಸಿದರು. ಅವರ ಅಳಲನ್ನು ಕೇಳಿಸಿಕೊಂಡರು. ಮೀನುಗಾರರ ಕುಟುಂಬಕ್ಕಾದ ಅನ್ಯಾಯವನ್ನು ಸರಿಪಡಿಸುವಂತೆ ಸಚಿವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಪುಷ್ಪಲತಾ ರವರ ಮಾತು ಕೇಳಿದ ಪ್ರತಿಭಟನಕಾರರು ನಾಳೆ ಪೊಲೀಸರು ಬಂದು ಮತ್ತೇ ತೊಂದರೆ ಕೊಟ್ಟರೆ ನಾವು ಊರಿನ ಎಲ್ಲ ಜನರು ಮನೆಮಾರುಗಳನ್ನು ಬಿಟ್ಟು ಸಚಿವರ ಮನೆ ಮುಂದೆ ಬಂದು ಕುಳಿತುಕೊಳ್ಳುವದಾಗಿ ತಿಳಿಸಿದರು.
ಗ್ರಾಮದಲ್ಲಿರುವ ಉದ್ದೇಶಿತ ಖಾಸಗಿ ಬಂದರಿಗೆ ಉತ್ತಮ ಸಂಪರ್ಕ ಕಲ್ಪಿಸಲು ಬಂದರುಗಳ ನಿರ್ದೇಶಕರು ಮತ್ತು ಕರ್ನಾಟಕ ಕಡಲ ಮಂಡಳಿಯಿಂದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬಂದರು ಮತ್ತು ಅದರ ಸಂಬಂಧಿತ ಚಟುವಟಿಕೆಗಳು ಪರಿಸರ ಸೂಕ್ಷ್ಮ ಶರಾವತಿ ನದಿ ಮುಖಜ ಭೂಮಿ ಮತ್ತು ಟೊಂಕದ ಕಡಲತೀರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಸ್ಥಳೀಯ ಮೀನುಗಾರರು ಬಂದರು ಸ್ಥಾಪನೆಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT), ಚೆನ್ನೈ ಆದೇಶಗಳು ಮತ್ತು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (KSCZMA) ಅನುಮೋದನೆಯ ಬೆಂಬಲದೊಂದಿಗೆ, HPPL ಬಂದರು ಪ್ರದೇಶವನ್ನು ಮುಖ್ಯ ರಸ್ತೆಯೊಂದಿಗೆ ಸಂಪರ್ಕಿಸುವ 2.1-ಕಿಮೀ ಕಚ್ಚಾ ರಸ್ತೆಯನ್ನು ಡಾಂಬರು ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಹೊಸದಾಗಿ ಸಮುದ್ರದ ಹೈಟೆಡ್ ಲೈನ್(HTL) ಗುರುತು ಕಾರ್ಯಕ್ಕಾಗಿ ಸರ್ವೇ ನಡೆದಿದೆ. ಈ ಹಿಂದೆ ೪೦ಮೀ ಇದ್ದುದ್ದನ್ನು ಈಗ ೫೦ಮೀಟರ್ ನಿಗದಿ ಪಡಿಸಿದ್ದಾರೆ. ಸಿ.ಆರ್.ಝೆಡ್ ನಿಂದ ೬೦೦ ಕುಟುಂಬಗಳಿಗೆ ನೀಡಿದ ಸೈಟುಗಳಲ್ಲಿಯೇ ರಸ್ತೆ ನಿರ್ಮಾಣಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಇದರಿಂದಾಗಿ ಮೀನುಗಾರರ ಕುಟುಂಬ ಬೀದಿಪಾಲಾಗುತ್ತಿದೆ ಎಂಬುದು ಮೀನುಗಾರರ ವಾದವಾಗಿದೆ.